ನೂತನ ಎಸ್ಪಿ ಅಧಿಕಾರ ಸ್ವೀಕಾರ
ಶಿವಮೊಗ್ಗ: ಜಿಲ್ಲೆಯ ನೂತನ ಪೊಲೀಸ್ ರಕ್ಷಣಾಧಿಕಾರಿಯಾಗಿ ಕೌಶಲೇಂದ್ರ ಕುಮಾರ್ ಬುಧವಾರ ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಎಸ್ಪಿ ರಮನ್ ಗುಪ್ತಾ ಅವರಿಂದ ಅಧಿಕಾರ ದಂಡ ಪಡೆದುಕೊಂಡ ಕೌಶಲೇಂದ್ರ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ತಾವು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯುವುದಿಲ್ಲ. ಕಾನೂನು ಬಿಟ್ಟು ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ಪ್ರಭಾವ ಹೆಚ್ಚಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಕೆಲಸ ಮಾಡುವುದು ಸವಾಲಿನ ಕೆಲಸವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ಪ್ರದೇಶಗಳೂ ನನಗೆ ಒಂದೇ. ಆ ರೀತಿ ಎಂದುಕೊಳ್ಳಬೇಕಾಗಿಲ್ಲ. ಸರ್ಕಾರ ಎಲ್ಲಿ ಕೆಲಸ ನಿರ್ವಹಿಸಲು ಸೂಚಿಸುತ್ತದೋ ಅಲ್ಲಿ ಕಾರ್ಯನಿರ್ವಹಿಸುವುದು ಕರ್ತವ್ಯ ಎಂದರು.
ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಆದ್ಯತೆ ನೀಡಲಾಗುವುದು. ಅಪರಾಧ ಚಟುವಟಿಕೆಗಳ ಕಡಿವಾಣಕ್ಕೆ ಕ್ರಮಕೈಗೊಳ್ಳಲಾಗುವುದು. ಇದರ ಜೊತೆಗೆ ಸಂಚಾರ ವ್ಯವಸ್ಥೆ ಸುಧಾರಣೆ, ಅಗತ್ಯವಾದಲ್ಲಿ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ತರಲಾಗುವುದು ಎಂದು ತಿಳಿಸಿದರು.
ಇಲಾಖೆಯನ್ನು ಮತ್ತಷ್ಟು ಜನ ಸ್ನೇಹಿಯಾಗಿ ಮಾಡಲಾಗುವುದು. ನಾಗರಿಕರಿಗೆ ಉತ್ತಮ ಸೇವೆ ನೀಡಲಾಗುವುದು, ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ನಿಗರ್ಮಿತ ಎಸ್ಪಿ ರಮನ್ ಗುಪ್ತಾ ಹಾಗೂ ತಾವು ಒಂದೇ ಬ್ಯಾಚ್‌ನವರಾಗಿದ್ದು ಸ್ನೇಹಿತರಾಗಿದ್ದೇವೆ. ಅವರ ಮಾರ್ಗದರ್ಶನ ಪಡೆದು ಉತ್ತಮ ಕೆಲಸ ಮಾಡುವುದಾಗಿ ಹೇಳಿದರು.
ಮಂಡ್ಯ ಅನುಭವ: ಕೌಶಲೇಂದ್ರ ಕುಮಾರ್ ಮೂಲತಃ ಬಿಹಾರದ ಪಾಟ್ನಾದವರು. 2005ರ ಬ್ಯಾಚ್‌ನ ಅಧಿಕಾರಿಯಾಗಿದ್ದಾರೆ. ಗುಲ್ಬರ್ಗದಲ್ಲಿ ಪ್ರೊಬೆಷನರಿ ಎಸ್ಪಿಯಾಗಿ, ಮಂಗಳೂರಿನಲ್ಲಿ ಹೆಚ್ಚುವರಿ ಎಸ್ಪಿಯಾಗಿ ನಂತರ ಮಂಡ್ಯದಲ್ಲಿ ಎಸ್ಪಿಯಾಗಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇವರು ಕಾನೂನು ಸ್ನಾತಕೋತ್ತರ ಪದವೀಧರರಾಗಿದ್ದು, ಕಾವೇರಿ ವಿಚಾರವಾಗಿ ನಡೆದ ಹೋರಾಟವನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.