ನಕಲಿ ಸರ್ಟಿಫಿಕೆಟ್, ಫೋರ್ಜರಿ ಸಹಿ!
ಶಿವಮೊಗ್ಗ: ಮುಂಬೈನಲ್ಲಿರುವ ಮೋದಕ್ಸಾಗರ್ ಅಣೆಕಟ್ಟು (ವೈಟರ್ನಾ ಡ್ಯಾಂ) ಭದ್ರತೆ ಕಾಮಗಾರಿ ನಿರ್ವಹಿಸಿದ್ದೇವೆಂದು ಸಲ್ಲಿಸಿರುವ ವರ್ಕ್ ಡನ್ ಪ್ರಮಾಣಪತ್ರವೇ ನಕಲಿ. ಇಂಡಿಯನ್ ರಿಜಿಸ್ಟ್ರಾರ್ ಆಫ್ ಶಿಪ್ಪಿಂಗ್ ಸಂಸ್ಥೆಯ ಲೆಟರ್ ಹೆಡ್ನ್ನು ಇಲ್ಲಿಯೇ ಕೃತಕವಾಗಿ ಸೃಷ್ಟಿಸಿ ಫೋರ್ಜರಿ ಸಹಿ ಮಾಡಿ ಬಳಸಿಕೊಳ್ಳಲಾಗಿದೆ.
ಈ ರೀತಿ ನಡೆದಿರುವುದು ಭದ್ರಾ ಅಣೆಕಟ್ಟು ಭದ್ರತೆ ಕಾಮಗಾರಿ ಟೆಂಡರ್ ಪಡೆಯುವಾಗ. ಇನ್ನೂ ವಿಚಿತ್ರವೆಂದರೆ ಇವು ನಕಲಿ ಎಂದು ಗೊತ್ತಿದ್ದರೂ ಸಹ ನೀರಾವರಿ ಇಲಾಖೆ ಅಧಿಕಾರಿಗಳು ಅಸಲಿ ಎಂದು ದೃಢೀಕರಿಸಿರುವುದು.
'ಕನ್ನಡಪ್ರಭ' ಪತ್ರಿಕೆಯು ಮೊಟ್ಟಮೊದಲು ಭದ್ರಾ ಅಣೆಕಟ್ಟು ಭದ್ರತೆ ಕಾಮಗಾರಿಯ ಟೆಂಡರ್ ನೀಡುವಲ್ಲಿ ಸರ್ಕಾರ ಕರ್ತವ್ಯಲೋಪವೆಸಗಿದ್ದನ್ನು ಜ.17ರ ಸಂಚಿಕೆಯಲ್ಲಿ ಬಯಲಿಗೆ ತಂದಿತ್ತು. ಈಗ ಇನ್ನಷ್ಟು ದಾಖಲೆಗಳು ಬಹಿರಂಗವಾಗಿದ್ದು, ಸಂಪೂರ್ಣ ಟೆಂಡರ್ ಪ್ರಕ್ರಿಯೆ ಲೋಪವಾಗಿರುವುದಕ್ಕೆ ಸಾಕ್ಷಿಗಳು ಸಿಕ್ಕಿವೆ.
ನಕಲಿ ದಾಖಲೆ: ಇಂಡಿಯನ್ ರಿಜಿಸ್ಟ್ರಾರ್ ಆಫ್ ಶಿಪ್ಪಿಂಗ್ ಸಂಸ್ಥೆಯು ನೌಕಾಪಡೆಯ ಅಂಗಸಂಸ್ಥೆ. ನೀರೊಳಗೆ ಮುಳುಗಿ ಕಾಮಗಾರಿ ನಡೆಸುವ ಸಂಸ್ಥೆಯು ಇಂತಹ ಸಂಸ್ಥೆಗಳಿಂದ ಪ್ರಮಾಣ ಪತ್ರ ಪಡೆದಿರಬೇಕು. ಭದ್ರಾ ಅಣೆಕಟ್ಟು ಭದ್ರತೆ ಕಾಮಗಾರಿ ನಿರ್ವಹಿಸುತ್ತಿರುವ ಜಿಲ್ಲೆಯ ಸಾಗರ ಮೂಲದ ಸಾಗರ್ ಡೈವರ್ಸ್ ಅಂಡ್ ಎಂಜಿನಿಯರ್ಸ್ ಸಂಸ್ಥೆಯೂ ಸಹ ಪ್ರಮಾಣ ಪತ್ರ ಸಲ್ಲಿಸಿದೆ. ಇದನ್ನು ನೀರಾವರಿ ಇಲಾಖೆ ಅಂಗೀಕರಿಸಿದೆ.
