ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರೈಸ್‌ಮಿಲ್‌ನಲ್ಲಿ ಕಳ್ಳತನಕ್ಕೆ ಯತ್ನಸಿದ್ದ 8 ಮಂದಿ ಬಂಧನ

Lingaraj Badiger
Updated On : 24 Jan 2013, 10:52 am

ಸಾಗರ: ಕಳೆದ ಜ.14ರಂದು ಬೆಳಗಿನ ಜಾವ ತಾಲೂಕಿನ ಆನಂದಪುರಂ ಸಂತೋಷ್ ರೈಸ್ ಮಿಲ್ಲಿಗೆ ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿ ಪರಾರಿಯಾಗಿದ್ದ ಬೆಂಗಳೂರಿನ ಹೊಸೂರು ರಸ್ತೆಯ ಎಂಟು ಮಂದಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ವೆಂಕಟೇಶ್, ಗೋಪಿ, ಪ್ರಭು, ಪೌಲ್ ಜೂಲಿಯನ್, ಕರ್ಣ, ಹರೀಶ್, ಬಾಲು, ಗಣೇಶ್, ಶಿವರಾಜ್ ಬಂಧಿತ ಆರೋಪಿಗಳು. ಬಂಧಿತರಲ್ಲಿ ಒಬ್ಬನಾಗಿರುವ ವೆಂಕಟೇಶ ಎಂಬುವವರ ಪತ್ನಿ ಜ್ಯೋತಿ ಈ ಹಿಂದೆ ಇದೇ ಮಿಲ್ಲಿನಲ್ಲಿ ಕೆಲಸ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಬತ್ತ ಹಾಗೂ ಅಕ್ಕಿಯ ವಹಿವಾಟು, ಪ್ರತಿದಿನ ಲಕ್ಷಾಂತರ ರುಪಾಯಿ ಹಣದ ವ್ಯವಹಾರಗಳ ಬಗ್ಗೆ ಆಕೆ ಮಾಹಿತಿ ಹೊಂದಿದ್ದಳು. ವಹಿವಾಟಿನ ಬಗ್ಗೆ ಆಕೆ ನೀಡಿದ ಸುಳಿವಿನ ಆಧಾರದ ಮೇಲೆ ಕಳೆದ ಜ.14ರ ಬೆಳಗಿನಜಾವ ಟೆಂಪೋ ಟ್ರಾವೆಲರ್ ವಾಹನದಲ್ಲಿ ಆರೋಪಿಗಳು ಆನಂದಪುರಂಗೆ ಬಂದಿದ್ದಾರೆ.
ಮೊದಲು ಜೋಗಕ್ಕೆ ಹೋಗಿದ್ದ ಆರೋಪಿಗಳ ತಂಡ, ತಡರಾತ್ರಿ ಮಚ್ಚು ಹಾಗೂ ಲಾಂಗುಗಳನ್ನು ಹಿಡಿದು ಸಂತೋಷ ರೈಸ್‌ಮಿಲ್ಲಿಗೆ ನುಗ್ಗಿ ಡಕಾಯಿತಿಗೆ ಪ್ರಯತ್ನ ನಡೆಸಿದ್ದಾಗ ಗ್ರಾಮಸ್ಥರೊಬ್ಬರು ಅದರ ಸುಳಿವು ಹಿಡಿದು ಜನರಿಗೆ ಸುದ್ದಿ ಮುಟ್ಟಿಸಿದಾಗ ಅವರೆಲ್ಲರೂ ಪರಾರಿಯಾಗಿದ್ದರು. ಆರೋಪಿಗಳು ತಂದಿದ್ದ ವಾಹನದ ನಂಬರ್ ಆಧಾರದ ಮೇಲೆ ಅವರ ವಿಳಾಸವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬುಧವಾರ ಆರೋಪಿಗಳನ್ನು ಇಲ್ಲಿನ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮುಂದಿನ ತನಿಖೆಗಾಗಿ ಪೊಲೀಸರು ಅವರನ್ನು ಮತ್ತೆ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.  ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಜಿ.ಸಿ. ರಾಜು, ಸಿಬ್ಬಂದಿ ಕಿರಣಕುಮಾರ್ ಡಿ.ವೈ., ಪ್ರಕಾಶ್, ಹಜರತಾಲಿ, ರವಿ, ಗಿರೀಶಬಾಬು, ಕಿರಣ್, ಕುಮಾರ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement