ನಕ್ಸಲ್ ಚಟುವಟಿಕೆ ನಿಯಂತ್ರಣ ತೃಪ್ತಿ ತಂದಿದೆ
ಶಿವಮೊಗ್ಗ: ತಮ್ಮ ಅವಧಿಯಲ್ಲಿ ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆ ಸಂಪೂರ್ಣ ನಿಯಂತ್ರಣದಲ್ಲಿದ್ದು, ಈ ನಿಟ್ಟಿನಲ್ಲಿ ನಮ್ಮ ತಂಡದ ಕಾರ್ಯ ತೃಪ್ತಿ ಎಂದು ನಿರ್ಗಮಿತ ಎಸ್ಪಿ ರಮನ್ ಗುಪ್ತಾ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸನಗರ ಹಾಗೂ ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಕಳೆದ ಒಂದೂವರೆಗೆ ವರ್ಷದಿಂದ ಒಂದೇ ಒಂದು ನಕ್ಸಲ್ ಚಟುವಟಿಕೆ ಪ್ರಕರಣ ದಾಖಲಾಗಿಲ್ಲ. ಇದು ಪೊಲೀಸ್ ತಂಡ ಕಾರ್ಯಕ್ಷಮತೆಯನ್ನು ತೋರಿಸುತ್ತದೆ ಎಂದರು.
ಮನ ಪರಿವರ್ತನೆಗೆ ಶ್ರಮಿಸಿದೆ: ನಕ್ಸಲ್ ಪೀಡಿತ ಪ್ರದೇಶಗಳ ನಿವಾಸಿಗಳ ಸಮಸ್ಯೆ ಆಲಿಸಲು ಇಲಾಖೆಯಿಂದ ಹೆಚ್ಚಿನ ಒತ್ತು ನೀಡಲಾಯಿತು. ಆರೋಗ್ಯ ಶಿಬಿರ, ಹೋಂ ಗಾರ್ಡ್‌ಗಳ ನೇಮಕ, ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ, ಸಹಕಾರಿ ಸಂಸ್ಥೆಗಳ ರಚನೆ, ಸ್ವಯಂ ಉದ್ಯೋಗ ಕಲ್ಪಿಸಲಾಯಿತು. ಬೇರು ಮಟ್ಟದಲ್ಲಿ ಬದಲಾವಣೆ ತರುವ ಮೂಲಕ ಸ್ಥಳೀಯ ನಿವಾಸಿಗಳ ಮನ ಪರಿವರ್ತನೆಗೆ ಪೊಲೀಸ್ ಇಲಾಖೆ ಶ್ರಮಿಸಿದೆ ಎಂದು ವಿವರಿಸಿದರು.
ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ರು. 5 ಕೋಟಿ ಪ್ಯಾಕೇಜ್ ಬಿಡುಗಡೆ ಮಾಡಿದ್ದು, ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿಗೆ ತಲಾ ಎರಡೂವರೆ ಕೋಟಿ ರುಪಾಯಿ ಖರ್ಚು ಮಾಡಲಾಗಿದೆ. ಜಿಲ್ಲಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರೊಂದಿಗೆ ನಿರಂತರವಾಗಿ ಸಭೆ ನಡೆಸಿ ಅನುದಾನ ಸದುಪಯೋಗ ಮಾಡಿಕೊಳ್ಳಲಾಯಿತು. ಈ ಕಾರಣದಿಂದಾಗಿ ಜಿಲ್ಲೆಯಲ್ಲಿ ನಕ್ಸಲ್ ಟಟುವಟಿಕೆ ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು ಎಂದು ಹೇಳಿದರು.
ಜಿಲ್ಲೆಯಲ್ಲಿ ಒಳ್ಳೆಯ ಕೆಲಸ ಮಾಡಿದ ವಿಶ್ವಾಸ ತಮ್ಮದಾಗಿದೆ. ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಹಕಾರದಿಂದ ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಸಹಕಾರಿಯಾಯಿತು ಎಂದು ಹೇಳಿದರು.