ಸಮರ್ಪಕ ವಿದ್ಯುತ್‌ಗೆ ಆಗ್ರಹಿಸಿ ಮೆಸ್ಕಾಂಗೆ ಮುತ್ತಿಗೆ
ಸೊರಬ: ಅನಿಯಮಿತ ಲೋಡ್ ಶೆಡ್ಡಿಂಗ್, ಹೊತ್ತಿನ ಪರಿವೆ ಇಲ್ಲದೆ ವಿದ್ಯುತ್ ಸ್ಥಗಿತಗೊಳಿಸುವದನ್ನು ವಿರೋಧಿಸಿ ಆನವಟ್ಟಿ ಸುತ್ತಮುತ್ತಲ ಅನೇಕ ಗ್ರಾಮಸ್ಥರು ಸೋಮವಾರ ಆನವಟ್ಟಿ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪರೀಕ್ಷೆಗಳು ಆರಂಭಗೊಂಡಿದ್ದು, ಮಕ್ಕಳ ವ್ಯಾಸಂಗಕ್ಕೆ ತೊಂದರೆ, ಕುಡಿವ ನೀರಿಗೆ ತತ್ವಾರ ಉಂಟಾಗುತ್ತಿದೆ. ಸರಿಯಾಗಿ ವಿದ್ಯುತ್ ಪೂರೈಕೆಯಾಗದೇ ಬೋರ್‌ವೆಲ್‌ನಲ್ಲಿ ನೀರಿದ್ದರೂ, ಎತ್ತಲಾರದೆ ಬೆಳೆ ನಾಶವಾಗುತ್ತಿದೆ ಮುಂತಾಗಿ ತಮ್ಮ ಬವಣೆ ತೋಡಿಕೊಂಡ ರೈತರು ಪ್ರಸ್ತುತ ಕೆಜೆಪಿ, ಬಿಜೆಪಿ ಕಚ್ಚಾಟದಲ್ಲಿ ನಮ್ಮ ಬದುಕು ಹೈರಾಣಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಅಗತ್ಯವಿರುವಷ್ಟು ವಿದ್ಯುತ್ ಪೊರೈಕೆಯಾಗಬೇಕು. ಇಲ್ಲದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮೆಸ್ಕಾಂ ಇಇ ಪರಮೇಶ್ವರಪ್ಪ ಹಾಗೂ ಎಸ್‌ಒ ಚಂದ್ರಪ್ಪ ಮಾತನಾಡಿ, ಆಯಾ ಪ್ರದೇಶಗಳಿಗೆ ಅನುಸಾರವಾಗಿ ಯೂನಿಟ್‌ಗಳನ್ನು ಮಂಜೂರು ಮಾಡಿದ್ದು, ಹೆಚ್ಚುವರಿ ಯೂನಿಟ್‌ನಲ್ಲಿ ಮಾತ್ರ ಒದಗಿಸಲು ಸಾಧ್ಯ. ಪ್ರಸ್ತುತ ತಾಲೂಕಿನಲ್ಲಿ ನೀಡುತ್ತಿರುವ ಪೂರೈಕೆಗೂ, ಗ್ರಾಹಕರ ಬೇಡಿಕೆಗೂ ಅಜಗಜಾಂತರ ವ್ಯತ್ಯಾಸವಿದ್ದು, ಹೆಚ್ಚುವರಿ ಒದಗಿಸಿದಲ್ಲಿ ಮಾತ್ರ ಸಮರ್ಪಕ ವಿದ್ಯುತ್ ನೀಡಲು ಸಾಧ್ಯ ಎಂದರು. ದಿನಂಪ್ರತಿ 7 ಗಂಟೆ ತ್ರೀಫೇಸ್, 7 ಗಂಟೆ ಸಿಂಗಲ್‌ಫೇಸ್ ವಿದ್ಯುತ್ ಒದಗಿಸಲು ಕನಿಷ್ಠ 20 ಮೆಗಾವ್ಯಾಟ್ ಅಗತ್ಯವಿದೆ. 2 ರಿಂದ 6 ಮೆಗಾವ್ಯಾಟ್ ಸದ್ಯ ಪೂರೈಕೆಯಾಗುತ್ತಿದೆ. ಸಂಪೂರ್ಣ ನಿಯಂತ್ರಣ ಬಳ್ಳಿಗಾವಿ ಕೇಂದ್ರದಲ್ಲಿದ್ದು, ಬೆಂಗಳೂರಿನ ಮೆಸ್ಕಾಂ ಎಲ್‌ಡಿಸಿ ಅಧಿಕಾರಿಗಳ ಸೂಚನೆಯಂತೆ ಪೂರೈಕೆ ಕೈಗೊಳ್ಳಲಾಗುತ್ತದೆ ಎಂದು ಅಸಹಾಯಕತೆ ತೋರ್ಪಡಿಸಿದರು. ಅಧಿಕಾರಿಗಳು 3 ದಿನಗಳ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಸ್ಥಗಿತಗೊಂಡಿತು.