ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಲೆಗೆ ಭದ್ರಾ ನೀರು: ಪರಿಷ್ಕೃತ ಪಟ್ಟಿ ಬಿಡುಗಡೆ

Lingaraj Badiger
Updated On : 23 Jan 2013, 11:07 am

ಶಿವಮೊಗ್ಗ: ಎಲ್ಲಾ ಅಳೆದು ತೂಗಿ ಭದ್ರಾ ಜಲಾಶಯದಲ್ಲಿ ಕೃಷಿ ಬಳಕೆಗಾಗಿ ಉಳಿದಿರುವುದು 25.05 ಟಿಎಂಸಿ ನೀರು ಮಾತ್ರ. ಇದನ್ನು ಮೂರು ಜಿಲ್ಲೆಗಳ ರೈತರಿಗೆ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಾಲೆಗೆ ನೀರು ಹರಿಸುವ ಪರಿಷ್ಕೃತ ವೇಳಾಪಟ್ಟಿಯನ್ನು ಭದ್ರಾ ಯೋಜನೆ ನೀರಾವರಿ ಸಲಹಾ ಸಮಿತಿ ಪ್ರಕಟಿಸಿದೆ.
ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷರಾಗಿ ಗಿರೀಶ್ ಪಟೇಲ್ ಅವರು ಅಧಿಕಾರ ವಹಿಸಿಕೊಂಡ ನಂತರ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಮೊದಲ ಸಭೆಯುಲ್ಲಿ ನೀರು ಹರಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಬಲದಂಡೆ ನಾಲೆ ಪ್ರದೇಶದ ರೈತರು ಹೆಚ್ಚು ನೀರು ಪಡೆಯುವುದಕ್ಕಾಗಿ ತಮ್ಮ ಅಹವಾಲು ಮಂಡಿಸಿದರು. ಅಂತಿಮವಾಗಿ ಬಲದಂಡೆ ನಾಲೆಯನ್ನು ಎರಡು ಘಟಕಗಳಾಗಿ ಪರಿಗಣಿಸಿ 103 ಕಿ.ಮೀ. ವರೆಗೆ ಒಂದು ವೇಳಾಪಟ್ಟಿ, 103 ಕಿ.ಮೀ. ನಂತರದ ಪ್ರದೇಶಕ್ಕೆ ಇನ್ನೊಂದು ವೇಳಾಪಟ್ಟಿ ರೂಪಿಸಲಾಯಿತು.
ಈ ನಡುವೆ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ನೀರು ಹರಿಸುವಂತೆ ಸೂಚಿಸಿ ಬರೆದ ಪತ್ರ ತೀವ್ರ ಚರ್ಚೆಗೆ ಗ್ರಾಸವಾಯಿತು. ನಾಲೆಯಲ್ಲಿ ನಿರಂತರ ನೀರು ಹರಿಸುವಂತೆ ಸಚಿವರು ಸೂಚಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಯಿತು. ನಂತರ ನೀರಿನ ಲಭ್ಯತೆ ಆಧರಿಸಿ ವೇಳಾಪಟ್ಟಿ ಪರಿಷ್ಕರಿಸಲು ನಿರ್ಧರಿಸಲಾಯಿತು.
ಬತ್ತಕ್ಕೆ ಅವಕಾಶವಿಲ್ಲ: ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದರಿಂದ ಬೇಸಿಗೆ ಬೆಳೆಯಲ್ಲಿ ಬತ್ತಕ್ಕೆ ಅವಕಾಶವಿಲ್ಲ. ಕಬ್ಬು, ತೋಟಗಾರಿಕೆ ಹಾಗೂ ಅರೆ ನೀರಾವರಿ ಬೆಳೆಯನ್ನು ಮಾತ್ರ ಬೆಳೆಯಬಹುದು.
ಭದ್ರಾ ಕಾಡಾ ಆಡಳಿತಾಧಿಕಾರಿ ಅಣ್ಣಯ್ಯ, ರೈತ ಮುಖಂಡರಾದ ಮಲ್ಲೇಶಪ್ಪ, ಹಾಲಪ್ಪ, ನೀರಾವರಿ ಇಲಾಖೆ ಎಂಜಿನಿಯರ್ ಫಣಿರಾಜ್, ರಘುನಾಥ್ ಸೇರಿದಂತೆ ಹಲವರು ಸಭೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement