'ಮದ್ಯ ಮುಕ್ತ ಗ್ರಾಮಕ್ಕೆ ಸಹಕರಿಸಿ'
ಕ.ಪ್ರ.ವಾರ್ತೆ, ಶಿಕಾರಿಪುರ, ಜು.2
ತಾಲೂಕಿನ ಹಿತ್ತಲ ಗ್ರಾಮದ ಸರ್ಕಾರಿ ಶಾಲೆಯ ಸಮೀಪದಲ್ಲಿ ಖಾಸಗಿ ಮದ್ಯದಂಗಡಿ ರಾಜಾರೋಷವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಶಾಲಾ ವಾತಾವರಣ ಸಂಪೂರ್ಣ ಕಲುಷಿತಗೊಂಡಿದೆ. ಆದ್ದರಿಂದ ಈ ಕೂಡಲೇ ಗ್ರಾಮದ ಏಕೈಕ ಮದ್ಯದಂಗಡಿ ತೆರವುಗೊಳಿಸಿ ಮದ್ಯಮುಕ್ತ ಗ್ರಾಮವನ್ನಾಗಿಸಿ ಶಾಂತಿ ಕಾಪಾಡುವಂತೆ ಹಿತ್ತಲ ಗ್ರಾಪಂ ಅಧ್ಯಕ್ಷೆ ಕುಮಾರಿಬಾಯಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಾಂತ್ ಸೆಂಥಿಲ್ ಬಳಿ ನಿವೇದಿಸಿಕೊಂಡ ಘಟನೆ ಮಂಗಳವಾರ ನಡೆಯಿತು.
ಜಿಪಂ ಸಿಇಒ ಶಶಿಕಾಂತ್ ಸೆಂಥಿಲ್ ಅಧ್ಯಕ್ಷತೆಯಲ್ಲಿ ಇಲ್ಲಿನ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕಿನ ಗ್ರಾಪಂ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷೆ ಕುಮಾರಿಬಾಯಿ, ಗ್ರಾಮದಲ್ಲಿ ನೀರಿನ ಸಮಸ್ಯೆ ವಿಪರೀತವಾಗಿದ್ದು, ರಾತ್ರಿ ವೇಳೆ ನೆಮ್ಮದಿಯ ನಿದ್ರೆ ಕಾಣಲು ಗ್ರಾಮಸ್ಥರಿಗೆ ಸಾಧ್ಯವಾಗುತ್ತಿಲ್ಲ ಎಂದರು.
ಹುದ್ದೆ ಖಾಲಿ: ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉನ್ನತೀಕರಣಗೊಳಿಸಿದರೂ, ಅತಿ ಅವಶ್ಯಕವಾದ ಮಹಿಳಾ ಶುಶ್ರೂಕಿಯರ ಹುದ್ದೆ ಖಾಲಿಯಾಗಿದೆ ಎಂದು ಗಮನ ಸೆಳೆದರು.
ಆಸ್ಪತ್ರೆಗೆ ಕಾಂಪೌಂಡ್ ಮತ್ತಿತರ ಸಮಸ್ಯೆ ಕಾಡುತ್ತಿದೆ ಎಂದ ಅವರು, ಗ್ರಾಮದ ಸರ್ಕಾರಿ ಕಿರಿಯ, ಹಿರಿಯ ಶಾಲೆ ಹಾಗೂ ಕಾಲೇಜಿಗೆ ಅತೀ ಸಮೀಪದಲ್ಲಿ ಖಾಸಗಿ ಪ್ರಭಾವಿ ವ್ಯಕ್ತಿಯೊಬ್ಬರ ಮದ್ಯದಂಗಡಿ ರಾಜಾರೋಷವಾಗಿ ವ್ಯವಹಾರ ನಡೆಸುತ್ತಿದ್ದು, ಇದರಿಂದಾಗಿ ಶಾಲಾ ಆವರಣದಲ್ಲಿ ನಿತ್ಯ ಮದ್ಯದ ಖಾಲಿ ಬಾಟಲ್, ಗಲಾಟೆ ಹೆಚ್ಚಾಗಿ ಶಾಲೆ ಪರಿಸರಕ್ಕೆ ದಕ್ಕೆಯಾಗುತ್ತಿದೆ ಎಂದರು.
ಮದ್ಯದ ದಾಸರು: ಇತ್ತೀಚಿನ ದಿನದಲ್ಲಿ ಶಾಲಾ ವಿದ್ಯಾರ್ಥಿಗಳು ಮದ್ಯದ ದಾಸರಾಗುತ್ತಿದ್ದು, ಈ ಬಗ್ಗೆ ಪೋಷಕರ ಸಹಿತ ಶಾಲಾ ಶಿಕ್ಷಕರು ಗ್ರಾಪಂಗೆ ದೂರು ನೀಡಿ ಪ್ರತಿಭಟಿಸುವ ಹಂತ ತಲುಪಿದೆ ಎಂದರು.
ಈ ಬಗ್ಗೆ ಜಿಪಂ ಸಿಇಒ ಶಶಿಕಾಂತ್ ಸೆಂಥಿಲ್, ಗ್ರಾಪಂ ವ್ಯಾಪ್ತಿ ನಿಮ್ಮದಾಗಿದ್ದು, ಇದುವರೆಗೂ ಮದ್ಯದಂಗಡಿ ಬಗ್ಗೆ ಏಕೆ ದೂರು ನೀಡದೆ ಸಹಿಸಿಕೊಂಡಿರುವಿರಿ ಎಂದು ಪ್ರಶ್ನಿಸಿದರು.
ಸರ್ಕಾರದ ಸುತ್ತೋಲೆ ರೀತಿ ಶಾಲಾ ಆವರಣಕ್ಕೆ ಸಮೀಪ ಮದ್ಯದಂಗಡಿ ನಿಷೇಧಿಸಲಾಗಿದ್ದು, ಈ ಕೂಡಲೇ ಗ್ರಾಪಂ ಸಭೆಯಲ್ಲಿ ಮದ್ಯದಂಗಡಿ ತೆರವುಗೊಳಿಸುವ ಬಗ್ಗೆ ಠರಾವು ಮಂಡಿಸಿ ಅನುಮೋದನೆ ಪಡೆಯುವಂತೆ ತಿಳಿಸಿ ನಂತರ ಅಧಿಕಾರಿಗಳು ತೆರವುಗೊಳಿಸಲು ಆಗಮಿಸಿದಾಗ ಗ್ರಾಮಸ್ಥರು ಸಂಪೂರ್ಣ ಸಹಕರಿಸುವಂತೆ ತಿಳಿಸಿದರು.
ರಸ್ತೆ ಹಾಳು: ಹಳೆಗೊದ್ದನಕೊಪ್ಪ ಗ್ರಾಪಂ ಅಧ್ಯಕ್ಷ ಮಾತನಾಡಿ, ಗ್ರಾಮದಲ್ಲಿ ಅಕ್ರಮ ಮರಳು ದಂಧೆ ವ್ಯಾಪಕವಾಗಿದ್ದು, ಗುತ್ತಿಗೆದಾರರ ದಾಸ್ತಾನಿಗೆ ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ತಿಳಿಸಿದಾಗ ಈ ಬಗ್ಗೆ ಶಿವಮೊಗ್ಗಕ್ಕೆ ಆಗಮಿಸಿದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗೆ ಲಿಖಿತವಾಗಿ ದೂರು ಸಲ್ಲಿಸಲು ತಮ್ಮ ಜತೆ ಖುದ್ದು ಹಾಜರಿರುವುದಾಗಿ ಸಿಇಒ ತಿಳಿಸಿದರು.
ಗ್ರಾಮಸ್ಥರಿಗೆ ಹೊಸೂರು ನೆಮ್ಮದಿ ಕೇಂದ್ರ ವಿಪರೀತ ದೂರವಾಗಿದ್ದು, ಜತೆಗೆ ಗ್ರಾಮದ ಸ್ವಚ್ಛತೆಗೆ ಹಣದ ಸಮಸ್ಯೆಯಿದೆ. ಆದ್ದರಿಂದ ಖಾತ್ರಿ ಹಣ ಬಳಸಿಕೊಳ್ಳಲು ಅನುಮತಿ ನೀಡುವಂತೆ ಮನವಿ ಮಾಡಿದರು. ನೆಮ್ಮದಿ ಕೇಂದ್ರ ಶೀಘ್ರದಲ್ಲಿ ಗ್ರಾಮ ಮಟ್ಟದಲ್ಲಿ ಆರಂಭವಾಗಲಿದ್ದು, ಇದರೊಂದಿಗೆ ಅಂತರ್ಜಾಲದ ಮೂಲಕ ಸರ್ಕಾರ ಅವಕಾಶ ಕಲ್ಪಿಸಲಿದೆ ಎಂದರು.
ಬಳಕೆಗೆ ಮನವಿ: ಹಲವು ಗ್ರಾಪಂ ಅಧ್ಯಕ್ಷರು ಗ್ರಾಮದ ಸ್ವಚ್ಛತೆಗೆ ಎನ್ಆರ್ಇಜಿ ಅನುದಾನ ಬಳಕೆಗೆ ಮನವಿ ಮಾಡಿದರು.ಚಿಕ್ಕಜಂಬೂರು ಅಧ್ಯಕ್ಷ ಮಾತನಾಡಿ, ಗ್ರಾಮದಲ್ಲಿ ವಿದ್ಯುತ್ ತಂತಿ ಮನೆ, ಶಾಲೆ ಮೇಲ್ಭಾಗದಲ್ಲಿ ಹಾದುಹೋಗಿದ್ದು, ಈ ಬಗ್ಗೆ ಹಲವು ಬಾರಿ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಬದಲಾವಣೆಗೆ ಹಣ ಬೇಡಿಕೆಯಿಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ಮೆಸ್ಕಾಂ ಎಇಇ ಚಿದಾನಂದ್ ತಂತಿ ಅಪಾಯವಿದ್ದಲ್ಲಿ ಕೂಡಲೇ ಸ್ಥಳಾಂತರಿಸುವುದಾಗಿ ತಿಳಿಸಿದರು.
ತಾಪಂ ಇಒ ಡಾ. ಚಂದ್ರಶೇಖರ್, ಬಿಇಒ ಸಿದ್ದಲಿಂಗಪ್ಪ, ಸಹಾಯಕ ಕೃಷಿ ನಿರ್ದೇಶಕ ಪ್ರಭಾಕರ್, ತೋಟಗಾರಿಕಾ ನಿರ್ದೇಶಕ ಸಿದ್ದಲಿಂಗೇಶ್, ತಾಲೂಕು ವೈದ್ಯಾಧಿಕಾರಿ ಡಾ. ನಾಗರಾಜನಾಯ್ಕ, ಸಮಾಜ ಕಲ್ಯಾಣಾಧಿಕಾರಿ ಶಿವದೇವ್, ತಡಗುಣಿ ಮಂಜಪ್ಪ ಉಪಸ್ಥಿತರಿದ್ದರು.