ಬಿದನೂರಿನಲ್ಲಿ ರಾಜ್ಯಮಟ್ಟದ ಕ್ರಿಕೆಟ್
ಹೊಸನಗರ: ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಆ ಭಾಗದ ಕ್ರಿಯಾಶೀಲತೆಯನ್ನು ಗುರುತಿಸುತ್ತದೆ ಎಂದು ಕುವೆಂಪು ವಿವಿ ಕ್ರೀಡಾಪಟು ತೀರ್ಥಹಳ್ಳಿ ಅಬ್ದುಲ್ ಕಲಾಂ ಹೇಳಿದರು.
ತಾಲೂಕಿನ ಬಿದನೂರು ನಗರ ಚನ್ನಮ್ಮಾಜಿ ಕ್ರೀಡಾಂಗಣದಲ್ಲಿ ಸೂರಜ್ ಇಲವೆನ್ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿದ ಅವರು, ಕ್ರೀಡೆಗಳ ಬಗ್ಗೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡುವಂತೆ ಆಗ್ರಹಿಸಿದರು.
ಕ್ರಿಯಾಶೀಲತೆ ಅಗತ್ಯ: ಗ್ರಾಮೀಣ ಪ್ರದೇಶದಲ್ಲಿ ರಾಜ್ಯಮಟ್ಟದ ಪಂದ್ಯಾವಳಿ ನಡೆಸುವುದು ಸುಲಭವಲ್ಲ. ಆದರೆ ಯುವಕರು ಕ್ರಿಯಾಶೀಲರಾಗಿದ್ದರೆ ಯಾವುದೇ ಕಾರ್ಯಕ್ರಮ ಆಯೋಜಿಸಲು ಸಾಧ್ಯ ಎಂದರು. ಲೆದರ್ ಬಾಲ್ ಕ್ರಿಕೆಟ್ಗೆ ಉತ್ತಮ ಅವಕಾಶವಿದ್ದು, ಯುವಕರು ಪಾಲ್ಗೊಳ್ಳಬೇಕು. ತಾಲೂಕು, ಜಿಲ್ಲೆ, ರಾಜ್ಯ ಹೀಗೆ ಪ್ರತಿಭೆಯಿದ್ದರೆ ಭಾರತ ತಂಡ ಸೇರುವ ಅವಕಾಶ ಪಡೆಯಬಹುದು ಎಂದರು. ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಮಾತನಾಡಿದರು.
ಸಮಾರೋಪ: ಮೂರು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಯ ಸಮಾರೋಪ ಜ.25 ರಂದು ನಡೆಯಲಿದೆ. ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥ ಗೌಡ ಬಹುಮಾನ ಮತ್ತು ಟ್ರೋಪಿ ವಿತರಿಸಲಿದ್ದಾರೆ. ಸಿಆರ್ಪಿಎಫ್ ಯೋಧ ಎಂ. ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಶಾರದಮ್ಮ, ಪ್ರಮುಖರಾದ ಮಧುಕರ್, ಯಡೂರು ಸುಂದರ ಮತ್ತು ಸೂರಜ್ ಇಲವೆನ್ ತಂಡದ ನಾಯಕ ಪ್ರಕಾಶ್ ಮಳಲಿ ಉಪಸ್ಥಿತರಿದ್ದರು.
----