ಮೂಲಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಸಾಗರ: ಕುಡಿಯುವ ನೀರು, ಬೀದಿದೀಪ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಆವಿನಹಳ್ಳಿಯಲ್ಲಿ ವಿವಿಧ ಸ್ತ್ರೀಶಕ್ತಿ ಸಂಘಟನೆಗಳು ಹಾಗೂ ಗ್ರಾಮಸ್ಥರು ಆವಿನಹಳ್ಳಿ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ನಾಗೇಂದ್ರ ಭಟ್, ಕಳೆದ ಎರಡು ತಿಂಗಳುಗಳಿಂದ ಆವಿನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಈ ಬಗ್ಗೆ ಗ್ರಾಮಸ್ಥರು ಪಂಚಾಯ್ತಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ನೀರನ್ನು ಸರಬರಾಜು ಮಾಡುತ್ತಿದ್ದ ಕೊಳವೆಬಾವಿ ಹಾಳಾಗಿದ್ದು, ಆಡಳಿತ ನಡೆಸುವವರು ಅದನ್ನು ದುರಸ್ತಿ ಮಾಡಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಈಗಲೇ ನೀರಿನ ಸಮಸ್ಯೆ ಉಂಟಾದರೆ ಮುಂದೆ ಜನರು ಕುಡಿಯುವ ನೀರಿಗೂ ಹಾಹಾಕಾರ ಅನುಭವಿಸುವಂತೆ ಆಗುತ್ತದೆ ಎಂದರು.
ನಾಡಕಚೇರಿ ಶಿಥಿಲಾವಸ್ಥೆ: ಗ್ರಾಮಸ್ಥರಾದ ಸಿದ್ದವೀರಪ್ಪಗೌಡ ಮಾತನಾಡಿ, ಪಂಚಾಯ್ತಿ ವ್ಯಾಪ್ತಿಯಲ್ಲಿ ಬೀದಿದೀಪ ನಿರ್ವಹಣೆ ಫಲಪ್ರದವಾಗಿ ನಡೆಯುತ್ತಿಲ್ಲ. ರಾತ್ರಿವೇಳೆ ಜನರು ಕತ್ತಲಿನಲ್ಲಿಯೆ ಸಂಚಾರ ಮಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಪಂಚಾಯ್ತಿ ವ್ಯಾಪ್ತಿಯ ನಾಡಕಚೇರಿ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಯಾವಾಗ ಬೀಳುತ್ತದೆಯೋ ಎನ್ನುವ ಸ್ಥಿತಿಯಲ್ಲಿದೆ. ನಾಡಕಚೇರಿ ರಿಪೇರಿ ಮಾಡುವಂತೆ ಗ್ರಾಮಸ್ಥರು ಮಾಡಿದ ಮನವಿಗೆ ಯಾವುದೆ ಪುರಸ್ಕಾರ ಸಿಗುತ್ತಿಲ್ಲ. ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿದ್ದರೂ ತಾಲ್ಲೂಕು ಪಂಚಾಯ್ತಿ ಸದಸ್ಯರು, ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಸದಸ್ಯರು ಬಾರದೆ ಇರುವುದು ಖಂಡನೀಯ ಎಂದು ತಿಳಿಸಿದರು.
ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಸಫಿಯಾ ಅಬೂಬಕರ್, ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಗ್ರಾಮ ಪಂಚಾಯ್ತಿ ಆಡಳಿತ ಪೂರ್ಣ ವಿಫಲಗೊಂಡಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯ ಸಿಬ್ಬಂದಿಗಳ ಕೊರತೆಯಿದ್ದು, ಅದನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಈತನಕ ಕ್ರಮ ಜರುಗಿಸಿಲ್ಲ. ಮುಂದಿನ ಒಂದು ವಾರದಲ್ಲಿ ಕುಡಿಯುವ ನೀರು, ಬೀದಿದೀಪ, ಆಸ್ಪತ್ರೆಯ ವೈದ್ಯಸಿಬ್ಬಂದಿಗಳನ್ನು ನೇಮಿಸದೆ ಹೋದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜು ಎಂ. ಪಟೇಲ್, ಪ್ರೇಮಾ ಮಂಜುನಾಥ ಆಚಾರ್, ನಾರಾಯಣ ಪೂಜಾರಿ, ದಿವ್ಯ ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಸರೋಜಮ್ಮ, ಅವಿನ್ ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.