ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪ್ರಾಮಾಣಿಕೆ ಇಲ್ಲದಿದ್ದಲ್ಲಿ ಬೆಳವಣಿಗೆ ಕುಂಠಿತ

Lingaraj Badiger
Updated On : 28 Jan 2013, 11:15 am

ಶಿವಮೊಗ್ಗ: ಪ್ರತಿಯೊಬ್ಬರೂ ಅವರ ಕಾರ್ಯ ವ್ಯಾಪ್ತಿಯಲ್ಲಿ ಸತ್ಯ ಮತ್ತು ಪ್ರಾಮಾಣಿಕತೆಯಿಂದ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ಅವರವರ ಬೆಳವಣಿಗೆ ಸಾಧ್ಯವಿಲ್ಲ. ಜೊತೆಗೆ ದೇಶ ಮತ್ತು ಸಮಾಜದ ಬೆಳವಣಿಗೆ ಕುಂಠಿತವಾಗುತ್ತದೆ. ಜಾತಿ, ಭಯೋತ್ಪಾದನೆ ಹೆಚ್ಚಾಗುತ್ತದೆ ಎಂದು ಹೈಕೋಟ್ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಹೇಳಿದರು.
ಇಲ್ಲಿನ ಬೆಕ್ಕಿನ ಕಲ್ಮಠದಲ್ಲಿ ಶ್ರೀ ಗುರುಬಸವ ಸ್ವಾಮಿಗಳ ಸ್ಮರಣೋತ್ಸವ ಸಮಿತಿ ಶ್ರೀಗಳ 101ನೇ ಪುಣ್ಯ ಸ್ಮರಣೆ ಅಂಗವಾಗಿ ಹಮ್ಮಿಕೊಂಡ ಶರಣ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ವಾದಿ ಮತ್ತು ಪ್ರತಿವಾದಿಗಳು ಸತ್ಯ ಹೇಳಿದರೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಕೆಲವರು ಸುಳ್ಳುಕಂತೆಗಳನ್ನು ಹೇಳುವುದರಿಂದ ಸತ್ಯದ ಶೋಧನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ಆಧ್ಯಾತ್ಮವನ್ನು ಹಳ್ಳಿಹಳ್ಳಿಗೆ ತಲುಪಿಸಿ ಶೈಕ್ಷಣಿಕವಾಗಿ ಹುರಿದುಂಬಿಸುವ ಕೆಲಸ ಮಠಾಧೀಶರಿಂದ ಆಗುತ್ತದೆ. ಜನರಿಗೆ ಸ್ವಾತಂತ್ರ್ಯ, ಹಕ್ಕುಗಳು ಮೊಟಕುಗೊಂಡಾಗ ಅವರಿಗೆ ನ್ಯಾಯ ಒದಗಿಸುವ ಕೆಲಸ ನ್ಯಾಯಾಧೀಶರು, ನ್ಯಾಯವಾದಿಗಳು ಮಾಡುತ್ತಾರೆ. ಇದು ನಮ್ಮ ಕರ್ತವ್ಯ ಎಂದು ಹೇಳಿದರು.
ಆಧ್ಯಾತ್ಮದಲ್ಲಿ ಪಾಲ್ಗೊಳ್ಳಿ: ಸಮಾಜಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಮಠಾಧೀಶರು, ಸ್ವಾಮೀಜಿಗಳು ನಿರಂತರವಾಗಿ ಮಾಡುತ್ತಿದ್ದಾರೆ. 12ನೇ ಶತಮಾನದಲ್ಲೇ ಧರ್ಮ, ವರ್ಗ, ವರ್ಣ ಎಂಬುದಾಗಿ ಸಮಾಜ ವಿಂಗಡನೆ ಆಗಿತ್ತು. ಕೆಲವು ವರ್ಗಗಳಿಗೆ ಮಾತ್ರ ಆಧ್ಯಾತ್ಮದ ವರ್ಗಗಳು ಎಂದು ಮೀಸಲಾಗಿತ್ತು. ಇಂತಹ ಸನ್ನಿವೇಶದಲ್ಲಿ ಬಸವಣ್ಣನವರು ಧರ್ಮದ ಸ್ವರೂಪವನ್ನು ಜನರಿಗೆ ಮುಟ್ಟಿಸುವ ಮೂಲಕ  ಕ್ರಾಂತಿ ಮಾಡಿದರು. ಅತ್ಯಂತ ಕೆಳವರ್ಗದ ಜನರು ಆಧ್ಯಾತ್ಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು ಎಂದು ತಿಳಿಸಿದರು.
