ದುಷ್ಟಶಕ್ತಿ ವಿರುದ್ಧ ಧ್ವನಿ ಎತ್ತಿದ ಮೊದಲಿಗ
ಶಿವಮೊಗ್ಗ: ಇಂದು ಯಾವ ರೀತಿ ಜಾತಿ ಹೆಸರಿನಲ್ಲಿ ಸಮಾಜವನ್ನು ಛಿದ್ರ ಮಾಡುವ ಶಕ್ತಿಗಳು ಇರುವಂತೆ 12ನೇ ಶತಮಾನದಲ್ಲೂ ಇದ್ದರು. ಅಂತಹವರ ವಿರುದ್ಧ ಧ್ವನಿ ಎತ್ತಿದ ಮೊದಲಿಗ ನಿಜಶರಣ ಅಂಬಿಗರ ಚೌಡಯ್ಯ ಎಂದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆಯುವ ದುಷ್ಟಶಕ್ತಿಗಳ ವಿರುದ್ಧ ತಮ್ಮ ವಚನಗಳ ಮೂಲಕ ನಿಷ್ಟುರವಾಗಿ ಪ್ರತಿಭಟಿಸಿದ ಮೊದಲ ಶರಣ ನಿಜಶರಣ ಅಂಬಿಗರ ಚೌಡಯ್ಯ ಎಂದು ಪ್ರತಿಪಾದಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ, ಸಮಾಜ ಕಲ್ಯಾಣ ಇಲಾಖೆ ಮತ್ತು ವಾರ್ತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಸೋಮವಾರ ಬೆಳಗ್ಗೆ ಆಯೋಜಿಸಲಾದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ಹಿಂದಿನ ಸರ್ಕಾರ ಅಂಬಿಗರ ಚೌಡಯ್ಯ ದಿನಾಚರಣೆ ಆಚರಿಸಲು ಹಿಂದೇಟು ಹಾಕುತ್ತಿತ್ತು. ಆದರೆ ಬಿಜೆಪಿ ರಾಜ್ಯಾದ್ಯಂತ ನಿಜಶರಣ ಅಂಬಿಗರ ಚೌಡಯ್ಯ ದಿನಾಚರಣೆ ಕಾರ್ಯಕ್ರಮ ರೂಪಿಸಿತು ಎಂದು ತಿಳಿಸಿದರು.
ರು. 2 ಕೋಟಿ ಬಿಡುಗಡೆ: ನಿಜ ಶರಣ ಅಂಬಿಗರ ಚೌಡಯ್ಯ ಪೀಠದ ಅಭಿವೃದ್ಧಿಗೆ ಸರ್ಕಾರ ರು. 2 ಕೋಟಿ ಅನುದಾನ ನೀಡಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ಅಂಬಿಗರ ಚೌಡಯ್ಯ ಜಯಂತಿಯನ್ನು ಸರ್ಕಾರದಿಂದ ಆಚರಿಸುವ ಕಾರ್ಯಕ್ಕೆ ಮುನ್ನುಡಿ ಬರೆಯಲಾಗಿದೆ ಎಂದರು.
ಅಂಬಿಗರ ಸಮುದಾಯದಲ್ಲಿ ವಿದ್ಯಾವಂತರ ಸಂಖ್ಯೆ ಕಡಿಮೆ. ಆದ್ದರಿಂದ ಸಮುದಾಯ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಅಂಧಕಾರದಿಂದ ಹೊರಬರಬೇಕು. ಈ ಮೂಲಕ ಚೌಡಯ್ಯರಂತಹ ಮಹಾ ಪುರುಷರ ಆದರ್ಶ ಪಾಲಿಸಿದಂತಾಗುತ್ತದೆ ಎಂದರು.
ಸೌಲಭ್ಯ ಬಳಸಿಕೊಳ್ಳಿ: ಸಂಸದ ಬಿ.ವೈ. ರಾಘವೇಂದ್ರ, ಗಂಗಾಮತಸ್ಥರು ಹಾಗೂ ಮೊಗವೀರ ಸಮುದಾಯಕ್ಕೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರು ಸದುಪಯೋಗ ಆಗಬೇಕು. ಅಲ್ಲದೆ, ಮಲೆನಾಡು ಭಾಗದ ಮಹತ್ತರ ಯೋಜನೆ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮೂಲಕ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ಮಹಾಭಾರತದ ಕಾಲದಲ್ಲಿ ಭೀಷ್ಮನಿಂದ, ಸಂಗೀತ ಸಾಮ್ರಾಜ್ಯ ಗಂಗೂಬಾಯಿ ಹಾನಗಲ್ವರೆಗೆ ಸಮುದಾಯದ ಶ್ರೇಷ್ಠ ವ್ಯಕ್ತಿಗಳಿದ್ದಾರೆ. ಅದರಲ್ಲಿ 12ನೇ ಶತಮಾನದಲ್ಲಿ ಅಂಬಿಗರ ಚೌಡಯ್ಯ ಜಾತಿ ವ್ಯವಸ್ಥೆ ವಿರುದ್ಧ ಕ್ರಾಂತಿ ಮಾಡಿದರು ಎಂದರು.
ಇತಿಹಾಸಕಾರ, ಬರಹಗಾರ ಜಯದೇವಪ್ಪ ಜೈನಕೇರಿ ಅವರು ನಿಜಶರಣ ಅಂಬಿಗರ ಚೌಡಯ್ಯ ಕುರಿತು ಉಪನ್ಯಾಸ ನೀಡಿದರು.
ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಉಪಾಧ್ಯಕ್ಷೆ ಹೇಮಾ ಪಾವನಿ, ನಗರಸಭೆ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ಎಪಿಎಂಸಿ ಅಧ್ಯಕ್ಷ ಮಹೇಂದ್ರನಾಥ್, ತಾ.ಪಂ. ಅಧ್ಯಕ್ಷೆ ದೇವಿಬಾಯಿ ಧರ್ಮನಾಯ್ಕ, ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ, ಅಪರ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ಸಮಾಜ ಕಲ್ಯಾಣಾಧಿಕಾರಿ ಬಿ.ಟಿ. ಮಂಜುನಾಥ್ ಉಪಸ್ಥಿತರಿದ್ದರು.
ಮೊಗವೀರ ಸಮಾಜದ ಅಧ್ಯಕ್ಷ ಮಹಾಬಲರಾವ್, ಶಿವಕುಮಾರ ಸ್ವಾಮೀಜಿ, ಪೌರಾಯುಕ್ತ ಪಿ.ಜೆ. ರಮೇಶ್, ವಿಧಾನಪರಿಷತ್ ಮಾಜಿ ಸದಸ್ಯ ಶಾಂತವೀರಪ್ಪಗೌಡ, ಮಂಜುನಾಥ ರಾಜಗೋಪಾಲ್ ಮತ್ತಿತರರು ಪಾಲ್ಗೊಂಡಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ಸ್ವಾಗತಿಸಿದರು. ಗಂಗಾಮತಸ್ಥ ಸಮಾಜದ ಜಿಲ್ಲಾಧ್ಯಕ್ಷ ಡಿ.ಬಿ. ಕೆಂಚಪ್ಪ ವಂದಿಸಿದರು. ಕಾರ್ಯಕ್ರಮಕ್ಕೆ ಮುನ್ನ ಸೈನ್ಸೆಮೈದಾನದಿಂದ ಹೊರಟ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.