ಶಿಂಧೆ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಶಿವಮೊಗ್ಗ: ಬಿಜೆಪಿ ಹಾಗೂ ಆರ್‌ಎಸ್‌ಎಸ್ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗೆ ತರಬೇತಿ ಶಿಬಿರಗಳನ್ನು ಹುಟ್ಟುಹಾಕುತ್ತಿದೆ ಎಂಬ ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಅವರ ಹೇಳಿಕೆ ಖಂಡಿಸಿ ಸೋಮವಾರ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಜೈಲು ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.
ಕ್ಷಮೆ ಯಾಚಿಸಬೇಕು: ಇಂತಹ ಅಸಂಬದ್ಧ ಹೇಳಿಕೆಗಳಿಂದ ದೇಶದಲ್ಲಿನ ಸೌಹಾರ್ದದತೆಗೆ ಧಕ್ಕೆ ಬರುತ್ತದೆ. ಕೊಡಲೇ ಸಚಿವರು ಹೇಳಿಕೆಯನ್ನು ವಾಪಸ್ ಪಡೆದು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರನ್ನು ಒಲೈಸಲು ಇಂತಹ ಹೇಳಿಕೆ ನೀಡುತ್ತಿದ್ದು, ಗೃಹ ಸಚಿವ ಶಿಂಧೆ ಅವರು ದೇಶದಲ್ಲಿ ಅಂತಹ ಚುಟುವಟಿಕೆಗಳು ನಡೆಯುತ್ತಿದ್ದಲ್ಲಿ ಸೂಕ್ತ ಕ್ರಮಕೈಗೊಳ್ಳಲ್ಲಿ ಅದು ಬಿಟ್ಟು ಮತ್ತೊಂದು ಪಕ್ಷದ ವಿರುದ್ಧ ಮಾತನಾಡುವುದು ಸರಿಯಲ್ಲ. ದೇಶದ ರಕ್ಷಣಾ ಇಲಾಖೆ ಅವರ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಈ ನಡುವೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅಂತಹ ಕೆಲಸ ಮಾಡುತ್ತಿದ್ದರೆ ಸಾಕ್ಷಧಾರಗಳಿಂದ ಸಾಬೀತುಮಾಡಲಿ. ವಿನಾ ಕಾರಣ ಬಿಜೆಪಿ ಮೇಲೆ ಆರೋಪ ಮಾಡಿದರೆ ಪಕ್ಷ ಸಹಿಸುವುದಿಲ್ಲ ಎಂದು ಪ್ರತಿಭಟನಾನಿರತರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸೂಡಾ ಅಧ್ಯಕ್ಷ ದತ್ತಾತ್ರಿ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಡಿ.ಎಸ್. ಅರುಣ್, ನಗರಾಧ್ಯಕ್ಷ ನಟರಾಜ್ ಮತಿತರರು ಇದ್ದರು.