ದೇವಾಲಯ ಬಾಗಿಲು ಮುರಿದು ಕಳ್ಳತನ
ಭದ್ರಾವತಿ: ಭದ್ರಾ ಜಲಾಶಯದ ಸ್ಯಾಡಲ್ ರಸ್ತೆಯ ಪಕ್ಕದಲ್ಲಿರುವ ಏರಿ ಮಾರಿಕಾಂಬ ದೇವಸ್ಥಾನದಲ್ಲಿ ಬುಧವಾರ ರಾತ್ರಿ ದೇವಸ್ಥಾನದ ಬಾಗಿಲು ಒಡೆದು ದೇವಿಯ ಎರಡು ಬಂಗಾರದ ತಾಳಿ, ಗುಂಡು ಕಳ್ಳತನ ಮಾಡಿದ್ದು, ಹುಂಡಿ ಒಡೆದು ಅದರಲ್ಲಿದ್ದ ಸುಮಾರು 5 ಸಾವಿರ ನಗದನ್ನು ದೋಚಿದ್ದಾರೆ. ಭದ್ರಾವತಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಚಿನ್ನದ ಸರ ಅಪಹರಣ
ಶಿವಮೊಗ್ಗ: ಬೈಕ್ ಸವಾರರಿಬ್ಬರು ಮಾಂಗಲ್ಯ ಸರ ಅಪಹರಿಸಿ ಪರಾರಿಯಾಗಿರುವ ಘಟನೆ ವಿನೋಬನಗರ ಬಡಾವಣೆಯಲ್ಲಿ ಗುರುವಾರ ನಡೆದಿದೆ.
ನಿವೃತ್ತ ಶಿಕ್ಷಕಿ ಲಲಿತಮ್ಮ ಸರ ಕಳೆದುಕೊಂಡವರು. ಇವರು ಮನೆಯಿಂದ ಕಾರ್ಯನಿಮಿತ್ತ ಬ್ಯಾಂಕ್ಗೆ ತೆರಳಿದ್ದರು. ನಂತರ ಮನೆಗೆ ಹಿಂದಿರುಗುವಾಗ ವಿಕಾಸ ಶಾಲೆಯ ಬಳಿ ಬೈಕ್ನಲ್ಲಿ ಆಗಮಿಸಿದ ಅಪರಿಚಿತರು ಇವರ ಮಾಂಗಲ್ಯ ಸರ ಅಪಹರಿಸಲು ಯತ್ನಿಸಿದ್ದಾರೆ. ಈ ವೇಳೆ ಸರವನ್ನು ಕೈಯಲ್ಲಿ ಗಟ್ಟಿಯಾಗಿ ಹಿಡಿದಿದ್ದರಿಂದ ಶೇ.75 ರಷ್ಟು ಭಾಗದ ಸರ ಅಪಹರಣಕಾರರ ಪಾಲಾಗಿದೆ. ಇದರ ಮೌಲ್ಯ ಸುಮಾರು 50 ಸಾವಿರ ರುಪಾಯಿ ಎಂದು ಅಂದಾಜಿಸಲಾಗಿದೆ. ಪ್ರಕರಣ ವಿನೋಬನಗರ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ನಕಲಿ ಪೊಲೀಸರಿಂದ ಚಿನ್ನಾಭರಣ ಅಪಹರಣ
ಶಿವಮೊಗ್ಗ: ನಕಲಿ ಪೊಲೀಸರು ಎಂದು ಹೇಳಿ ಮಹಿಳೆಯೊಬ್ಬರಿಂದ ಚಿನ್ನಾಭರಣ ಅಪಹರಿಸಿ ಪರಾರಿಯಾಗಿರುವ ಘಟನೆ ಗುರುವಾರ ತಿಲಕ ನಗರದಲ್ಲಿ ನಡೆದಿದೆ.
