ತುಂಗಾ ಮೇಲ್ದಂಡೆ ಕಚೇರಿಗೆ ಮುತ್ತಿಗೆ
ಶಿವಮೊಗ್ಗ: ತುಂಗಾ ಮೇಲ್ದಂಡೆ ಕಚೇರಿಗೆ ಮಂಗಳವಾರ ವಿವಿಧ ಗ್ರಾಮಗಳ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು. ಈ ವೇಳೆ ಕಚೇರಿಯ ಮುಖ್ಯ ಬಾಗಿಲು ಮುಚ್ಚಿ ಸಿಬ್ಬಂದಿ ಒಳ ಪ್ರವೇಶಿಸದಂತೆ ತಡೆ ಹಾಕಿದರಲ್ಲದೇ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಘಟನೆ ನಡೆಯಿತು.
ಜಲ ಸಂಪನ್ಮೂಲ ಇಲಾಖೆಯು ಶಿವಮೊಗ್ಗ ತಾಲೂಕಿನ ಹರಿಜನ-ಗಿರಿಜನರು ಹೆಚ್ಚಿರುವ ಗ್ರಾಮಗಳಲ್ಲಿ ಕಾಂಕ್ರಿಟ್ ರಸ್ತೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿತು. ಅದರಂತೆ ಸುಮಾರು 22 ಗ್ರಾಮಗಳನ್ನು ಗುರುತಿಸಿ, ರು. 6.88 ಕೋಟಿ ಅನುದಾನ ಬಿಡುಗಡೆ ಮಾಡಿತು. ಕರ್ನಾಟಕ ನೀರಾವರಿ ನಿಗಮದ ತುಂಗಾ ಮೇಲ್ದಂಡೆ ಯೋಜನೆ ಇಲಾಖೆಯ ಮೂಲಕ ಕಾಮಗಾರಿ ನಿರ್ವಹಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಇಲ್ಲಿಯವರೆಗೂ ಸಂಬಂಧಿಸಿದ ಗ್ರಾಮಗಳಲ್ಲಿ ಕಾಂಕ್ರಿಟ್ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ ಎಂಬುದು ಪ್ರತಿಭಟನಾಕಾರರ ಆಕ್ರೋಶ.
ವಾಗ್ವಾದ: ಪ್ರತಿಭಟನಾಕಾರರು ಕಚೇರಿ ಮುಂಭಾಗ ಠಿಕಾಣಿ ಹೂಡಿದ್ದರಿಂದಾಗಿ ಕಚೇರಿಯ ಬಾಗಿಲು ತೆಗೆಸಲು ಪೊಲೀಸರು ಹರಸಾಹಸ ಪಡುವಂತಾಯಿತು.
ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಸ್ಥಳದಲ್ಲಿ ಕೆಲ ಸಮಯ ತ್ವೇಷಮಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಯಲ್ಲಿ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದ ಪೊಲೀಸರು ಮುಚ್ಚಲಾಗಿದ್ದ ಮುಖ್ಯ ಬಾಗಿಲು ತೆರೆದು ಹೊರ ನಿಂತಿದ್ದ ಸಿಬ್ಬಂದಿಯನ್ನು ಕಚೇರಿಯ ಒಳಗೆ ಕಳುಹಿಸಿದರು.
ಆರೋಪ: ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದ್ದರೂ ಕಾಮಗಾರಿ ಆರಂಭಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಉದ್ದೇಶಪೂರ್ವಕವಾಗಿ ಕಾಮಗಾರಿ ಆರಂಭಿಸುತ್ತಿಲ್ಲ, ಹರಿಜನ-ಗಿರಿಜನರಿಗೆ ಅನ್ಯಾಯ ಬಗೆಯುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮನವಿ ಮಾಡಲಾಗಿದೆ. ಆದರೂ ಕಾಮಗಾರಿ ಆರಂಭಿಸದೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಇದರ ಹಿಂದೆ ರಾಜಕೀಯ ಉದ್ದೇಶವಿರುವ ಶಂಕೆ ವ್ಯಕ್ತವಾಗುತ್ತಿದೆ ಆಪಾದಿಸಿದ ಗ್ರಾಮಸ್ಥರು, ಕೂಡಲೇ ಈಗಾಗಲೇ ಗುರುತಿಸಲಾಗಿರುವ ಗ್ರಾಮಗಳಲ್ಲಿ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಪಂ ಸದಸ್ಯ ಅಶೋಕ ನಾಯ್ಕ ಪ್ರತಿಭಟನೆ ನೇತೃತ್ವ ವಹಿಸಿದ್ದರು. ನರಸಿಂಹ, ದಿವಾಕರ ಗೌಡ, ಮಾಯಣ್ಣ, ಗೋಪಿ, ಕುಮಾರ, ಸುರೇಶ್, ಬೆನಕಪ್ಪಗೌಡ, ಬಾಲು, ಮಹಾದೇವ ಸೇರಿದಂತೆ ನೂರಾರು ಗ್ರಾಮಸ್ಥರು ಇದ್ದರು.