ಪುಟಿದೆದ್ದ ಶಿಮುಲ್ನಿಂದ ಮಾರುಕಟ್ಟೆ ವಿಸ್ತರಣೆ ತಂತ್ರ
-ಶ್ರೀಕಾಂತ ಭಟ್
ಶಿವಮೊಗ್ಗ: ನಷ್ಟದ ದಾರಿಯಲ್ಲಿದ್ದ ಶಿಮುಲ್ ಈಗ ಮತ್ತೆ ಪುಟಿದೆದ್ದಿದೆ. ರೈತರಿಂದ ತನ್ನಲ್ಲಿಗೆ ಬರುವ ಹಾಲಿಗೆ ಸೂಕ್ತ ಮಾರುಕಟ್ಟೆ ಹುಡುಕುವ ಕಾರ್ಯಕ್ಕೆ ವಿವಿಧ ತಂತ್ರಗಾರಿಕೆ ರೂಪಿಸಿದ್ದು, ಚಟುವಟಿಕೆಯನ್ನು ತೀವ್ರಗೊಳಿಸಿದೆ. ಇದೆಲ್ಲದರ ಅಂತಿಮ ಪರಿಣಾಮವಾಗಿ ಶಿಮುಲ್ ಫೆಬ್ರವರಿ 1ರಿಂದ ಅನುಷ್ಠಾನಕ್ಕೆ ಬರುವಂತೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ ನೀಡುವ ಮೊತ್ತವನ್ನು ಹೆಚ್ಚಿಸಿದೆ.
ಒಂದು ಲೆಕ್ಕಾಚಾರ: ಶಿವಮೊಗ್ಗ ಹಾಲು ಒಕ್ಕೂಟದ (ಶಿಮುಲ್) ವ್ಯಾಪ್ತಿ ಮೂರು ಜಿಲ್ಲೆಗೆ ವಿಸ್ತರಿಸಿದೆ. ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ರೈತರು ಉತ್ಪಾದಿಸುವ ಹಾಲನ್ನು ಸಂಗ್ರಹಿಸಿ ಈ ಮೂರು ಜಿಲ್ಲೆಯಲ್ಲಿ ಮಾರುಕಟ್ಟೆ ಮಾಡಲಾಗುತ್ತಿದೆ.
ಹಾಲು ಸಂಗ್ರಹಕ್ಕೆಂದು ಒಂದು ಸಾವಿರ ಹಾಲು ಉತ್ಪಾದಕರ ಸಂಘಗಳಿವೆ. ಅಂದಾಜು 40 ಸಾವಿರ ಹಾಲು ಉತ್ಪಾದಕರಿದ್ದಾರೆ.
ಇವರಿಂದ ಪ್ರತಿ ದಿನ ಸರಾಸರಿ 2.60 ಲಕ್ಷ ಲೀಟರ್ನಷ್ಟು ಹಾಲು ಸಂಗ್ರಹವಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಂದಾಜು ಸರಾಸರಿ 1.75 ಲಕ್ಷ ಲೀಟರ್ಗೆ ಪ್ರತಿ ದಿನ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಉಳಿದ ಹಾಲನ್ನು ಹಾಲಿನ ಉಪ ಉತ್ಪನ್ನಕ್ಕೆ ಬಳಸಿಕೊಳ್ಳಲಾಗುತ್ತದೆ. ಪ್ರಮುಖವಾಗಿ ಹಾಲಿನ ಪೌಡರ್ ತಯಾರಿಕೆಂದು ಕಳುಹಿಸಲಾಗುತ್ತದೆ.
ಹೆಚ್ಚಳವಾಯ್ತು ದರ: ಸರ್ಕಾರ ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿ ಲೀಟರ್ ಮೇಲೆ 2 ಪ್ರೋತ್ಸಾಹ ಧನ ನೀಡಲು ನಿರ್ಧರಿಸಿತು. ಇದರಿಂದಾಗಿ ಹಾಲಿನ ಉತ್ಪಾದನೆ ಗಣನೀಯವಾಗಿ ಹೆಚ್ಚಾಯಿತಲ್ಲದೇ, ಕ್ಷೀರ ಅತಿವೃಷ್ಟಿ ಆರಂಭವಾಯಿತು.
ಕೊನೆಗೆ ಹಾಲಿ ಉತ್ಪಾದನೆಯನ್ನೇ ನಿಯಂತ್ರಿಸುವ ಪರಿಸ್ಥಿತಿ ನಿರ್ಮಾಣವಾಗಿ ಕೊನೆಗೆ ಹಾಲು ಉತ್ಪಾದಕರಿಗೆ ಶಿಮುಲ್ ನೀಡುತ್ತಿದ್ದ ದರವನ್ನು ಮಿತಿಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಹಾಲು ಸಂಗ್ರಹ ಹೆಚ್ಚಾಯಿತು, ಮಾರುಕಟ್ಟೆ ವ್ಯಾಪ್ತಿ ವಿಸ್ತಾರವಾಗಲೇ ಇಲ್ಲ. ಹೀಗಾಗಿ ಮಿಲ್ಕ್ ಯೂನಿಯನ್ಗೆ ಆಗುತ್ತಿದ್ದ ನಷ್ಟ ತಪ್ಪಿಸುವ ಎರಡು ಹಂತದಲ್ಲಿ ಉತ್ಪಾದಕರಿಗೆ ನೀಡುತ್ತಿದ್ದ ದರವನ್ನು ಇಳಿಸಲಾಯಿತು.
ಒಂದು ಹಂತದಲ್ಲಿ ನಷ್ಟದ ಬಾಬತ್ತಿನಿಂದ ಹೊರಬರುವ ಸಂದರ್ಭ ಬರುತ್ತಿದ್ದಂತೆ ರೈತರಿಗಾಗುವ ನಷ್ಟ ತಪ್ಪಿಸಲು ಉತ್ಪಾದಕರಿಗೆ ನೀಡುವ ದರವನ್ನು ಮತ್ತೆ ಹೆಚ್ಚಿಸಲಾಗಿದೆ.
ಫೆಬ್ರವರಿ 1ರಿಂದ ಜಾರಿಗೆ ಬರುವ 1.30 ಪೈಸೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಹಿಂದೆ 16.95 ಜೊತೆಗೆ ಸರ್ಕಾರದ ಪ್ರೋತ್ಸಾಹ ಧನ 2 ಸೇರಿಸಿ 18.95 ನೀಡಲಾಗುತ್ತಿತ್ತು. ಇನ್ನು ಮುಂದೆ ಹಾಲು ಉತ್ಪಾದಕರ ಸಂಘಕ್ಕೆ 19 ನೀಡಲಾಗುತ್ತದೆ. ಸಂಘವು ರೈತರಿಗೆ 18.25 ಜೊತೆಗೆ ಸರ್ಕಾರದ ಅನುದಾನ 2 ಸೇರಿ ನೀಡುತ್ತದೆ. ರೈತರ ಪಾಲಿಗೆ ಇದು ಭಾರಿ ಲಾಭದಾಯಕ ಕೊಡುಗೆ ಅಲ್ಲದಿದ್ದರೂ ನಷ್ಟದಿಂದ ಚೇತರಿಸಿಕೊಳ್ಳಲು ಅವಕಾಶ ಸಿಕ್ಕಂತೆ ಎಂಬುದು ಶಿಮುಲ್ ಅಧ್ಯಕ್ಷ ಜಗದೀಶ್ವರ್ ಹೇಳುತ್ತಾರೆ.
ನಷ್ಟದ ದಿಕ್ಕಿನತ್ತ ಹೊರಟಿದ್ದ ಪರಿಸ್ಥಿತಿ ಈಗಿಲ್ಲ. ತಿಂಗಳ ಲೆಕ್ಕಾಚಾರ ತೆಗೆದುಕೊಂಡರೆ ಲಾಭದತ್ತ ಮುಖ ಮಾಡಿದೆ. ಹೀಗಾಗಿ ರೈತರಿಗೆ ದರ ಹೆಚ್ಚಿಸಲು ನಿರ್ಧರಿಸಲಾಯಿತೆಂದು ಅವರು ಕನ್ನಡಪ್ರಭಕ್ಕೆ ತಿಳಿಸಿದರು.
ತಂತ್ರಗಾರಿಕೆ: ಮಿಲ್ಕ್ ಯೂನಿಯನ್ನ ನಷ್ಟವನ್ನು ತಪ್ಪಿಸುವುದು ಒಂದು ಕಡೆಯಾದರೆ, ರೈತರ ಹಿತ ಕಾಪಾಡುವುದೂ ಸಹ ಒಂದು ಸವಾಲಿನ ಕೆಲಸ. ಸರ್ಕಾರ ಬೇರೆ ಹಾಲಿನ ದರ ಹೆಚ್ಚಳ ತೀರ್ಮಾನಿಸಿಲ್ಲ. ಈ ಸಂದರ್ಭದಲ್ಲಿ ಶಿಮುಲ್ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿತು ಎಂದು ಜಗದೀಶ್ವರ್ ವಿವರಿಸುತ್ತಾರೆ.
ಮೊದಲು ಹಾಲು ಮಾರಾಟ ಮಾಡುವ ಏಜೆಂಟ್ಗಳನ್ನು ಪ್ರೋತ್ಸಾಹಿಸುವ ಒಂದು ನಿರ್ಧಾರಕ್ಕೆ ಬರಲಾಯಿತು. ಒಂದು ನಿಗದಿತ ಪ್ರಮಾಣದ ಹಾಲನ್ನು ಮಾರಾಟದ ನಂತರ ಹೆಚ್ಚುವರಿಯಾಗಿ ಮಾರಾಟ ಮಾಡುವ ಪ್ರತಿ ಲೀಟರ್ ಹಾಲಿಗೆ 50 ಪೈಸೆಯಂತೆ ಪ್ರೋತ್ಸಾಹ ಧನ ನೀಡಲಾಯಿತು. ಹೀಗಾಗಿ ಏಜೆಂಟ್ಗಳು ನಂದಿನಿ ಹಾಲನ್ನು ಹೆಚ್ಚು ಗ್ರಾಹಕರಿಗೆ ತಲುಪಿಸಲು ಆಸಕ್ತಿ ತೋರಿದರು. ಈ ನಿರ್ಧಾರ ಉಪಯೋಗಕ್ಕೆ ಬಂತು.