ಅದರೆ ಸಾಗರ್ ಡೈವರ್ಸ್ ಅಂಡ್ ಎಂಜಿನಿಯರ್ಸ್ ಸಂಸ್ಥೆಗೆ ಯಾವುದೇ ಪ್ರಮಾಣ ಪತ್ರ ನೀಡಿಲ್ಲ ಎಂದು ಇಂಡಿಯನ್ ರಿಜಿಸ್ಟ್ರಾರ್ ಆಫ್ ಶಿಪ್ಪಿಂಗ್ ಸಂಸ್ಥೆಯು ಚಿಕ್ಕಮಗಳೂರು ಜಿಲ್ಲಾ ಯೋಜನಾ ಸಮಿತಿ ಸದಸ್ಯ ಎಂ. ನರೇಂದ್ರ ಅವರ ಪತ್ರಕ್ಕೆ ನೀಡಿರುವ ಉತ್ತರದಲ್ಲಿ ತಿಳಿಸಿದೆ.
ನೌಕಾಪಡೆಯ ಅಂಗಸಂಸ್ಥೆಯ ಲೆಟರ್ ಹೆಡ್ ಹಾಗೂ ಸಂಸ್ಥೆಯ ನಿರ್ದೇಶಕರ ಸಹಿಯನ್ನೇ ಫೋರ್ಜರಿ ಮಾಡಿ ಸಲ್ಲಿಸಿರುವುದು ನೀರಾವರಿ ಇಲಾಖೆಯ ಗಮನಕ್ಕೇ ಬಂದಿಲ್ಲ ಎಂದರೆ ನಂಬುವುದು ಅಸಾಧ್ಯ.
ನಕಲಿ ಪ್ರಮಾಣಪತ್ರ: ಟೆಂಡರ್ ಸಲ್ಲಿಸುವಾಗ ನೀಡಿರುವ ವರ್ಕ್ ಡನ್ ಪ್ರಮಾಣಪತ್ರವೂ ಸಹ ನಕಲಿಯೇ. ಮುಂಬೈ ಸಮೀಪವಿರುವ ಮೋದಕ್ಸಾಗರ್ ಅಣೆಕಟ್ಟಿನ ಭದ್ರತೆ ಕಾಮಗಾರಿ ವೇಳೆ ಅಪಾಕ್ಸಿ ಪಾಯಿಂಟಿಂಗ್ ಕೆಲಸ ನಿರ್ವಹಿಸಿರುವುದಾಗಿ ಗ್ರೇಟರ್ ಮುಂಬೈ ಮಹಾನಗರಪಾಲಿಕೆ ನೀಡಿರುವ ವರ್ಕ್ ಡನ್ ಪ್ರಮಾಣ ಪತ್ರವನ್ನು ಟೆಂಡರ್ ಅರ್ಜಿ ಜತೆ ಸಲ್ಲಿಸಲಾಗಿದೆ.
ಆದರೆ ಇಂತಹ ಯಾವುದೇ ಪ್ರಮಾಣ ಪತ್ರವನ್ನು ತಾವು ನೀಡಿಲ್ಲ ಎಂದು ಗ್ರೇಟರ್ ಮುಂಬೈ ಮಹಾನಗರ ಪಾಲಿಕೆಯು ಡೆಪ್ಯೂಟಿ ಹೈಡ್ರಾಲಿಕ್ ಎಂಜಿನಿಯರ್ ಅವರು ಚಿಕ್ಕಮಗಳೂರು ಜಿಲ್ಲಾ ಯೋಜನಾ ಸಮಿತಿ ಸದಸ್ಯ ಎಂ. ನರೇಂದ್ರ ಅವರ ಪತ್ರಕ್ಕೆ ನೀಡಿರುವ ಉತ್ತರದಲ್ಲಿ ತಿಳಿಸಿದೆ.
