ಕಾಗದ, ಪ್ಲಾಸ್ಟಿಕ್ ರಾಷ್ಟ್ರಧ್ವಜ ನಿಷೇಧಕ್ಕೆ ಆಗ್ರಹ
ಶಿವಮೊಗ್ಗ: ಕಾಗದ ಹಾಗೂ ಪ್ಲಾಸ್ಟಿಕ್ ರಾಷ್ಟ್ರಧ್ವಜ ನಿಷೇಧಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸ್ವಾತಂತ್ರ್ಯ ದಿನಾಚರಣೆ, ಗಣರಾಜೋತ್ಸವ ದಿನದಂದು ಕಾಗದ ಮತ್ತು ಪ್ಲಾಸ್ಟಿಕ್ ಧ್ವಜವನ್ನು ಬಳಸಿ ನಂತರ ಚರಂಡಿ ಮತ್ತು ರಸ್ತೆಗಳಲ್ಲಿ ಬೀಸಾಡಲಾಗುತ್ತಿದೆ. ಇದು ರಾಷ್ಟ್ರಕ್ಕೆ, ರಾಷ್ಟ್ರ ಧ್ವಜಕ್ಕೆ ಮಾಡಿದ ದೊಡ್ಡ ಅಪಮಾನ. ಈ ಸಂಬಂಧ ಪ್ರತಿ ಸ್ವಾತಂತ್ರ್ಯ ಹಾಗೂ ಗಣರಾಜೋತ್ಸವ ದಿನಾಚರಣೆ ಸಂದರ್ಭದಲ್ಲಿ ಪ್ಲಾಸ್ಟಿಕ್ ಧ್ವಜ ನಿಷೇಧಕ್ಕೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಸರ್ಕಾರಕ್ಕೆ ಮನವಿ ಮಾಡಿಕೊಂಡು ಬರುತ್ತಿದೆ. ಆದರೆ, ಸರ್ಕಾರ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.
ಸರ್ಕಾರ ವಿಫಲ: ರಾಷ್ಟ್ರಧ್ವಜ ಹಾಗೂ ಬಿಲ್ಲೆಗಳಿಗೆ ಪ್ಲಾಸ್ಟಿಕ್ ಬಳಸಬಾರದು ಎಂಬ ಕೇಂದ್ರೀಯ ಗೃಹ ಮಂತ್ರಾಲಯದ ಕಟ್ಟುನಿಟ್ಟಿನ ಆದೇಶವಿದೆ. ಆದರೆ ಇಲ್ಲಿಯವರೆಗೂ ಈ ನಿಯಮದ ಸಮರ್ಪಕವಾಗಿ ರಾಷ್ಟ್ರದಲ್ಲಿ ಪಾಲನೆ ಆಗುತ್ತಿಲ್ಲ. ಅಲ್ಲದೇ ಇದನ್ನು ಕಾರ್ಯರೂಪಕ್ಕೆ ತರುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಪ್ರತಿಭಟನಾಕಾರರು ದೂರಿದರು.
ರಾಷ್ಟ್ರಧ್ವಜದ ಅವಮಾನ ಮತ್ತು ವಿಡಂಬನೆಯಾಗುವುದು, ರಾಷ್ಟ್ರೀಯ ಗೌರವ ಪ್ರತೀಕಗಳ ದುರುಪಯೋಗ ತಡೆಯುವ ಕಾಯ್ದೆ 1950 ಕಲಂ 2 ಮತ್ತು 5ರ ಅನುಸಾರ ಹಾಗೂ ರಾಷ್ಟ್ರಗೌರವ ಅವಮಾನ ನಿರ್ಬಂದ ಅಧಿನಿಯಮ 1971 ಕಲಂ 2ರ ಅನುಸಾರ ಹಾಗೂ ಬೋಧಚೆಹ್ನೆ ಹಾಗೂ ಹೆಸರುಗಳನ್ನು ಅಸಭ್ಯವಾಗಿ ಬಳಸುವುದು ಈ ಕಾಯ್ದೆಗಳ ಅನುಸಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದರು.
ಕೂಡಲೇ ಸರ್ಕಾರ ಪ್ಲಾಸ್ಟಿಕ್ ರಾಷ್ಟ್ರಧ್ವಜ ಹಾಗೂ ಬಿಲ್ಲೆ ತಯಾರಿಕೆಗೆ ನಿರ್ಬಂಧ ಹೇರಬೇಕು. ಇದನ್ನು ಉತ್ಪಾದಿಸುವವರು, ವಿತರಕರು ಹಾಗೂ ಮಾರಾಟಗಾರರ ಮೇಲೆ ಪೊಲೀಸರು ದಾಳಿ ಮಾಡಿ ಕಾನೂನು ಕ್ರಮಕೈಗೊಳ್ಳಬೇಕು. ಉಲ್ಘಂಘನೆ ಮಾಡುವವರ ವಿರುದ್ಧ ರಾಷ್ಟ್ರಧ್ವಜ ಅಪಮಾನ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮುಕುಂದ ಮೊಗೇರ್ ಮತ್ತಿತರರು ಇದ್ದರು.