ಮೂರು ಜಿಲ್ಲೆಯ ಪೈಕಿ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಖಾಸಗಿ ಕಂಪನಿಗಳ ಹಾಲು ಮಾರಾಟ ವಿಸ್ತಾರಗೊಳ್ಳುತ್ತಿದೆ. ಆರೋಗ್ಯ, ಕೃಷ್ಣ ಸೇರಿದಂತೆ ಇನ್ನೂ ಎರಡು ಕಂಪನಿಯ ಹಾಲು ಮಾರುಕಟ್ಟೆಯಲ್ಲಿದೆ. ಆ ಕಂಪನಿಗಳು ಅವರ ಏಜೆಂಟ್ಗೆ ಹೆಚ್ಚಿನ ಕಮೀಷನ್ ನೀಡುವ ಮೂಲಕ ಹಾಲಿನ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಿಮುಲ್ ತನ್ನ ಪ್ರತಿಸ್ಪರ್ಧಿಗಳನ್ನೆದುರಿಸಲು ಏಜೆಂಟ್ಗಳ ಮೊರೆ ಹೋಯಿತು.
ಇನ್ನೊಂದೆಡೆ ಶಿಮುಲ್ ಮಾರುಕಟ್ಟೆ ವಿಸ್ತರಿಸುವ ಉದ್ದೇಶದಿಂದ ಎಂಬಿಎ ಮುಗಿಸಿರುವ ಯುವಕರನ್ನು ನಿಯುಕ್ತಿಗೊಳಿಸಿತು. ಈ ಮೂಲಕ ವಿವಿಧ ತಂತ್ರಗಾರಿಕೆ ನಡೆಸಲಾಯಿತು. ಇಷ್ಟೇ ಅಲ್ಲ, ಶಿಮುಲ್ನ ಅಧಿಕಾರಿಗಳು ಜನರ ನಡುವೆ ಪ್ರಚಾರಕ್ಕಿಳಿದರು. ಮನೆ ಮನೆ ಬಾಗಿಲು ತಟ್ಟಿ ನಂದಿನ ಹಾಲಿನ ಮಹತ್ವ ತಿಳಿಸಲಾರಂಭಿಸಿದರು. ನಂದಿನ ಹಾಲಿನ ಗುಣಮಟ್ಟ, ಪ್ರಾಮುಖ್ಯತೆ, ರೈತ ಪರ ಕಾಳಜಿಯನ್ನು ತಿಳಿಸುವ ಕಾರ್ಯ ಮಾಡಿದರು.
ಇದೆಲ್ಲದರ ಪರಿಣಾಮ ಕಳೆದ ಎರಡು ತಿಂಗಳಲ್ಲಿ ಶೇ.5ರಷ್ಟು ಮಾರುಕಟ್ಟೆ ಚೇತರಿಕೆ ಕಂಡಿದೆ.
ಶಿವಮೊಗ್ಗ ವ್ಯಾಪ್ತಿಯಲ್ಲಿ ನಂದಿನಿ ಹಾಲು ಮಾರುಕಟ್ಟೆ ಒಂದು ಮಿತಿ ಮುಟ್ಟಿರುವುದರಿಂದಾಗಿ, ದಾವಣಗೆರೆ, ಚಿತ್ರದುರ್ಗದಲ್ಲಿ ಮಾರುಕಟ್ಟೆ ವಿಸ್ತಾರಕ್ಕೆ ಆದ್ಯತೆ ನೀಡಲಾಗುತ್ತಿದೆ. ಇಲ್ಲಿ ಶೇ.30ರಷ್ಟು ಮಾರುಕಟ್ಟೆ ಮಾಡಲು ಅವಕಾಶವಿದೆ ಎಂದು ಜಗದೀಶ್ವರ್ ವಿವರಿಸಿದರು.
ಬೇಸಿಗೆ ಆರಂಭವಾಗುತ್ತಿದ್ದಂತೆ ಸಹಜವಾಗಿ ಮೊಸರು ಮತ್ತು ಮಜ್ಜಿಗೆ ಮಾರಾಟ ಹೆಚ್ಚಳವಾಗಿದೆ. ಹೀಗಾಗಿ ಮುಂದಿನ ದಿನಗಳು ಅಷ್ಟಾಗಿ ಆತಂಕ ದಿನಗಳು ಇರುವುದಿಲ್ಲ ಎಂಬುದು ಜಗದೀಶ್ವರ್ ಅವರ ವಿವರಣೆ.