ಮಾಲಿನಿ ಕಾಮತ್ (54) ಸರ ಕಳೆದುಕೊಂಡವರು. ಇವರು ಕೆನರಾ ಬ್ಯಾಂಕ್ನಲ್ಲಿ ಉದ್ಯೋಗಿಯಾಗಿದ್ದು, ಮಧ್ಯಾಹ್ನ ಊಟಕ್ಕೆಂದು ಖಾಸಗಿ ಹೋಟೆಲ್ ಬಳಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ನಕಲಿ ಪೊಲೀಸರಿಬ್ಬರು ಇವರನ್ನು ಕರೆದು ನಗರದಲ್ಲಿ ಚಿನ್ನಾಭರಣ ಕಳವು ಆಗುತ್ತಿರುವಾಗ ಇಷ್ಟೊಂದು ಒಡವೆ ಏಕೆ ಧರಿಸಿದ್ದಿರಿ ಎಂದು ಪ್ರಶ್ನಿಸಿದ್ದು, ತಾವೇ ಮಾಂಗಲ್ಯ ಸರ ಹಾಗೂ ಬಳೆಗಳನ್ನು ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿ ಮಹಿಳೆಯ ಬ್ಯಾಗ್ನಲ್ಲಿ ಇಡುವಾಗ ಮೋಸ ಮಾಡಿ ಅಪಹರಿಸಿದ್ದಾರೆ. ಇದರ ಮೌಲ್ಯ ಸುಮಾರು 80 ಸಾವಿರ ರುಪಾಯಿ ಎಂದು ಅಂದಾಜಿಸಲಾಗಿದೆ. ಪ್ರಕರಣ ಜಯನಗ ಠಾಣೆಯಲ್ಲಿ ದಾಖಲಾಗಿದೆ.
ಅಪಘಾತ; ವ್ಯಕ್ತಿ ಸಾವು
ಶಿವಮೊಗ್ಗ: ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ನಗರದ ಕೆಪಿಟಿಸಿಎಲ್ ವೃತ್ತದ ಬಳಿ ನಡೆದಿದೆ.
ಉಲ್ಲಾಸ್ ಮೃತಪಟ್ಟ ವ್ಯಕ್ತಿ. ಸಂತೋಷ್ ಮತ್ತು ಉಲ್ಲಾಸ್ ಎಂಬುವವರು ಹೊನ್ನಾಳಿಗೆ ಹೋಗಿ ಶಿವಮೊಗ್ಗಕ್ಕೆ ಬರುವಾಗ ಕೆಪಿಟಿಸಿಎಲ್ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಆರ್ಟಿಓ ಅವರು ವಾಹನ ಪರಿಶೀಲನೆ ಮಾಡುತ್ತಿದ್ದರು. ಈ ವೇಳೆ ಭಯಗೊಂಡು ಇವರು ಆರ್ಟಿಓ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ವೇಗವಾಗಿ ಬೈಕ್ ಚಲಾಯಿಸಿದಾಗ ಘಟನೆ ನಡೆದಿದೆ. ಉಲ್ಲಾಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
ಪಾದಚಾರಿ ಸಾವು
ಶಿವಮೊಗ್ಗ: ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.
ಗೋಪಾಲಕೃಷ್ಣ (65) ಮೃತಪಟ್ಟ ವ್ಯಕ್ತಿ. ಮತ್ತೂರಿನಿಂದ ಶಿವಮೊಗ್ಗಕ್ಕೆ ಬರುತ್ತಿರುವಾಗ ಅಕ್ಟೀವಾದಲ್ಲಿ ಬಂದ ಮಹಿಳೆಯೊಬ್ಬರು ಗೋಪಾಲ್ ಕೃಷ್ಣ ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ತಕ್ಷಣ ಇವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಪ್ರಕರಣ ತುಂಗಾನಗರ ಠಾಣೆಯಲ್ಲಿ ದಾಖಲಾಗಿದೆ.