ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮರು ಡಾಂಬರೀಕರಣದಿಂದ ದುಂದು ವೆಚ್ಚ: ಆರೋಪ

Lingaraj Badiger
Updated On : 29 Jan 2013, 11:07 am

ಶಿವಮೊಗ್ಗ: ಎಪಿಎಂಸಿಯಲ್ಲಿ ರಸ್ತೆ ಡಾಂಬರೀಕರಣ ನೆಪದಲ್ಲಿ ದುಂದು ವೆಚ್ಚ ಮಾಡಲಾಗುತ್ತಿದ್ದು, ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶ ಮಾಡಬೇಕೆಂದು ಅಣ್ಣಾ ಹಜಾರೆ ಹೋರಾಟ ಸಮಿತಿ ಜಿಲ್ಲಾಧಿಕಾರಿಯವರಿಗೆ ಸೋಮವಾರ ಮನವಿ ಅರ್ಪಿಸಿತು.
 ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಸುಸ್ಥಿತಿಯಲ್ಲಿರುವ ರಸ್ತೆಗೆ ಡಾಂಬರೀಕರಣ ಮಾಡಲಾಗುತ್ತಿದೆ. ಕೂಡಲೇ ಈ ಕೆಲಸಕ್ಕೆ ತಡೆ ಹಾಕಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಲಾಯಿತು.
ಉತ್ತಮ ರಸ್ತೆ: ಎಪಿಎಂಸಿಯಲ್ಲಿರುವ ಬಹುತೇಕ ಎಲ್ಲ ರಸ್ತೆಗಳೂ ಉತ್ತಮವಾಗಿವೆ. ಗುಂಡಿ ಬಿದ್ದಿಲ್ಲ. ವಾಹನ  ಓಡಾಟಕ್ಕೆ ಯಾವುದೇ ತೊಂದರೆಯೂ ಆಗಿಲ್ಲ. ಸಾರ್ವಜನಿಕರಿಂದಾಗಲೀ, ವರ್ತಕರಿಂದಾಗಲೀ ಯಾವುದೇ ದೂರುಗಳು ಕೇಳಿಬಂದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
 ಆದಾಗ್ಯೂ ಉತ್ತಮವಾಗಿರುವ ರಸ್ತೆಗಳ ಮೇಲೆಯೇ ಎಪಿಎಂಸಿಯವರು 2-3 ಇಂಚು ದಪ್ಪದಷ್ಟು ಜಲ್ಲಿ ಟಾರ್, ಮತ್ತು ಅದರ ಮೇಲೆ 1 ರಿಂದ 2 ಇಂಚು ದಪ್ಪದಷ್ಟು ಸಣ್ಣ ಜೆಲ್ಲಿ ಟಾರ್ ಹಾಕುವ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಇದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದು ಸಮಿತಿ ಸದಸ್ಯರು ಆರೋಪಿಸಿದರು.
 ಈ ರೀತಿಯ ಕಾಮಗಾರಿಯಿಂದ ಸಾರ್ವಜನಿಕ ಹಣ ಪೋಲಾಗುತ್ತಿದೆ. ಕೋಟ್ಯಂತರ ರೂಪಾಯಿ ದುಂದು ವೆಚ್ಚ ಮಾಡಲಾಗುತ್ತಿದೆ. ಇದು ನಿಜಕ್ಕೂ ಶೋಚನೀಯ ಸಂಗತಿಯಾಗಿದ್ದು, ಖಂಡನಾರ್ಹ ಎಂದು ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
ಕಾಮಗಾರಿ ನಡೆದಿಲ್ಲ: ನಗರದ ವಿವಿಧೆಡೆ ಹಲವು ರಸ್ತೆಗಳು ದುಃಸ್ಥಿತಿಯಲ್ಲಿವೆ. ಸ್ಥಳೀಯ ನಿವಾಸಿಗಳು ರಸ್ತೆ ದುರಸ್ತಿ ಪಡಿಸುವಂತೆ ಒತ್ತಾಯಿಸಿದರೂ ಕಾಮಗಾರಿ ನಡೆದಿಲ್ಲ. ಆದರೆ ವಾಹನ ಓಡಾಟ ಕಡಿಮೆಯಿರುವ, ಉತ್ತಮವಾಗಿರುವ ಎಂಪಿಎಂಸಿ ರಸ್ತೆಗೆ ಮತ್ತೆ ಮರು ಡಾಂಬರೀಕರಣ ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ ಎಂದು ಸಮಿತಿ ಸದಸ್ಯರು ತಿಳಿಸಿದರು.
 ಸಮಿತಿಯ ಪ್ರಮುಖ ವಸಂತ ಕುಮಾರ್, ಅಶೋಕ್ ಯಾದವ್, ಸತೀಶ್ ಕುಮಾರ್ ಶೆಟ್ಟಿ, ರಮೇಶ್, ಶೆಟ್ಟರ್, ಅಶ್ವತ್ಥನಾರಾಯಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement