ಪಠ್ಯದಲ್ಲಿ ಇನ್ನು 'ಜಾತಿ-ಧರ್ಮ'ಕ್ಕೆ ಕತ್ತರಿ
ಕ.ಪ್ರ.ವಾರ್ತೆ ಶಿವಮೊಗ್ಗ ಜು.2
ಇವತ್ತಿನ ಪಠ್ಯಪುಸ್ತಕಗಳಲ್ಲಿ ಸಂವಿಧಾನದ ಆಶಯ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿರುವ ಅಂಶಗಳು ಇನ್ನೂ ಉಳಿದುಕೊಂಡಿವೆ. ಜಾತಿ-ಧರ್ಮಕ್ಕೆ ಧಕ್ಕೆ ಆಗುವ ವಿಷಯಗಳೂ ಇವೆ. ಇವೆಲ್ಲವನ್ನೂ ಗುರುತಿಸಿ ತೆಗೆದುಹಾಕಲಾಗುವುದು ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ತೀರ್ಥಹಳ್ಳಿಯ ಕನ್ನಂಗಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಶ್ರೀಮತಿ ದುಗ್ಗಮ್ಮ ಮತ್ತು ಶೇಷಪ್ಪಗೌಡರ ಸರ್ಕಾರಿ ಪ್ರಾಥಮಿಕ ಶಾಲೆಯ ಅಮೃತಮಹೋತ್ಸವ ವರ್ಷಾಚರಣೆಗೆ ಚಾಲನೆ ಮತ್ತು ಬೆಂಗಳೂರಿನ ಟೈಟಾನ್ ರೌಂಡ್ ಟೇಬಲ್ 222 ಮತ್ತು ಮಹಿಳಾ ಟೈಟಾನ್ ಸರ್ಕಲ್ 122 ಪುಸ್ತಕ ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತ ಜಾತ್ಯತೀತ ರಾಷ್ಟ್ರ. ಇಲ್ಲಿ ಎಲ್ಲಾ ಧರ್ಮ, ಜಾತಿಯವರು ಬದುಕುತ್ತಿದ್ದಾರೆ.
ಇಲ್ಲಿರುವ ಯಾವ ಸಮುದಾಯದವರಿಗೂ ಕೀಳಿರಮೆ ಬರಬಾರದು ಎಂದ ಅವರು, ಬೆಳೆಯುತ್ತಿರುವ ಮಕ್ಕಳ ಮನಸ್ಸಿಗೆ ಧಕ್ಕೆಯಾಗುವಂತಹ ಅಂಶಗಳನ್ನು ಆಯ್ಕೆ ಮಾಡಿ ಪಠ್ಯಪುಸ್ತಕಗಳಿಂದ ಕಿತ್ತುಹಾಕಲಾಗುತ್ತದೆ. ಇದರಿಂದ ಬೆಳೆಯುತ್ತಿರುವ ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ಭಾವನೆಯನ್ನು ಬೆಳೆಸಿದಂತಾಗುತ್ತದೆ ಎಂದರು.
ಆರ್ಟಿಇ ತೊಂದರೆ: ಈಗಾಗಲೇ ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಚರ್ಚಿಸಲಾಗಿದ್ದು, ಸಂಸ್ಥೆಯ ಮುಖ್ಯಸ್ಥರು ಆರ್ಟಿಇಯಿಂದ ನಮಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಅದಕ್ಕೆ ಇಲಾಖೆ ಸ್ಪಂದಿಸುತ್ತದೆ.
ಆದರೆ, ಸರ್ಕಾರಿ ಶಾಲೆಗಳ ಕುರಿತಂತೆ ನಿಮ್ಮ ಕೊಡುಗೆ ಏನು ಎಂದು ನಾನು ಪ್ರಶ್ನಿಸಿದ್ದೇನೆ. ಇದಕ್ಕೆ ಸಂಸ್ಥೆಯ ಮುಖ್ಯಸ್ಥರು ನಾವು ಏನು ಮಾಡಬೇಕು ಎಂದು ನೀವೇ ಹೇಳಿ ಎಂದು ತಿಳಿಸಿದ್ದಾರೆ. ಈ ಕುರಿತು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಶಾಲೆ ಅಭಿವೃದ್ಧಿಗೆ ಕ್ರಮ: ಸರ್ಕಾರಿ ಶಾಲೆಗಳನ್ನು ಏಕಕಾಲದಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಈ ಸಂಬಂಧವಾಗಿ ಅಕ್ಷರ ಫೌಂಡೇಷನ್ ಮತ್ತು ವಿಪ್ರೋ ಸೇರಿದಂತೆ ಖಾಸಗಿ ಸಂಸ್ಥೆಗಳೊಂದಿಗೆ ಚರ್ಚಿಸಿ ತೀರ್ಮಾನ ತೆಗೆದು ಕೊಳ್ಳತ್ತೇನೆ.
ಯಾವ ಜಿಲ್ಲೆಯಲ್ಲಿ ಅನರಕ್ಷತೆ ಹೆಚ್ಚಾಗುತ್ತಿದಿಯೋ ಅಂತಹ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು. ಮುಂದಿನ ಶೈಕ್ಷಣಿಕ ಸಾಲಿನ ಪುಸ್ತಕಗಳನ್ನು ಅಕ್ಟೋಬರ್ 1ರಂದು ಮುದ್ರಣ ಪ್ರಾರಂಭ ಮಾಡಿ ನಿಗದಿತ ಸಮಯದಲ್ಲಿ ಮುಕ್ತಾಯಗೊಳಿಸಿ, ಮುಂದಿನ ವರ್ಷ ಮೇ 15ರೊಳಗಾಗಿ ವಿದ್ಯಾರ್ಥಿಗಳ ಕೈಯಲ್ಲಿರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
1951ರಲ್ಲಿ ಭಾರತ ಸಾಕ್ಷರತೆ ಶೇ.22ರಷ್ಟಿತ್ತು. ಇಂದು ಶೇ.75ರಷ್ಟಿದೆ. ಇದೀಗ ರಾಜ್ಯದಲ್ಲಿ ಶೇ.52 ರಷ್ಟಿದೆ. ಈ ಸಂಬಂಧವಾಗಿ ರಾಜ್ಯದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಬೇಕಾದ ಅನಿವಾರ್ಯತೆ ಇದೆ. ಎಂದರು. ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಚ್.ಜಿ. ವೆಂಕಟೇಶ್, ಶಾಲಾ ಕಟ್ಟಡದ ದಾನಿ ಕೆ.ಎಸ್. ಶೇಷದ್ರಿಗೌಡ, ತೀರ್ಥಹಳ್ಳಿ ತಾಪಂ ಅಧ್ಯಕ್ಷೆ ಜೀನಾ ವಿಕ್ಟರ್, ಜಿಪಂ ಸದಸ್ಯೆ ಶ್ರುತಿ ವೆಂಕಟೇಶ್, ಗ್ರಾಪಂ ಉಪಾಧ್ಯಕ್ಷೆ ಅಶ್ವಿನಿ ಸೋಮಶೇಖರ್ ಈ ಸಂದರ್ಭದಲ್ಲಿ ಇದ್ದರು.
'ಖಾಸಗಿ ಸಂಸ್ಥೆಗಳು ಕೈಜೋಡಿಸಲಿ'
ಶಿವಮೊಗ್ಗ: ಈಗಿರುವ ಶಿಕ್ಷಣ ಇಲಾಖೆಯ ಆರ್ಥಿಕ ಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ತೀರ್ಥಹಳ್ಳಿಯ ಕನ್ನಂಗಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಮಂಗಳವಾರ ಶ್ರೀಮತಿ ದುಗ್ಗಮ್ಮ ಮತ್ತು ಶೇಷಪ್ಪಗೌಡರ ಸರ್ಕಾರಿ ಪ್ರಾಥಮಿಕ ಶಾಲೆಯ ಅಮೃತಮಹೋತ್ಸವ ವರ್ಷಾಚರಣೆಗೆ ಚಾಲನೆ ಮತ್ತು ಬೆಂಗಳೂರಿನ ಟೈಟಾನ್ ರೌಂಡ್ ಟೇಬಲ್ 222 ಮತ್ತು ಮಹಿಳಾ ಟೈಟಾನ್ ಸರ್ಕಲ್ 122 ಸಂಸ್ಥೆಯಿಂದ ಪುಸ್ತಕ ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಖಾಸಗಿ ಸಂಸ್ಥೆ ಸಹಕಾರ: ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಲು ಟೈಟಾನ್ ಸರ್ಕಲ್, ರೌಂಡ್ ಟೇಬಲ್ ಅಂತಹ ಖಾಸಗಿ ಸಂಸ್ಥೆಗಳು ಕೈಜೋಡಿಸಬೇಕು. ಆಗ ಸರ್ಕಾರಿ ಶಾಲೆಗಳಲ್ಲಿರುವ ಕೊರತೆಗಳನ್ನು ನಿಗಿಸಬಹುದು. ಈಗಾಗಲೇ ತಾಲೂಕಿನಲ್ಲಿ ಮೂಲ ಸೌಲಭ್ಯಗಳಿಲ್ಲದೆ 28 ಶಾಲೆಗಳು ಮುಚ್ಚವ ಸ್ಥಿತಿಯಲ್ಲಿವೆ. ಇದರಿಂದ ಸರ್ಕಾರಕ್ಕೆ ಲಕ್ಷಾಂತರ ರುಪಾಯಿ ನಷ್ಟವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಉತ್ತಮ ಸೌಲಭ್ಯಕ್ಕಾಗಿ ಗ್ರಾಮೀಣ ಪ್ರದೇಶದ ಜನರು ಪಟ್ಟಣಗಳ ಕಡೆ ಮುಖ ಮಾಡಿದ್ದಾರೆ. ಈಗಾಗೀ ಗ್ರಾಮೀಣ ಪ್ರದೇಶಗಳಲ್ಲಿರುವ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮೆಲ್ಲರ ಕರ್ತವ್ಯ. ಈ ಸಂಬಂಧವಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಬೇಕು ಎಂದರು.
ಜಿಪಂ ಸದಸ್ಯೆ ಶೃತಿ ವೆಂಕಟೇಶ್, ಮಾತನಾಡಿ, ವಿದ್ಯಾರ್ಥಿಗಳು ಇಂದು ಟಿ.ವಿಗಳಿಂದ ವಿದ್ಯಾಭ್ಯಾಸದ ಕಡೆ ಗಮನ ಹರಿಸುತ್ತಿಲ್ಲ. ಮಕ್ಕಳಿಗೆ ಪುಸ್ತಕ ವಿತರಣೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಮಕ್ಕಳ ಬೌಧ್ದಿಕ ಶಕ್ತಿ ಕೂಡ ಹೆಚ್ಚಾಗುತ್ತದೆ ಎಂದರು. ಇದೇ ವೇಳೆ ಸಂಸ್ಥೆಯಿಂದ ಪುಸ್ತಕ ವಿತರಿಸಲಾಯಿತು.
ರೌಂಡ್ ಟೇಬಲ್ 222 ಸಂಸ್ಥೆಯ ಅಧ್ಯಕ್ಷ ಬಿ.ಟಿ. ನವೀನ್, ಸುದನ್ವಾ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಕೃಷ್ಣಮೂರ್ತಿ ಮತ್ತಿತರರು ಇದ್ದರು.