ಬೆಲೆ ಏರಿಕೆ: ವಿರೋಧಿಸಿ ಕೆಜೆಪಿ ಪ್ರತಿಭಟನೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.3
ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಜಿಲ್ಲಾ ಕೆಜೆಪಿ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ವಿದ್ಯುತ್, ಬಸ್ ಪ್ರಯಾಣ ದರ ಹಾಗೂ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡುವ ಮೂಲಕ ಜನ ವಿರೋಧಿ ಅನುಸರಿಸುತ್ತಿದ್ದು, ಸರ್ಕಾರಗಳು ಏಕಾಏಕಿ ಬೆಲೆಗಳನ್ನು ಏರಿಸುವ ಮೂಲಕ ಜನಸಾಮಾನ್ಯರ ಮೇಲೆ ಗದಾಪ್ರಹಾರ ಮಾಡುತ್ತಿವೆ. ಅಲ್ಲದೇ ರಾಜ್ಯ ಸರ್ಕಾರ ದಿನಕ್ಕೊಂದು ದ್ವಂದ್ವ ಹೇಳಿಕೆಗಳನ್ನು ನೀಡುವ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಲೇವಡಿ: ರಾಜ್ಯ ಸರ್ಕಾರ ಬಡವರಿಗೆ ನೀಡುವ ಮನೆಗಳ ನೋಂದಣಿ ಶುಲ್ಕ ಹೆಚ್ಚಿಸುವ ಬಗ್ಗೆ ನಿರ್ಣಯಕೈಗೊಂಡಿರುವುದು ಬಡ ಹಾಗೂ ಮಧ್ಯಮ ವರ್ಗದವರ ಮೇಲೆ ಬರೆಎಳೆದಂತಾಗಿದೆ. ಜೂನ್ ತಿಂಗಳಿಂದ ಬಿಪಿಎಲ್ ಕಾರ್ಡ್ದಾರರಿಗೆ ಕುಟುಂಬವೊಂದಕ್ಕೆ 1ರಂತೆ 30ಕೆ.ಜಿ ಪಡಿತರ ಅಕ್ಕಿ ನೀಡುವುದಾಗಿ ತಿಳಿಸಿದೆ. ಆದರೆ, ಇದೀಗ ಯುನಿಟ್ ಪದ್ಧತಿಯಂತೆ ಹಂಚಲಾಗುವುದು ಎಂದು ತಿಳಿಸಿರುವುದು ಹಾಸ್ಯಾಸ್ಪದವಾಗಿದೆ ಎಂದು ಪ್ರತಿಭಟನಾಕಾರರು ಲೇವಡಿ ಮಾಡಿದರು.
ಈ ಹಿಂದೆ ಎಪಿಎಲ್ ಕಾರ್ಡ್ದಾರರಿಗೆ ನೀಡುತ್ತಿದ್ದ ಅಕ್ಕಿಯನ್ನು ಏಕಾಏಕಿ ನಿಲ್ಲಿಸಿರುವುದು ಖಂಡನೀಯ. ಇದರಿಂದ ಮಧ್ಯಮ ವರ್ಗದವರನ್ನು ಮೂಲೆಗುಂಪು ಮಾಡಿದೆ. ಹಿಂದಿನಂತೆ ಎಪಿಎಲ್ ಕಾರ್ಡ್ದಾರರಿಗೂ ಪಡಿತರ ಅಕ್ಕಿಯನ್ನು ವಿತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಜ್ಯೋತಿ ಪ್ರಕಾಶ್, ರಾಜ್ಯ ಸಮಿತಿ ಕಾರ್ಯದರ್ಶಿ ಎಸ್. ರುದ್ರೇಗೌಡ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಪಿ. ಪುರುಷೋತ್ತಮ್, ನಗರ ಸಮಿತಿ ಅಧ್ಯಕ್ಷ ಬಿಳಕಿ ಕೃಷ್ಣಮೂರ್ತಿ, ನಗರಸಭೆ ಸದಸ್ಯ ಐಡಿಯಲ್ ಗೋಪಿ, ನಗರ ಪ್ರಧಾನ ಕಾರ್ಯದರ್ಶಿ ಬಳ್ಳೆಕೆರೆ ಸಂತೋಷ್ ಮತ್ತಿತರರು ಇದ್ದರು.