ಸ್ನೇಹ ಸಿಂಚನ ಕಲಾ-ಸಾಹಿತ್ಯ ವೇದಿಕೆ ವಾರ್ಷಿಕೋತ್ಸವ
ಭದ್ರಾವತಿ: ಕಲೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸ್ನೇಹ ಸಿಂಚನ ಕಲಾ ಸಾಹಿತ್ಯ ವೇದಿಕೆ ಕೊಡುಗೆ ಅಪಾರ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಸೋಮಶೇಖರಯ್ಯ ಹೇಳಿದರು.
ಲಯನ್ಸ್‌ಕ್ಲಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸ್ನೇಹ ಸಿಂಚನ ಕಲಾ-ಸಾಹಿತ್ಯ ವೇದಿಕೆಯ ಎಂಟನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣ ಇಲಾಖೆಗೆ ಅವರು ಅನೇಕ ಕಾರ್ಯಕ್ರಮಗಳನ್ನು ನೀಡಿರುವುದನ್ನು ಸ್ಮರಿಸಿಕೊಂಡು ವೇದಿಕೆಯ ಪ್ರತಿಭೆಗಳನ್ನು ಕೊಂಡಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್. ಬಸವರಾಜ್ ಸಾಮಾಜಿಕ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ವೇದಿಕೆ ನೀಡಿರುವ ಕೊಡುಗೆ ಅಪಾರವಾದುದು ಎಂದರು. ರಾಣೆಬೆನ್ನೂರಿನ ಪೌರಾಯುಕ್ತ ಎಂ.ಎಂ. ಕರಭೀಮಣ್ಣ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಬಿ.ಎಂ. ದಾರುಕೇಶ್, ಸಿ. ಜಯಪ್ಪ, ಕೂಬಾನಾಯ್ಕ ಇದ್ದರು.
ರಾಜ್ಯ ಮಟ್ಟದ ಉತ್ತಮ ಕೇಂದ್ರ ಸಂಪನ್ಮೂಲ ವ್ಯಕ್ತಿ ಶಿವಾನಂದಯ್ಯ ಮಠದ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಗೆ ಸಿಂಚನ ಹಾಸ್ಯೋತ್ಸವವನ್ನು ಹಾಸ್ಯ ಸಾಹಿತಿಗಳಿಂದ ಏರ್ಪಡಿಸಲಾಗಿತ್ತು. ವೇದಿಕೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ದೇವರಾಜೇಗೌಡ ಬಹುಮಾನ ವಿತರಣೆ ಮಾಡಿದರು. ವೇದಿಕೆಯ ಅಧ್ಯಕ್ಷ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.