ಒಳ್ಳೆಯದಕ್ಕೆ ಬೆಲೆ ಇಲ್ಲ ಎಂಬುದು ತಪ್ಪು
ಶಂಭುಲಿಂಗೇಶ್ವರ ದೇಗುಲದ ಶಿಲಾನ್ಯಾಸ ನೆರವೇರಿಸಿದ ರಾಘವೇಶ್ವರ ಶ್ರೀ
ಹೊಸನಗರ: ಕಲಿಯುಗದಲ್ಲಿ ಪಾಪಕಾರ್ಯ ಹೆಚ್ಚು. ಒಳ್ಳೆಯದಕ್ಕೆ ಬೆಲೆ ಇಲ್ಲ ಎಂಬ ಮಾತಿದೆ. ಇದು ತಪ್ಪು ಕಲ್ಪನೆಯಾಗಿದ್ದು ಧರ್ಮ, ದೇವರು, ಸಂಸ್ಕೃತಿ ಬಗ್ಗೆ ಪ್ರೀತಿ ಜನರಲ್ಲಿ ಹೆಚ್ಚುತ್ತಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಸಂಪೆಕಟ್ಟೆ ಸಮೀಪದ 1300 ವರ್ಷಗಳ ಇತಿಹಾಸ ಹೊಂದಿರುವ ಶಂಭುಲಿಂಗೇಶ್ವರ ದೇಗುಲದ ರತ್ನಾನ್ಯಾಸ ಮತ್ತು ಶಿಲಾನ್ಯಾಸ ನೆರವೇರಿಸಿದ ಅವರು, ದೇವರ ಕೆಲಸಗಳು ಶಾಶ್ವತವಾಗಿರಬೇಕು ಅದರ ಉಪಯೋಗ ಮುಂದಿನ ಪೀಳಿಗೆಗಳಿಗು ಲಭ್ಯವಾಗಬೇಕು ಎಂದರು.
ತಾರತಮ್ಯ ಸಲ್ಲ: ನಮ್ಮ ನಡುವಿನ ಸಾಮರಸ್ಯ ಭಾವನೆಯನ್ನು ಬೇರ್ಪಡಿಸಲು ಸಾಕಷ್ಟು ಕಾರಣಗಳಿವೆ. ತಲೆಮಾರು, ವರ್ಗ, ಜಾತಿ, ರಾಜಕೀಯ ಅಂತರಗಳು ಇದಕ್ಕೆ ಕಾರಣ. ಈ ಅಂತರ ಹೋಗಲಾಡಿಸಿ ಒಂದುಗೂಡಿಸುವ ಸೂತ್ರವೆ ದೇವಸ್ಥಾನವಾಗಿದ್ದು, ಒಂದೊಂದು ಪುಷ್ಪವಾಗಿರುವ ವ್ಯಕ್ತಿಗಳನ್ನು ಜೋಡಿಸುವ ಶಕ್ತಿ ಈ ಸೂತ್ರಕ್ಕಿದೆ. ದೇಗುಲ ಶ್ರೀಮಂತವಾಗಿದ್ದರೆ ಮನೆ ಮನಗಳು ತುಂಬಿರುತ್ತದೆ ಎಂದು ತಿಳಿಸಿದರು.
ಕೊಡಚಾದ್ರಿ ಪ್ರಗತಿಯಾಗಬೇಕು: ಈ ಭಾಗದ ಧಾರ್ಮಿಕ, ಪ್ರಾಕೃತಿಕ ಶ್ರೀಮಂತಿಕೆಯ ತಾಣ ಕೊಡಚಾದ್ರಿ ಗಿರಿಯ ಪ್ರಗತಿಯಾಗಬೇಕು. ಆದರೆ ಅದು ಅಲ್ಲಿಯ ಪಾವಿತ್ರತೆಗೆ ಮಾರಕವಾಗಬಾರದು. ಕೊಡಚಾದ್ರಿಯ ಸಂರಕ್ಷಣೆಗೆ ಮನಸ್ಸುಗಳು ಒಂದಾಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕಿಮ್ಮನೆ ರತ್ನಾಕರ್, ಶಂಭುಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಈಗಾಗಲೆ ನೀಡಿರುವ ಸರ್ಕಾರದ ಹಣ ಸಾಲದು. ಹೆಚ್ಚಿನ ಅನುದಾನಕ್ಕಾಗಿ ಇರುವ ಅವಧಿಯೊಳಗೆ ಸದನದಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.
ತಾಪಂ ಮಾಜಿ ಸದಸ್ಯ ಕೆ.ವಿ. ಕೃಷ್ಣಮೂರ್ತಿ ಶಂಭುಲಿಂಗೇಶ್ವರ ದೇಗುಲದ ಐತಿಹ್ಯ, ಜೀರ್ಣೋದ್ಧಾರ ಮತ್ತು ಶ್ರೀಗಳ ಸಂಕಲ್ಪ ಕುರಿತಂತೆ ಪ್ರಾಸ್ತಾವಿಕ ಮಾತನಾಡಿದರು. ಎಂಪಿಎಂ ಅಧ್ಯಕ್ಷ ಮಾಜಿ ಶಾಸಕ ಆರಗ ಜ್ಞಾನೇಂದ್ರ, ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥಗೌಡ, ಜಿಪಂ ಸದಸ್ಯೆ ಶುಭಾಕೃಷ್ಣಮೂರ್ತಿ, ತಾಪಂ ಸದಸ್ಯೆ ಮಲ್ಲಿಕಾ ಸುರೇಂದ್ರ, ಗ್ರಾಪಂ ಅಧ್ಯಕ್ಷೆ ರಮಾವತಿ, ಪ್ರಭಾರ ತಹಸೀಲ್ದಾರ್ ರಾಮಕೃಷ್ಣ, ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಸ್ವಾಮಿ, ಪ್ರಮುಖರಾದ ಕೊಳಗಿ ಲಕ್ಷ್ಮೀನಾರಾಯಣ ಇದ್ದರು.
ಮಲ್ಲಾಡಿ ಸುಬ್ರಾಯ ದಂಪತಿಗಳು ಸಭಾಪೂಜೆಯೊಂದಿಗೆ ಸ್ವಾಗತಿಸಿದರು. ಕೋಲಕೈ ಕುಮಾರಭಟ್ ವಂದಿಸಿದರು. ಸಂಪೆಕಟ್ಟೆ ಕುಮಾರ್ ನಿರೂಪಿಸಿದರು.