ಟೆಂಡರ್ ಜತೆ ಸಲ್ಲಿಸಿರುವ ಪ್ರಮಾಣ ಪತ್ರ ನೋಡಿದಾಕ್ಷಣ ಇದು ಇಲ್ಲಿಯೇ ಯಾವುದೋ ಡಿಟಿಪಿ ಕೇಂದ್ರದಲ್ಲಿ ಸೃಷ್ಟಿಸಿದ್ದೆಂದು ಅರ್ಥವಾಗುತ್ತದೆ.
ಏಕೆಂದರೆ ಈ ಲೆಟರ್ ಹೆಡ್ನಲ್ಲಿ ಒಂದೇ ಒಂದು ಹಿಂದಿ ಪದ ಇಲ್ಲ. ಎಂ. ನರೇಂದ್ರ ಅವರಿಗೆ ಬಂದಿರುವ ಪತ್ರದ ಲೆಟರ್ ಹೆಡ್ನಲ್ಲಿ ಹಿಂದಿಯಲ್ಲಿ ಪಾಲಿಕೆಯ ಹೆಸರು ಹಿಂದಿಯಲ್ಲಿದೆ.
ಒಬ್ಬರ ಎರಡು ಕಂಪನಿ: ಟೆಂಡರ್ಗೆ ಒಟ್ಟು ಮೂವರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಸಾಗರದ ಸಾಗರ್ ಡೈವರ್ಸ್ ಅಂಡ್ ಎಂಜಿನಿಯರ್ಸ್ ಸಂಸ್ಥೆ ಹಾಗೂ ಮುಂಬೈನ ರತನ್ಸಿಂಗ್ ಅಂಡ್ ಬ್ರದರ್ಸ್ ಸಂಸ್ಥೆಗಳ ಮಾಲೀಕರ ಹೆಸರು ಒಂದೇ ಆಗಿರುವುದು ವಿಚಿತ್ರ.
ಈ ಎರಡೂ ಕಂಪನಿಗಳು ಟೆಂಡರ್ ಅರ್ಜಿ ಜತೆಗೆ ನಕಲಿ ಪ್ರಮಾಣಪತ್ರಗಳನ್ನೇ ಸಲ್ಲಿಸಿವೆ. ಈ ನಕಲಿ ಪತ್ರಗಳು ಒಂದೇ ರೀತಿಯಲ್ಲಿವೆ.
ನೀರಾವರಿ ಇಲಾಖೆ ಅಧಿಕಾರಿಗಳು ಕಣ್ಗಾವಲಿನಲ್ಲಿಯೇ ಇಷ್ಟೆಲ್ಲಾ ನಡೆದಿರುವುದು ಅಚ್ಚರಿಯ ವಿಷಯ.
ಒತ್ತಾಯ: ಟೆಂಡರ್ ಪ್ರಕ್ರಿಯೆ ಸಂಪೂರ್ಣ ದೋಷದಿಂದ ಕೂಡಿದೆ. ಯಾರಿಗೋ ಒಬ್ಬರಿಗೆ ಟೆಂಡರ್ ನೀಡಬೇಕೆಂಬ ಉದ್ದೇಶದಿಂದ ಎಲ್ಲಾ ನಕಲಿ ದಾಖಲೆಗಳನ್ನು ಅಸಲಿ ಎಂದು ತೋರಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಯೋಜನಾ ಸಮಿತಿ ಸದಸ್ಯ ಎಂ. ನರೇಂದ್ರ ಹಾಗೂ ಶಿವಮೊಗ್ಗ ಜಿ.ಪಂ. ಮಾಜಿ ಸದಸ್ಯ ಯೋಗೀಶ್ಗೌಡ ಆರೋಪಿಸುತ್ತಾರೆ.
ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕು. ಹಾಲಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾಗಿರುವ ಮುಖ್ಯ ಎಂಜಿನಿಯರ್ ರುದ್ರಯ್ಯ ಅವರು ಇದಕ್ಕೆ ಹೊಣೆ. ಹಾಗಾಗಿ ಪ್ರಕರಣದ ಸಿಬಿಐ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.