ಬಂಜಾರ ಜನಾಂಗಕ್ಕೆ ಸವಲತ್ತು ಕೊಡಿಸಲು ಸಿದ್ಧ: ಅಪ್ಪಾಜಿ
ಭದ್ರಾವತಿ: ಬಂಜಾರ ಜನಾಂಗ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಬೇಕಾಗಿರುವ ಸವಲತ್ತುಗಳನ್ನು ಸರ್ಕಾರದಿಂದ ಕೊಡಿಸಲು ತಾವು ಸಿದ್ಧರಿರುವುದಾಗಿ ಶಾಸಕ ಎಂ.ಜೆ. ಅಪ್ಪಾಜಿ ನುಡಿದರು.
ಬಂಜಾರ ಜಾಗೃತಿ ರಂಗ ಪಟ್ಟಣದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ತಾಲೂಕು ಬಂಜಾರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೂ ತಾವು ವೈಯುಕ್ತಿಕವಾಗಿ ಸಹಾಯ ಮಾಡುವುದಾಗಿ ಆಶ್ವಾಸನೆ ನೀಡಿದರು.
ಅಭಿವೃದ್ಧಿ ಸಾಧ್ಯ: ಅಧ್ಯಕ್ಷತೆ ವಹಿಸಿ ಮಾತನಾಡಿದ ಸೇಕ್ಯಾನಾಯ್ಕ ಜನಾಂಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆದರೆ ಲಂಬಾಣಿ ಜನಾಂಗದ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವೆಂದು ಅಭಿಪ್ರಾಯಪಟ್ಟರು.
ಭರವಸೆ: ಸನ್ಮಾನ ಸ್ವೀಕರಿಸಿದ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ಲಂಬಾಣಿ ಜನಾಂಗ ಬಡತನದಲ್ಲಿದ್ದು ಜೀವನೋಪಾಯಕ್ಕಾಗಿ ತಾವು ಹೆತ್ತ ಮಕ್ಕಳು ಮಾರುವ ಪರಿಸ್ಥಿತಿಯಿದ್ದರೂ ಸಹ ಸದಾಶಿವ ಆಯೋಗದ ವರದಿ ಈ ಜನಾಂಗಕ್ಕೆ ಮಾರಕವಾಗಿದೆ. ಲಂಬಾಣಿ ಜನಾಂಗ ಶೈಕ್ಷಣಿಕವಾಗಿ ಹಿಂದುಳಿದಿದ್ದು ಈ ದಿಸೆಯಲ್ಲಿ ತಾವು ಹೆಚ್ಚು ಆಸಕ್ತಿ ವಹಿಸಿ ಅವರ ಶೈಕ್ಷಣಿಕ ಅಭಿವೃದ್ಧಿಯತ್ತ ಗಮನ ನೀಡುವುದಾಗಿ ಭರವಸೆ ನೀಡಿದರು.
ತಾಪಂ ಸದಸ್ಯರಾದ ದೇವೇಂದ್ರನಾಯ್ಕ ಹಾಗೂ ಸೋಮ್ಲಿಬಾಯಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಶಿವ್ಯಾನಾಯ್ಕ, ಸತೀಶ್, ನಾಗರಾಜನಾಯ್ಕ, ಸಿದ್ಧಾನಾಯ್ಕ, ಮೋಹನ, ಸೋಮೇಶ್ವರ, ಲಕ್ಷ್ಮಣ, ವಿಷ್ಣು, ಪ್ರಕಾಶ್, ಶೇಖರ್ ನಾಯ್ಕ, ಸೀತಾರಾಮ ನಾಯ್ಕ, ಮೂರ್ತಿ, ಜುಂಜಾನಾಯ್ಕ, ಚಂದ್ರಾನಾಯ್ಕ, ನಾಗೇಶನಾಯ್ಕ, ಲೋಲಾಕ್ಷಿ ಬಾಯಿ ಮೊದಲಾದವರು ಉಪಸ್ಥಿತರಿದ್ದರು.
ಕೋಕಿಲ ಪ್ರಾರ್ಥಿಸಿದರು. ಕೂಬಾನಾಯ್ಕ ಸ್ವಾಗತಿಸಿದರು. ಮೋತಿನಾಯ್ಕ ಪ್ರಾಸ್ತಾವಿಕ ಭಾಷಣ ಮಾಡಿದರು. ಉಮಾಪತಿ ಕಾರ್ಯಕ್ರಮ ನಿರೂಪಿಸಿದರು. ನಂಜಾನಾಯ್ಕ ವಂದಿಸಿದರು.