ಮಾನಸಿಕ ಅಸ್ವಸ್ಥ ಆಸ್ಪತ್ರೆಯಿಂದ ನಾಪತ್ತೆ
ಶಿವಮೊಗ್ಗ: ಮಾನಸಿಕ ಅಸ್ವಸ್ಥರಾಗಿದ್ದ ವ್ಯಕ್ತಿಯೊಬ್ಬರು ಕಾಣೆಯಾಗಿರುವ ಘಟನೆ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.
ತೀರ್ಥಹಳ್ಳಿಯ ನಾಗರಾಜ (36)ನಾಪತ್ತೆಯಾದವರು. ಇವರು ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಕಾಲುಜಾರಿ ಬಿದ್ದಿದ್ದರು. ಈ ವೇಳೆ ತೀವ್ರವಾಗಿ ಗಾಯಗೊಂಡು ಇವರನ್ನು ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ತೋರಿಸಲಾಗಿತ್ತು. ನಂತರ ಮಾನಸಿಕವಾಗಿ ಅಸ್ವಸ್ಥವಾಗಿದ್ದ ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಈ ವೇಳೆ ಆಸ್ಪತ್ರೆಯಿಂದ ಜ.25ರಂದು ಬೆಳಿಗ್ಗೆ ಕಾಣೆಯಾಗಿದ್ದಾರೆ.
ಇವರು ದುಂಡನೆ ಮುಖ, ದಪ್ಪನೆ ಮೈಕಟ್ಟು ಹೊಂದಿದ್ದಾರೆ. ಬೊಕ್ಕತಲೆ, 5.6 ಅಡಿ ಎತ್ತರ, ಕನ್ನಡ ಹಾಗೂ ತೆಲುಗು ಮಾತನಾಡಬಲ್ಲವರಾಗಿದ್ದಾರೆ. ಮನೆಯಿಂದ ಹೊರಡುವಾಗ ತೆಳು ಮಾಸಲು ಬಿಳಿಬಣ್ಣದ ಶರ್ಟ್ ಮತ್ತು ನೀಲಿಬಣ್ಣದ ಗೀರು ಗೀರು ಲುಂಗಿ ಧರಿಸಿದ್ದರು. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ಸಬ್ಇನ್ಸ್ ಪೆಕ್ಟ್ರ್ ಇವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇಣು ಬಿಗಿದು ಆತ್ಮಹತ್ಯೆ
ಶಿವಮೊಗ್ಗ; ಜೀವನದಲ್ಲಿ ಜೀಗುಪ್ಸೆಗೊಂಡ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ರಾಗಿಗುಡ್ಡ ಬಡಾವಣೆಯಲ್ಲಿ ನಡೆದಿದೆ. ಭಾಸ್ಕರ್ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
ಜೂಜಾಟ: ಐವರ ಸೆರೆ
ಶಿವಮೊಗ್ಗ: ಜೂಜಾಟದಲ್ಲಿ ತೊಡಗಿದ್ದ ಐವರು ಯುವಕರನ್ನು ಬಂಧಿಸಿದ ಘಟನೆ ನಗರದ ಮಾಚೇನಹಳ್ಳಿ ಬಳಿ ನಡೆದಿದೆ.
ಪ್ರದೀಪ, ಗುರುಮೂರ್ತಿ, ರಾಮಲಿಂಗೆ ಗೌಡ, ಉಮೇಶ ಹಾಗೂ ಶರೀಫ್ ಬಂಧಿತ ಆರೋಪಿಗಳು. ಇವರು ಮಾಚೇನಹಳ್ಳಿ ಬಳಿ ಅಕ್ರಮವಾಗಿ ಅಂದರ್- ಬಾಹರ್ನಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತರಿಂದ 38.220 ಸಾವಿರ ರುಪಾಯಿ ವಶ ಪಡಿಸಿಕೊಳ್ಳಲಾಗಿದೆ. ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
ಸರಗಳ್ಳರ ಬಂಧನ
ಕುಮಟಾ: ನಗರದ ಬಸ್ತಿಪೇಟೆ ಸಮೀಪ ಇತ್ತೀಚೆಗೆ ಬೈಕ್ನಲ್ಲಿ ಬಂದು ಮಹಿಳೆಯ ಕೊರಳಿಗೆ ಕೈಹಾಕಿ ಮಂಗಳಸೂತ್ರ ಹರಿದು ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರದ ನೆಹರೂ ನಗರ ನಿವಾಸಿಗಳಾದ ವಿಶ್ವನಾಥ ಆರ್. ಜೋಗಳೇಕರ್ ಮತ್ತು ಪ್ರತಾಪ್ ಓಂಪ್ರಕಾಶ್ ಸಿಂಗ್ ಬಂಧಿತರು. ಇವರು ಪಲ್ಸರ್ ಬೈಕ್ ಬಳಸಿ ಕಳ್ಳತನ ನಡೆಸಿದ್ದು, ಬೈಕ್ನ ನಂಬರ್ ಪ್ಲೇಟ್ನಲ್ಲೂ ವ್ಯತ್ಯಾಸವಿದೆ. ಜ.19ರಂದು ಪೇಟೆಯಲ್ಲಿ ಕೆಲಸ ಮುಗಿಸಿಕೊಂಡು ಬಸ್ತಿಪೇಟೆ ಮಾರ್ಗವಾಗಿ ವಕ್ಕನಳ್ಳಿಯಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದ ಜಯಾ ವೆಂಕಟೇಶಗೌಡ ಅವರ ಮಂಗಳಸೂತ್ರವನ್ನು ಈ ಇಬ್ಬರೂ ವಕ್ಕನಳ್ಳಿ ಕ್ರಾಸ್ ಬಳಿ ಸೆಳೆದು ಪರಾರಿಯಾಗಿದ್ದರು.
ಬೈಕ್ ಸವಾರ ಓಂಪ್ರಕಾಶ್ ಸಿಂಗ್ ಸಾಗರದ ನೆಹರೂ ನಗರದಲ್ಲಿ ಗೋಭಿ ಮಂಚೂರಿ ಅಂಗಡಿ ಇಟ್ಟುಕೊಂಡಿದ್ದು, ಕುಮಟಾದಲ್ಲಿ ಆತನ ಸಂಬಂಧಿಕರ ಮನೆ ಇದೆ. ಸಾಗರದಿಂದ ಆಗಾಗ್ಗೆ ಇಲ್ಲಿಗೆ ಬರುತ್ತಿದ್ದ. ಹಿಂಬದಿಯಲ್ಲಿ ಕುಳಿತಿದ್ದ ವಿಶ್ವನಾಥ ಮಹಿಳೆಯ ಸರ ಅಪಹರಿಸಿದ್ದ. ಸಿಪಿಐ ಶ್ರೀಕಾಂತ್ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.
ಮಾವನಿಂದಲೇ ಕೊಲೆ
ಸಾಗರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಲ್ಲೂಕಿನ ಕುಂದೂರು ಮುಸ್ಲಿಂ ಕ್ಯಾಂಪಿನಲ್ಲಿ ಮಾವನೆ ಸೊಸೆಯನ್ನು ಕೊಲೆ ಮಾಡಿರುವ ಘಟನೆ ಭಾನುವಾರ ನಡೆದಿದೆ.
ಅಸ್ಮತ್ ಬಾನು (30) ಕೊಲೆಯಾದ ಮಹಿಳೆ.
ತಾಲ್ಲೂಕಿನ ಗಡಿಭಾಗದ ಕುಂದೂರು ಮುಸ್ಲಿಂ ಕ್ಯಾಂಪಿನ ಪೀರ್ಖಾನ್ ಎಂಬುವವರು ತನ್ನ ಹಿರಿಯ ಮಗ ಪರ್ವೆರ್ಜ್ ಖಾನ್ ಎಂಬಾತನ ಪತ್ನಿ ಅಸ್ಮತ್ ಬಾನು ಎಂಬಾಕೆಯನ್ನು ಕೊಲೆ ಮಾಡಿದ್ದಾರೆ.
ಬ್ರೆಡ್ ವ್ಯಾಪಾರಿಯಾಗಿರುವ ಪರ್ವೆಜ್ ಖಾನ್ ಮೊದಲ ಪತ್ನಿ ಇರುವಂತೆಯೆ ಅಸ್ಮತ್ ಬಾನುವನ್ನು ಎರಡನೆ ಮದುವೆಯಾಗಿದ್ದನು. ಅಸ್ಮತ್ ಬಾನುಗೆ ಸಹ ಇದು ಎರಡನೆ ಮದುವಯಾಗಿ ಶಿಕಾರಿಪುರದಲ್ಲಿ ವಾಶಿಸುತ್ತಿದ್ದಳು.
ಕಳೆದ ಮೂರು ದಿನಗಳ ಹಿಂದೆ ಪೀರ್ ಖಾನ್ ಶಿಕಾರಿಪುರಕ್ಕೆ ಹೋಗಿ ಪರ್ವೆಜ್ ಖಾನ್ ಮತ್ತು ಅಸ್ಮತ್ ಬಾನು ಅವರನ್ನು ಮನೆಗೆ ಕರೆತಂದಿದ್ದನು. ತನ್ನ ಮೊದಲ ಸೊಸೆಯನ್ನು ಮಗನಿಂದ ತೊರೆಸಿದ್ದು ಹಾಗೂ ಪರ್ವೆಜಜ್ಖಾನ್ನ್ನ್ನು ತನ್ನಿಂದ ದೂರ ಮಾಡಿರುವ ದ್ವೇಷದ ಹಿನ್ನೆಲೆಯಲ್ಲಿ ಪೀರ್ಖಾನ್ ಬಾನುವಾರ ರಾತ್ರಿ ಕುಡುಗೋಲಿನಿಂದ ಸೊಸೆಯನ್ನು ಕೊಲೆ ಮಾಡಿದ್ದಾನೆ.
ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಆರೋಪಿ ಪೀರ್ ಖಾನ್ ಶಿಕಾರಿಪುರ ಠಾಣೆಗೆ ಸೊಸೆ ಕೊಲೆ ಮಾಡಿದ ಆರೋಪವನ್ನು ಒಪ್ಪಿಕೊಂಡು ಶರಣಾಗಿದ್ದು, ಶಿಕಾರಿಪುರ ಠಾಣೆ ಪೊಲೀಸರು ಪ್ರಕರಣವನ್ನು ಸಾಗರ ಗ್ರಾಮಾಂತರ ಠಾಣೆಗೆ ಒಪ್ಪಿಸಿದ್ದಾರೆ.