ಸ್ತ್ರೀ ಮೀಸಲಾತಿ ಬಗ್ಗೆ ಇಂದು ನಾವೆಲ್ಲಾ ಮಾತನಾಡುತ್ತಿದ್ದೇವೆ. ಆದರೆ, ಬಸವಣ್ಣನವರು 12ನೇ ಶತಮಾನದಲ್ಲಿಯೇ ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಪ್ರತಿಪಾದಿಸಿದ್ದರು. ಅವರಿಗೂ ಆಧ್ಯಾತ್ಮದ ಬಗ್ಗೆ ರೂಢಿಗೆ ತಂದರು ಎಂದು ಬಣ್ಣಿಸಿದರು.
ಸಮಾನತೆ, ಸಹಬಾಳ್ವೆ: 12ನೇ ಶತಮಾನದಲ್ಲಿ ಬಸವಣ್ಣನವರ ಕೆಲವು ತತ್ವಗಳನ್ನು ಪ್ರೇರಣೆಯಾಗಿ ಪಡೆದು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಅವರು ಹಾಕಿಕೊಟ್ಟ ಸಮಾನತೆ, ಸಹಬಾಳ್ವೆಯನ್ನು ಅಳವಡಿಸಿಕೊಳ್ಳುವ ಪ್ರಯತ್ನ ನಡೆದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ, ಜಮಖಂಡಿ ಓಲೆ ಮಠದ ಶ್ರೀ ಅಭಿನವ ಕುಮಾರ ಸ್ವಾಮೀಜಿ, ನ್ಯಾಯವಾದಿ ಶೋಭಾ ಪಾಟೀಲ್ ಹಾಜರಿದ್ದರು.
ಕಲಾವಿದ ಉಸ್ತಾದ್ ಹುಮಾಯೂನ್ ಹರ್ಲಾಪುರ ಅವರಿಂದ ವಚನ ಸಂಗೀತ ಪ್ರಸ್ತುತಗೊಂಡಿತು. ಬಾಲ ಕಲಾವಿದೆ ರಕ್ಷಿತಾ ನೃತ್ಯ ಪ್ರದರ್ಶನ ನೀಡಿದರು. ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಕಾರ್ಯಧ್ಯಕ್ಷ ಎಸ್.ಪಿ. ದಿನೇಶ್, ಪ್ರಧಾನ ಕಾರ್ಯದರ್ಶಿ ಎಚ್.ಸಿ. ಯೋಗೇಶ್, ಖಜಾಂಚಿ ಪಿ. ರುದ್ರೇಶ್ ಮತ್ತಿತರರು ಹಾಜರಿದ್ದರು.
ಪ್ರಶಸ್ತಿ ಪ್ರದಾನ: ಸೋಮವಾರ ಸಂಜೆ 5 ಗಂಟೆಗೆ ಭಾವೈಕ್ಯ ಸಮ್ಮೇಳನ ಮತ್ತು ಗುರು ಬಸವ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಹೊರನಾಡು ಕ್ಷೇತ್ರದ ಧರ್ಮದರ್ಶಿ ಭೀಮೇಶ್ವರ ಜೋಷಿ, ಬೆಳಗಾವಿ ವಿರಕ್ತ ಮಠದ ಶ್ರೀ ಶಿವಾನಂದ ಸ್ವಾಮೀಜಿ, ಜಿಲ್ಲಾಧಿಕಾರಿ ವೇದಮೂರ್ತಿ, ಜಿ.ಪಂ. ಸಿಇಓ ಸಂಜಯ ಬಿಜ್ಜೂರ್ ಉಪಸ್ಥಿತರಿರವರು. ಉದ್ಯಮಿ ರುದ್ರೇಗೌಡ ಅವರನ್ನು ಇದೇ ಸಂದರ್ಭದಲ್ಲಿ ಗುರು ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement