ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದೆ: ಡಾ.ವಾಗೀಶ್
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.1
ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಹಾಗೂ ಕೃಷಿ ವಿಜ್ಞಾನದ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಮಣ್ಣಿನ ಆರೋಗ್ಯ ಮತ್ತು ಸುಸ್ಥಿರ ಮುಸುಕಿನಜೋಳದ ಉತ್ಪಾದನಾ ತಂತ್ರಜ್ಞಾನಗಳು ಕುರಿತ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಮತ್ತು ತೋಟಗಾರಿಕಾ ವಿವಿ ಡೀನ್ ಡಾ.ಟಿ.ಎನ್. ವಾಗೀಶ್, ಇತ್ತೀಚಿನ ದಿನಗಳಲ್ಲಿ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದ್ದು, ಉತ್ತಮ ಇಳುವರಿ ಪಡೆಯಲು ಮತ್ತು ಮಣ್ಣಿನ ಆರೋಗ್ಯ ಕಾಪಾಡಲು ಅದರ ಸಮಗ್ರ ನಿರ್ವಹಣೆ ಅತ್ಯಗತ್ಯ ಎಂದರು.
ಮಣ್ಣಿನ ಭೌತಿಕ ಆರೋಗ್ಯ: ಅವಶ್ಯಕತೆಗಿಂತ ಹೆಚ್ಚಿನ ರಾಸಾಯನಿಕ ಗೊಬ್ಬರಗಳನ್ನು ಭೂಮಿಗೆ ಹಾಕಿದಾಗ ಭೂಮಿಯ ಫಲವತ್ತತೆ ಕಡಿಮೆಯಾಗುವುದು. ಮಣ್ಣಿನ ಭೌತಿಕ ಆರೋಗ್ಯ ಮತ್ತು ರಾಸಾಯನಿಕ ಆರೋಗ್ಯ ಉತ್ತಮ ಸ್ಥಿತಿಯಲ್ಲಿದ್ದಲ್ಲಿ ಯಾವುದೇ ಬೆಳೆಯನ್ನು ಬೆಳೆದಾಗ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಸಂಶೋಧನಾ ನಿರ್ದೇಶಕ ಡಾ.ಬಿ. ಸತ್ಯನಾರಾಯಣ ರೆಡ್ಡಿ, ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚುತ್ತಿರುವುದರಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬೇಕಾಗಿದೆ. ಇರುವ ಭೂಮಿಯಲ್ಲಿ ಹೆಚ್ಚಿನ ಇಳುವರಿ ಪಡೆಯಬೇಕೆಂದು ಅಭಿಪ್ರಾಯ ಪಟ್ಟರು.
ಬೆಳೆ ಪರಿವರ್ತನೆ: ಮಣ್ಣಿನ ಪರೀಕ್ಷೆಗೆ ಅನುಗುಣವಾಗಿ ಗೊಬ್ಬರಗಳ ಬಳಕೆಯನ್ನು ಸರಿಯಾದ ಸಮಯದಲ್ಲಿ ಭೂಮಿಗೆ ಹಾಕುವುದರಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದಾಗಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ಬಳಸಿ, ಉಳಿಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕೆಂದು ಕರೆ ನೀಡಿದರು. ವಿಸ್ತರಣಾ ನಿರ್ದೇಶಕ ಮುಖ್ಯ ಅತಿಥಿಯಾಗಿದ್ದ ಡಾ.ಎಂ.ಎಸ್. ಗಣೇಶ್ಬಾಬು, ಕೃಷಿ ಭೂಮಿಯಲ್ಲಿ ಏಕ ಬೆಳೆಯನ್ನು ಪ್ರತಿವರ್ಷ ಬೆಳೆಯದೆ, ಬೆಳೆ ಪರಿವರ್ತನೆ ಮಾಡಿದಲ್ಲಿ ಮಣ್ಣಿನ ಫಲವತ್ತತೆಯನ್ನು ಕಾಪಾಡುವುದಲ್ಲದೆ, ಉತ್ತಮ ಇಳುವರಿಯನ್ನು ಪಡೆಯಬಹುದೆಂದರು.
ಮಣ್ಣು ಪರೀಕ್ಷಾ ವರದಿ: ಕೃಷಿ ಮತ್ತು ತೋಟಗಾರಿಕಾ ವಿವಿ ಕುಲಸಚಿವ ಡಾ.ಜಿ.ಆರ್. ರಾಮಸ್ವಾಮಿ, ರಾಸಾಯನಿಕ ಗೊಬ್ಬರಗಳ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರಗಳನ್ನು ಭೂಮಿಗೆ ಬಳಸುವುದರಿಂದ ಸುಸ್ಥಿರ ಇಳುವರಿ ಪಡೆಯಬಹುದೆಂದರು.
ಸಹ ವಿಸ್ತರಣಾ ನಿರ್ದೇಶಕ ಡಾ.ಟಿ.ಎಚ್. ಗೌಡ, ರೈತರಿಗೆ ಮಣ್ಣು ಪರೀಕ್ಷಾ ವರದಿಯನ್ನು ವಿತರಿಸಿದರು. ಹಾವು ಕಚ್ಚಿದರೆ ಕೇವಲ ಒಬ್ಬ ವ್ಯಕ್ತಿ ಮಾತ್ರ ಸಾವಿಗೀಡಾಗುತ್ತಾನೆ, ಆದರೆ ಮಣ್ಣು ಕಚ್ಚಿದರೆ ಇಡೀ ರೈತ ಸಮುದಾಯವೇ ಸತ್ತಂತೆ ಎಂದು ಮಣ್ಣಿನ ಮಹತ್ವವನ್ನು ವಿವಿಯ ಡೀನ್ ಡಾ. ಎಂ.ಎಸ್. ವಿಘ್ನೇಶ್ ವಿವರಿಸಿದರು.
ಡಾ.ಎಚ್.ಕೆ. ವೀರಣ್ಣ ಸ್ವಾಗತಿಸಿದರು. ಡಾ.ಜಿ.ಕೆ. ಗಿರಿಜೇಶ್ ನಿರೂಪಿಸಿದರು. ಡಾ. ಬಸವರಾಜ ಬೀರಣ್ಣವರ್ ವಂದಿಸಿದರು. ತರಬೇತಿಯ ತಾಂತ್ರಿಕ ಸಮಾವೇಶದಲ್ಲಿ ವಿಷಯತಜ್ಞರಿಂದ ಮುಸುಕಿನಜೋಳದ ದಂಟಿನಿಂದ ಸುಧಾರಿತ ಕಾಂಪೋಸ್ಟ್ ತಯಾರಿಕೆ, ಸುಸ್ಥಿರ ಮುಸುಕಿನಜೋಳದ ಉತ್ಪಾದನಾ ತಾಂತ್ರಿಕತೆಗಳು, ಮುಸುಕಿನಜೋಳ ಆಧಾರಿತ ಬೆಳೆ ಪದ್ಧತಿಗಳು, ಮುಸುಕಿನಜೋಳದಲ್ಲಿ ಸಮಗ್ರ ರೋಗ ನಿರ್ವಹಣೆ ಮತ್ತು ಸಮಗ್ರ ಪೀಡೆ ನಿರ್ವಹಣೆ ಕುರಿತ ಮಾಹಿತಿ ನೀಡಲಾಯಿತು.
ತರಬೇತಿಯಲ್ಲಿ 60 ರೈತರು ಭಾಗವಹಿಸಿ ಕಾರ್ಯಕ್ರಮದ ಉಪಯೋಗ ಪಡೆದುಕೊಂಡರು.