ಚದುರಂಗ ಆಡುವುದರಿಂದ ತಾಳ್ಮೆ ಹೆಚ್ಚುತ್ತದೆ : ಅಪ್ಪಾಜಿ
ಕ.ಪ್ರ.ವಾರ್ತೆ, ಭದ್ರಾವತಿ, ಜು.2
ಚದುರಂಗ ಬುದ್ಧಿವಂತರ ಆಟ. ಇದನ್ನು ಆಡುವುದರಿಂದ ಮಾನಸಿಕ ಸ್ಥಿಮಿತದೊಂದಿಗೆ ತಾಳ್ಮೆಯೂ ಹೆಚ್ಚುತ್ತದೆ ಎಂದು ಶಾಸಕ ಎಂ.ಜೆ.ಅಪ್ಪಾಜಿ ಹೇಳಿದರು.
ಅವರು ಶುಕ್ರವಾರ ಸಂಜೆ ಪಟ್ಟಣದ ಭದ್ರಗಿರಿ ಶಿವಸುಬ್ರಮಣ್ಯಾಶ್ರಮದಲ್ಲಿ ಅಸ್ತಿತ್ವಕ್ಕೆ ಬಂದ ಭದ್ರಾವತಿ ತಾಲೂಕು ಚೆಸ್ ಸಂಸ್ಥೆ ಉದ್ಘಾಟಿಸಿ ಮಾತನಾಡಿದರು.
ಭದ್ರಾವತಿಯಲ್ಲಿ ರಾಷ್ಟ್ರಮಟ್ಟದ ಮತ್ತು ರಾಜ್ಯಮಟ್ಟದ ಹಲವಾರು ಚೆಸ್ ಪಂದ್ಯಾವಳಿಗಳು ನಡೆದಿವೆ. ಈ ಸಂಸ್ಥೆಯು ಮತ್ತೂ ಹೆಚ್ಚಿನ ಪಂದ್ಯಾವಳಿ ಹಾಗೂ ತರಬೇತಿ ಶಿಬಿರ ನಡೆಸಿ ಉತ್ತಮ ಚೆಸ್ ಪಟುಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಲಿ ಎಂದು ಶಾಸಕರು ಹಾರೈಸಿದರು.
ರಾಜ್ಯ ಕ್ರಿಕೆಟ್ ಸಂಸ್ಥೆ ಮಾನ್ಯತೆ ಪಡೆದ ಕ್ರಿಕೆಟ್ ತೀರ್ಪುಗಾರ ಹಾಗೂ ತರಬೇತುದಾರ ಎಲ್. ಆನಂದರಾಮನ್ ಚೆಸ್ ಹಾಗೂ ಕ್ರಿಕೆಟ್ ಆಟಗಳ ನಡುವೆ ಹಲವಾರು ಸಾಮ್ಯತೆ ಇದೆ ಎಂದರು. ಶ್ರೀಗಳು ಮಾತನಾಡಿ, ಆಟದಲ್ಲಿ ಜೂಜು ಬಾರದಂತೆ ಜಾಗರೂಕತೆ ವಹಿಸಿ ಎಂದು ಎಚ್ಚರಿಕೆ ನೀಡಿದರು. ಷಾಹಿ ಎಕ್ಸ್‌ಪೋರ್ಟ್ಸ್ ಸಂಸ್ಥೆ ಮಹಾಪ್ರಬಂಧಕ ಧರ್ಮಲಿಂಗಂ ಮತ್ತು ಪ್ರಬಂಧಕ ನೆನ್ಮಾರನ್ ಉಪಸ್ಥಿತರಿದ್ದರು. ತಾಲೂಕು ಚೆಸ್ ಸಂಸ್ಥೆ ಅಧ್ಯಕ್ಷ ಎಸ್.ಜಿ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಆರ್. ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜೆ.ಪಿ. ಲೀಲಾ ಸದಾಶಿವ ಪ್ರಾರ್ಥಿಸಿದರು. ಪ್ರಸಾದ್ ತಮ್ಮಡಿಹಳ್ಳಿ ಸ್ವಾಗತಿಸಿದರು. ಉಪಾಧ್ಯಕ್ಷ ಜೆ. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ್ ವಂದಿಸಿದರು.