ಸಮಾಜ ಘಾತುಕ ಶಕ್ತಿಗಳಿಗೆ ಟಿಕೆಟ್: ಆತಂಕ
ಶಿವಮೊಗ್ಗ: ರಾಜಕೀಯ ಪಕ್ಷಗಳು ಕೊಲೆಗಡುಕರಿಗೆ, ಡಕಾಯಿತರಿಗೆ, ಅತ್ಯಾಚಾರ ಮಾಡಿದವರಿಗೆ ಟಿಕೆಟ್ ನೀಡುತ್ತಿದ್ದು, ಜನರ ಹಿತಕ್ಕಾಗಿ ದುಡಿಯುವ ಜನಪ್ರತಿನಿಧಿಗಳು ಕಡಿಮೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಡಳಿತ ಶುಕ್ರವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರ ಸಿಕ್ಕಾಗ ಎಷ್ಟು ಬೇಕೋ ಅಷ್ಟು ಲೂಟಿ ಮಾಡುತ್ತಿದ್ದಾರೆ. ಮೂರ್ಖರಿಗೆ ರಾಜಕೀಯ ಕ್ಷೇತ್ರ ಕೊನೆಯ ಆಯ್ಕೆಯಾಗಿದೆ ಎಂಬ ಮೇಧಾವಿಯೊಬ್ಬರ ಮಾತು ಸತ್ಯವಾಗಿದೆ ಎಂದು ಭ್ರಷ್ಟ ರಾಜಕಾರಣಿಗಳ ವಿರುದ್ಧ ನಗು ನಗುತ್ತಲೇ ಹರಿಹಾಯ್ದರು.
ಲೂಟಿ ಮಾಡುತ್ತಿರುವ ರಾಜಕಾರಣಿಗಳು: ತಮ್ಮ ಮಾತಿನುದ್ದಕ್ಕೂ ವ್ಯಂಗ್ಯ ಹಾಗೂ ಹಾಸ್ಯವಾದ ಮಾತುಗಳಿಂದ ವಿದ್ಯಾರ್ಥಿಗಳನ್ನು ನಕ್ಕು ನಲಿಸಿದ ಜಿಲ್ಲಾಧಿಕಾರಿಗಳು, ಪರೋಕ್ಷವಾಗಿ ಪ್ರಸ್ತುತ ಭ್ರಷ್ಟ ರಾಜಕೀಯ ವ್ಯವಸ್ಥೆ ಹಾಗೂ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡ ರು. ಪ್ರಸ್ತುತ ರಾಜಕೀಯ ಕ್ಷೇತ್ರ ಹದಗೆಟ್ಟಿದ್ದು, ಇಲ್ಲಿ ಚುನಾಯಿತರಾಗುವ ವ್ಯಕ್ತಿಗಳು ಸಮಾಜ ಸುಧಾರಣೆ ಮಾಡಲು ಆಯ್ಕೆ ಆಗುತ್ತಿಲ್ಲ. ಬದಲಿಗೆ ಅಧಿಕಾರದಲ್ಲಿ ಇರುವಷ್ಟು ದಿನ ಭ್ರಷ್ಟಾಚಾರದಲ್ಲಿ ತೊಡಗಿ ಸಾಕಷ್ಟು ಲೂಟಿ ಮಾಡುವಲ್ಲಿ ನಿರತರಾಗಿದ್ದಾರೆ. ಆದ್ದರಿಂದ ಯುವ ಮತದಾರರು ಮುಂದಿನ ಚುನಾವಣೆ ವೇಳೆ ಒಳ್ಳೆಯ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಯುವಕರಿಗೆ ಕರೆ ಕೊಟ್ಟರು.
ಆತ್ಯಾಚಾರಿಗಳು ಜನ ಸೇವಕರು: ದೇಶಕ್ಕೆ ಸ್ವತಂತ್ರ್ಯ ಬಂದ ವೇಳೆ ಆದ ಮೊದಲೆರಡು ಚುನಾವಣೆಗಳು ಚೆನ್ನಾಗಿ ನಡೆದು, ದೇಶ ಭಕ್ತರು, ಚಿಂತನ ವ್ಯಕ್ತಿಗಳು ಹಾಗೂ ಸಮಾಜಸೇವಕರು ಆಯ್ಕೆಯಾದರು. ಇಂದಿನ ಚುನಾವಣೆಯಲ್ಲಿ ಆಯ್ಕೆ ಆಗುವ ವ್ಯಕ್ತಿಗಳು ಭ್ರಷ್ಟಾಚಾರ, ಆತ್ಯಾಚಾರದಂತಹ ಕ್ರಿಮಿನಲ್ ಹಿನ್ನಲೆ ಇರುವವರೆ ಆಯ್ಕೆ ಆಗುತ್ತಿದ್ದಾರೆ. ಇಂತಹ ಪ್ರವೃತಿ ಕಡಿಮೆ ಮಾಡಬೇಕು ಎಂದರು.
ಇಂದೇ ಪ್ರತಿಜ್ಞೆ ಮಾಡಿ: “¾Úß¢Û ರಾಜಾ ತಥಾ ®ÚÃeÛ’ ಎಂಬಂತೆ ಮತದಾರರು ಕೂಡ ಜಾತಿ, ಹಣ, ಪ್ರಾಂತ್ಯ ಎಂಬ ಆಮಿಷಗಳಿಗೆ ಬಲಿಯಾಗಿ ಮತ ಚಲಾಯಿಸುತ್ತಿರುವುದು ದುರಂತ. ಇಂತಹವುಗಳಿಗೆ ಪ್ರೇರಣೆಯಾಗದೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದು ಇಂದೇ ಪ್ರತಿಜ್ಞೆ ಮಾಡಿ ಎಂದ ಅವರು, ಭಾರತದ ಭವಿಷ್ಯವನ್ನು ಕಟ್ಟುವವರು ನೀವುಗಳೇ, ಪ್ರತಿಯೊಬ್ಬರು ಮತದಾನದ ಹಕ್ಕನ್ನು ಪಡೆಯಬೇಕು. ಹಣಕ್ಕಾಗಿ ಮತ ಮಾರಾಟ ಮಾಡಿಕೊಳ್ಳುವುದನ್ನು ನಿಮ್ಮಿಂದ ತಡೆಯುವ ಕೆಲಸ ಆಗಬೇಕು. ಇದು ಸಾಧ್ಯವಾಗದಿದ್ದಲ್ಲಿ ಅಲ್ಲಿಯವರೆಗೂ ಒಳ್ಳೆ ಸರ್ಕಾರ ಬರಲು ಸಾಧ್ಯವಿಲ್ಲ ಎಂದರು.
ಚುನಾವಣೆ ಮಹಾಯುದ್ಧದಂತೆ: ದೇಶದಲ್ಲಿ ಸಮಗ್ರವಾದ ಬದಲಾವಣೆ ಯುವಕರಿಂದ ಆಗಬೇಕು. ಗಾಂಧಿಜೀ, ಯುವಶಕ್ತಿಯಿಂದ ಮಾತ್ರ ದೇಶದಲ್ಲಿ ಹೊಸ ಕ್ರಾಂತಿ ಸಾಧ್ಯ ಎಂದು ನಂಬಿದ್ದರು. ಅಂತೆಯೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ನಡೆಯುವ ಮಹಾಯುದ್ದ ಎಂದೇ ಚುನಾವಣೆಯನ್ನು ಕರೆಯಲಾಗುತ್ತದೆ. ಆದರೆ ಇಂದು ಇದರ ಸನ್ನಿವೇಶಗಳೇ ಬದಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಡ್ಡಾಯ ಮತದಾನ ಅಗತ್ಯ: ಉತ್ತಮ ಜನ ಪ್ರತಿನಿಧಿಗಳ ಆಯ್ಕೆಗೆ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು. 18 ವರ್ಷ ಮೇಲ್ಪಟ್ಟ ಎಲ್ಲ ವ್ಯಕ್ತಿಗಳು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಬೇಕು. ಭಾಷೆ, ಪ್ರಾಂತ್ಯ, ಧರ್ಮ, ಜಾತಿ, ಲಿಂಗ ತಾರತಮ್ಯ ಮಾಡದೆ ಉತ್ತಮ ವ್ಯಕ್ತಿಗಳಿಗೆ ಮತದಾನ ಮಾಡಬೇಕು. ಜನರ ಆಶೋತ್ತರಗಳಿಗೆ ಸ್ಪಂದಿಸುವ ಸರ್ಕಾರಗಳು ರಚನೆಯಾಗಬೇಕು. ಈ ನಿಟ್ಟಿನಲ್ಲಿ ಗಂಭೀರ ಆಲೋಚನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀರಂಗಯ್ಯ, ಉಪ ವಿಭಾಗಾಧಿಕಾರಿ ಎಂ.ಎಲ್. ವೈಶಾಲಿ, ನಗರಾಭಿವೃದ್ಧಿ ಕೋಶಾಧಿಕಾರಿ ರವಿ, ನಗರಸಭೆ ಆಯುಕ್ತ ಪಿ.ಜಿ. ರಮೇಶ್, ಡಿಡಿಪಿಐ ಕುಮಾರ್, ಡಿಡಿಪಿಯು ನಾಗರಾಜ್, ಪಿಯು ಜಂಟಿ ನಿರ್ದೇಶಕ ಶಂಕರಗುಪ್ತಾ, ತಹಸೀಲ್ದಾರ್ ಕೊಟ್ರೇಶ್, ನಗರಸಭೆ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಇದ್ದರು.