ವಿಶ್ವರೂಪಂ ಪ್ರದರ್ಶನ ಬೇಡ: ಡಿಸಿಗೆ ಮನವಿ
ಶಿವಮೊಗ್ಗ: ವಿಶ್ವರೂಪಂ ಚಲನಚಿತ್ರ ಪ್ರದರ್ಶನ ನಿಷೇಧಿಸುವಂತೆ ಒತ್ತಾಯಿಸಿ ಮರ್ಕಾಜಿ ಸುನ್ನಿ ಜಮೈತುಲ್ ಉಲ್ಮ ಸಮಿತಿ ಜಿಲ್ಲಾಧಿಕಾರಿಯವರಿಗೆ ಸೋಮವಾರ ಮನವಿ ಅರ್ಪಿಸಿತು.
ಸಮಾಜದ ಶಾಂತಿ-ಸುವ್ಯವಸ್ಥೆ ಹಾಗೂ ಸೌಹಾರ್ದತೆಗೆ ಭಂಗ ತರುವಂತಿರುವ ತಮಿಳು ಚಲನಚಿತ್ರ ವಿಶ್ವರೂಪಂ ನಿಷೇಧಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿರುವ ಸಂಘಟನೆ, ವಿಶ್ವರೂಪಂ ಚಲನಚಿತ್ರದಲ್ಲಿ ಮುಸ್ಲಿಂ ಧರ್ಮವನ್ನು ಅವಹೇಳನ ಮಾಡಲಾಗಿದೆ. ಇದರಿಂದ ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಮುಖಂಡರು ದೂರಿದ್ದಾರೆ.
ಈ ಚಿತ್ರ ಬಿಡುಗಡೆಯಾಗಿರುವ ಸ್ಥಳಗಳಲ್ಲಿ ಕೋಮು ಗಲಭೆ, ಅಹಿತಕರ ಘಟನೆಗಳು ನಡೆದಿವೆ. ರಾಜ್ಯದ ವಿವಿಧೆಡೆಯೂ ಅಶಾಂತಿ ಸೃಷ್ಟಿಯಾಗಿದೆ. ಭದ್ರಾವತಿಯಲ್ಲಿಯೂ ಅಹಿತಕರ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ಚಿತ್ರಗಳ ಪ್ರದರ್ಶನ ಅಗತ್ಯವಿಲ್ಲ ಎಂದು ಮುಖಂಡರು ತಿಳಿಸಿದರು.
ಶಾಂತಿ ಕದಡುವ ಸಾಧ್ಯತೆ: ವಿಶ್ವರೂಪಂ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದರಿಂದ ರಾಜ್ಯದಲ್ಲಿ ಶಾಂತಿ- ಸುವ್ಯವಸ್ಥೆ, ಸೌಹಾರ್ದತೆ ಕದಡುವ ಸಾಧ್ಯತೆ ಇರುತ್ತದೆ. ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಮಿತಿ ಜಿಲ್ಲಾಧ್ಯಕ್ಷ ಅಬ್ದುಲ್ ಸತ್ತಾರ್ ಬೇಗ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಫ್ತಾಬ್ ಪರ್ವೀಜ್ ಮೊದಲಾದವರು ಮನವಿ ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.