ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಫೆ.9ರಿಂದ ಭದ್ರಾವತಿಯಲ್ಲಿ ವಿಪ್ರ ಸಮ್ಮೇಳನ

Lingaraj Badiger
Updated On : 22 Jan 2013, 1:25 am

ಭದ್ರಾವತಿ: ತ್ರಿಮತಸ್ಥ ಬ್ರಾಹ್ಮಣರನ್ನು ಒಗ್ಗೂಡಿಸಲು ಭದ್ರಾವತಿಯಲ್ಲಿ ಫೆ.9 ಮತ್ತು 10ರಂದು ತಾಲೂಕು ಮಟ್ಟದ ವಿಪ್ರ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ತಾಲೂಕು ಬ್ರಾಹ್ಮಣ ಸಭಾದ ಅಧ್ಯಕ್ಷ ಎಂ.ಎಸ್. ಜನಾರ್ಧನ ಅಯ್ಯಂಗಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬ್ರಾಹ್ಮಣ ಸಮುದಾಯದ ಎಲ್ಲಾ ವರ್ಗದ ಜನರನ್ನೂ ಒಂದೆಡೆ ಸೇರಿಸಿ ಸಂಘಟಿಸುವ ಯತ್ನ ಇದಾಗಿದೆ ಎಂದರು. ಫೆ.9ರಂದು ಪಟ್ಟಣದ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯುವ ಸಮಾವೇಶವನ್ನು ಧಾರವಾಡದ ಧಾರ್ಮಿಕ ಉಪನ್ಯಾಸಕ ಜಯತೀರ್ಥಾಚಾರ್ ಸಂಜೆ 5 ಗಂಟೆಗೆ ಉದ್ಘಾಟಿಸಿ ಮಾತನಾಡುವರು.
ಇದಕ್ಕೆ ಮುನ್ನ ಹಾಲಪ್ಪ ವೃತ್ತದಿಂದ ಕಲ್ಯಾಣ ಮಂಟಪದ ವರೆಗೆ ಶೋಭಾಯಾತ್ರೆ ನಡೆಯುವುದು. ದ್ವಾರಕಾ ಜಗದ್ಗುರು ಸಂಸ್ಥಾನಂ ಶ್ರೀ ಕೃಷ್ಣಾನಂದ ಮಠ, ಮುಳಬಾಗಲು, ದೂರ್ವಾಸಪುರಂ, ತೀರ್ಥಹಳ್ಳಿಯ ಶ್ರೀ ಕೃಷ್ಣಾನಂದತೀರ್ಥ ಸ್ವಾಮಿ, ತಮಿಳುನಾಡಿನ ವಿಲ್ಲಿಪುತ್ತೂರಿನ ಮಣವಾಳ ಮಾಮುನಿ ಮಠ, ಆಂಡಾಳ್ ಸನ್ನಿಧಿಯ ಶಠಗೋಪರಾಮಾನುಜ ಜೀಯರ್ ಹಾಗೂ ಉಡುಪಿಯ ಪೇಜಾವರ ಆಧೋಕ್ಷಜ ಮಠದ (ಕಿರಿಯ ಪಟ್ಟ) ವಿಶ್ವಪ್ರಸನ್ನತೀರ್ಥ ಸ್ವಾಮಿ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುವರು.
ಭಾನುವಾರ ಬೆಳಗ್ಗೆ 7.30ರಿಂದ ಸಾಮೂಹಿಕ ಸೌಂದರ್ಯ ಲಹರಿ ಸ್ತೋತ್ರಗಳ ಪಠಣದ ನಂತರ 8.30ರಿಂದ ಮಧ್ಯಾಹ್ನ 1.25ರ ವರೆಗೆ ವಿವಿಧ ಗೋಷ್ಠಿಗಳು ನಡೆಯುವುವು. ಮಧ್ಯಾಹ್ನ ಭೋಜನ ವಿರಾಮದ ನಂತರ 2.30ರಿಂದ 4 ಗಂಟೆಯ ವರೆಗೆ ನಡೆಯುವ ಜ್ಞಾನನಿಧಿ ಶ್ರೇಷ್ಠಗಳು ಎಂಬ ಗೋಷ್ಠಿಯಲ್ಲಿ ಬೆಂಗಳೂರಿನ ಚಿತ್ರ ನಿರ್ದೇಶಕ ಹಾಗೂ ಕಿರುತೆರೆ ಕಲಾವಿದ ಎಂ.ಡಿ. ಕೌಶಿಕ್ ಮಾಯಾಜಾಲ ಪ್ರದರ್ಶನ ತೋರಿಸುವರು.
ಭಾನುವಾರ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಸಮಾವೇಶದ ಅಧ್ಯಕ್ಷ ಪಿ. ರವಿರಾಜಾಚಾರ್ಯ ಅಧ್ಯಕ್ಷತೆಯಲ್ಲಿ ನಡೆಯುವುದು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ಡಾ. ಬಿ.ಎನ್.ವಿ. ಸುಬ್ರಮಣ್ಯ ಸಮಾರೋಪ ಭಾಷಣ ಮಾಡಲಿದ್ದಾರೆ. ಮಹಾಸಭಾದ ಉಪಾಧ್ಯಕ್ಷ ಕೆ. ದಿವಾಕರ ಸಮಾವೇಶದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಮಹಾಸಭಾದ ಉಪಾಧ್ಯಕ್ಷ ಎಲ್.ಟಿ. ತಿಮ್ಮಪ್ಪ ಹೆಗ್ಗಡೆ, ಪ್ರಧಾನ ಕಾರ್ಯದರ್ಶಿ ಎಂ. ದಿವಾಕರ ಢೋಂಗ್ರೆ, ಸಂಘಟನಾ ಕಾರ್ಯದರ್ಶಿ ಮ.ಸ. ನಂಜುಂಜಸ್ವಾಮಿ ಮತ್ತು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಡಾ. ಬಿ. ವೆಂಕಟರಾವ್ ಅತಿಥಿಗಳಾಗಿ ಭಾಗವಹಿಸುವರು. ಸಂಜೆ 5.30 ರಿಂದ 8.30ರ ವರೆಗೆ ವಿಪ್ರ ಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುವು ಎಂದು ಪ್ರಚಾರ ಸಮಿತಿ ಸಂಚಾಲಕ ಎಲ್. ಆನಂದರಾಮನ್ ತಿಳಿಸಿದರು.
ಗೋಷ್ಠಿಯಲ್ಲಿ ತಾಲೂಕು ಬ್ರಾಹ್ಮಣ ಸಭಾದ ಗೌರವಾಧ್ಯಕ್ಷ ಡಾ. ಹರೀಶ ದೇಲಂತಬೆಟ್ಟು, ಸಮಾವೇಶದ ಅಧ್ಯಕ್ಷ ಪಿ. ರವಿರಾಜಾಚಾರ್, ಪ್ರಭಾಕರ ಜೋಯಿಸ್, ರಾಘವೇಂದ್ರ ಆಚಾರ್, ಸಹಕಾರ್ಯದರ್ಶಿ ಎಚ್. ರವಿ, ಪ್ರಧಾನ ಕಾರ್ಯದರ್ಶಿ ಡಿ. ಸತ್ಯನಾರಾಯಣ. ಜೆ. ಶಿವಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement