ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹಳ್ಳಿ ಹುಡುಗ ರಕ್ಷಿತ್‌ನ ಚಿನ್ನದ ಸಾಧನೆ

Lingaraj Badiger
Updated On : 28 Jan 2013, 11:13 am

ಶಿವಮೊಗ್ಗ: ಇದು ಹಳ್ಳಿ ಹುಡುಗನ ಚಿನ್ನದ ಸಾಧನೆಯ ಕಥೆ.
 ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಯಡೂರು ಗ್ರಾಮದ ಆ ಬಾಲಕನಿಗೆ ಮುಂದೊಂದು ದಿನ ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಸಾಧನೆ ಮಾಡುತ್ತೇನೆ, ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆಯುತ್ತೇನೆಂದು ಕನಸೂ ಕಂಡವನಲ್ಲ. ಆದರೆ, ಇದೆಲ್ಲಾ ಘಟಿಸಿಹೋಗಿದೆ. ಹಠ, ಛಲ, ಗುರಿಯೊಂದಿದ್ದರೆ ಏನನ್ನಾದರೂ ಸಾಧಿಸಲು  ಸಾಧ್ಯವಿದೆ ಎಂದು ತೋರಿಸಿಕೊಟ್ಟ ಸಾಧನೆಯದು.
 ಅದು ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ಸಿದ್ಧಗೊಂಡಿದ್ದ ಭವ್ಯ ವೇದಿಕೆ. ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಎರಡು ರಾಜ್ಯಗಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರಾಜಮಾನರಾಗಿದ್ದ ಅಪೂರ್ವ ಕ್ಷಣವದು. ಯಡೂರು ಗ್ರಾಮದ ಯುವಕ ಈ ಅತಿಥಿಯಿಂದ ಶಬ್ಬಾಸ್ ಗಿರಿ ಪಡೆದ, ಚಿನ್ನದ ಪದಕವನ್ನೂ ಕೊರಳಿಗೆ ಹಾಕಿಸಿಕೊಂಡ, ಹೀಗೆ ಚಿನ್ನದ ಗರಿ ಮುಡಿಗೇರಿಸಿಕೊಂಡಿದ್ದು ಹಳ್ಳಿಯ ಹೈದ ರಕ್ಷಿತ್ ವೈ.ಪಿ. ಜೋಯ್ಸ್.
ಮರೆಯಲಾಗದ ಘಟನೆ: ಎಲ್‌ಎಲ್‌ಎಲ್‌ಎಂ ಸ್ನಾತಕೋತ್ತರ ಪದವಿಯ ಇಂಟಲೆಕ್ಚುಯಲ್ ಪ್ರಾಪರ್ಟಿ ಲಾ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದು ಚಿನ್ನದ ಪದಕ ಪಡೆದುಕೊಂಡರು.
ಕನ್ನಡಪ್ರಭದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡ ರಕ್ಷಿತ್ ಜೋಯ್ಸ್, ಅದೊಂದು ಥ್ರಿಲ್ಲಿಂಗ್ ಅನುಭವ. ಆ ಘಳಿಗೆ ಬರುತ್ತದೆಂದು ನಿರೀಕ್ಷಿಸಿರಲಿಲ್ಲ. ಮೋದಿ ಹಸ್ತಲಾಘವ, ಸುಪ್ರಿಂ ಮುಖ್ಯ ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ಗೌರವ ಸಿಕ್ಕಿದ್ದು ಎಂದೆಂದು ಮರೆಯಲಾಗದ ಘಟನೆ ಎಂದು ಹೇಳಿದರು.
ಹಿನ್ನೋಟ: ಈಗ ಮಾಡಿರುವ ಸಾಧನೆ ಸುಲಭದ ಹಾದಿಯೇನಲ್ಲ. ರಕ್ಷಿತ್ ಜೋಯ್ಸ್ ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿಸಿದ್ದು, ತೀರ್ಥಹಳ್ಳಿ ಸಹ್ಯಾದ್ರಿ ಶಾಲೆಯಲ್ಲಿ. ನಂತರ ಪಿಯುಸಿಯನ್ನು ಅದೇ ಊರಿನ ತುಂಗಾ ಕಾಲೇಜಿನಲ್ಲಿ ಮುಗಿಸಿದರು. ಅದಕ್ಕಿಂತ ಮುಖ್ಯವಾಗಿ ಎಂದಿನಂತೆ ಅವರಿವರ ಒತ್ತಾಯಕ್ಕೆ ಮಣಿದು ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡಿದ್ದಾಯಿತು. ಅಲ್ಲಿಂದ ಮುಂದೆ ಶಿವಮೊಗ್ಗ ಜೆಎನ್‌ಎನ್‌ಸಿಯಲ್ಲಿ ಎಂಜಿನಿಯರಿಂಗ್ ಪ್ರವೇಶ ಪಡೆದು ಹಾಗೂ ಹೀಗೂ ಎರಡು ವರ್ಷಕಳೆದ ನಂತರ ಮುಂದೆ ಓದು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಎದುರಾದಾಗ ದಾರಿ ಕಂಡಿದ್ದು ಕಾನೂನು ಪದವಿ. ಅಪ್ಪ ಪ್ರಭಾಕರ ಎ ಜೋಯ್ಸ್ ತೀರ್ಥಹಳ್ಳಿಯ ಪ್ರಸಿದ್ಧ ವಕೀಲರು. ಅವರ ವೃತ್ತಿ ಛಾಯೆ ರಕ್ಷಿತ್ ಮೇಲೆ ಕೊಂಚ ಆವರಿಸಿದ್ದರಿಂದ ಕೊನೆಗೆ ಲಾಗೆ ಪ್ರವೇಶ ಪಡೆದಿದ್ದಾಯಿತು.
ಪದವಿ ಮುಗಿಯುತ್ತಿದ್ದಂತೆ ಎಲ್‌ಎಲ್‌ಎಂ ರಾಷ್ಟ್ರೀಯ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 262ನೇ ರ್ಯಾಂಕ್ ಇವರ ಪಾಲಾಯಿತು. ಮುಂದೆ ಗಾಂಧಿನಗರದ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಸ್ನಾತಕೋತ್ತರ ಕೋರ್ಸ್‌ಗೆ ಪ್ರವೇಶ. ಅಲ್ಲಿ ಹಠ, ಛಲದಿಂದ ಮಾಡಿದ ಅಧ್ಯಯನ ಈಗ ಚಿನ್ನದ ಪದಕ ತಂದುಕೊಟ್ಟಿದೆ.
ಮುಂದೇನು? 2013ರ ಜನವರಿ 19ರಂದು ಗಾಂಧಿನಗರದಲ್ಲಿ ನಡೆದ ಸಮಾರಂಭದಲ್ಲಿ ಚಿನ್ನದ ಪದಕ ಸ್ವೀಕರಿಸಿರುವ ರಕ್ಷಿತ್ ಸದ್ಯ ಬೆಂಗಳೂರಿನ ಹೈಕೋರ್ಟ್‌ನಲ್ಲಿ ಪ್ರಾಕ್ಟಿಸ್ ಆರಂಭಿಸಿಯಾಗಿದೆ.
ಗುಜರಾತ್‌ನಲ್ಲಿನ ಅನುಭವ ಹಂಚಿಕೊಂಡ ಅವರು, ಆಟೋಮೊಬೈಲ್, ಟೆಕ್ಸ್‌ಟೈಲ್ಸ್‌ನಲ್ಲಿ ಮುಂಚೂಣಿಗೆ ಬರುತ್ತಿರುವ ಗುಜರಾತ್‌ನಲ್ಲಿ ಉನ್ನತ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಅಲ್ಲಿ ಎರಡು ವರ್ಷ ಕಳೆದಿದ್ದೇ ನನಗೊಂದು ಅಪೂರ್ವ ಅನುಭವ ಎಂದರು.
ಅಂದ ಹಾಗೆ ಈ ಚಿನ್ನದ ಹುಡುಗನಿಗೆ ಒಂದು ಶುಭ ಹಾರೈಸಬೇಕೆಂದಿದ್ದರೆ ಇಲ್ಲಿದೆ ಸಂಪರ್ಕ ಸಂಖ್ಯೆ- 99162 39979.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement