ಮಳೆ: ಕರಿಮೆಣಸಿಗೆ ಸೊರಗು ರೋಗ
ಶಿವಮೊಗ್ಗ: ಮಲೆನಾಡು ಪ್ರದೇಶಗಳಲ್ಲಿ ಅಡಕೆಯೊಂದಿಗೆ ಮಿಶ್ರಬೆಳೆಯಾಗಿ ಬೆಳೆಯಲಾಗುತ್ತಿರುವ ಕರಿಮೆಣಸು ಬೆಳೆಗೆ ಸಾಂಕ್ರಾಮಿಕ ಸೊರಗು ರೋಗ ಹರಡುತ್ತಿರುವುದು ಕಂಡುಬಂದಿದೆ.
ಸತತ ಮಳೆ ಬೀಳುತ್ತಿರುವ ಸನ್ನಿವೇಶದಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ರೋಗ ಪೀಡಿತ ಬಳ್ಳಿಯ ಬೇರುಗಳು ಕೊಳೆತು ಸಾಯುತ್ತವೆ. ಇದರಿಂದ ಆಹಾರದ ಕೊರತೆಯುಂಟಾಗಿ ಎಲೆಗಳು ಹಳದಿ ವರ್ಣಕ್ಕೆ ತಿರುಗಿ ಸಾಯುತ್ತವೆ. ಕಾಂಡದ ಭಾಗಗಳು, ಹೂ ಗೊಂಚಲು ಮತ್ತು ತೆನೆಗಳು ಕೊಳೆತು ಮುರಿದು ತುಂಡುಗಳಾಗಿ ಉದುರುತ್ತವೆ. ನಂತರದಲ್ಲಿ ಇಡೀ ಬಳ್ಳಿ 30 ದಿನಗಳಲ್ಲಿ ಸಾಯುತ್ತದೆ.
ತಡೆಗಟ್ಟುವುದು ಹೇಗೆ: ಸಮಗ್ರ ರೋಗ ನಿಯಂತ್ರಣಾ ಕ್ರಮಗಳನ್ನು ಅನುಸರಿಸಿದಲ್ಲಿ ಈ ರೋಗ ನಿರ್ವಹಣೆ ಸಾಧ್ಯವಾಗುವುದು. ರೋಗ ತಗುಲಿ ಸತ್ತ ಇಡೀ ಬಳ್ಳಿಯ ಭಾಗಗಳನ್ನು ಸಂಪೂರ್ಣವಾಗಿ ಸುಡಬೇಕು. ನೆಲದ ಮೇಲೆ ಹರಡುವ ಬಳ್ಳಿಯನ್ನು ಕತ್ತರಿಸಿ ತೆಗೆಯಬೇಕು. ಬಳ್ಳಿಗಳ ಬುಡಭಾಗದಲ್ಲಿ ಅಗೆತ ಮಾಡಬಾರದು. ಪ್ರತಿ ಬಳ್ಳಿಗೆ 1.0ರಿಂದ 2.0ಕಿಗ್ರಾಂ ಬೇವಿನ ಹಿಂಡಿ ಜೊತೆಗೆ 5ಕಿಗ್ರಾಂ ಕೊಟ್ಟಿಗೆ ಗೊಬ್ಬರ ಮತ್ತು 50ಗ್ರಾಂ ಟ್ರೈಕೋಡರ್ಮ ಮಿಶ್ರಮಾಡಿ ಬುಡಕ್ಕೆ ಹಾಕಬೇಕು. ಬಳ್ಳಿಯ ಬುಡದಿಂದ 1ಮೀಟರ್ ಎತ್ತರದವರೆಗೆ ಶೇ.10ರ ಬೋರ್ಡೊ ಮುಲಾಮು ಹಚ್ಚಬೇಕು.
ಪ್ರತಿ ಲೀಟರ್ ನೀರಿಗೆ 1.5ಗ್ರಾಂ ನಂತೆ ಮೆಟಾಲಾಕ್ಸಿಲ್ ಜೊತೆ ಮ್ಯಾಂಕೋಜೆಬ್ ಎಂ.ಜಡ್ 72ರ ಪುಡಿ ಅಥವಾ 3ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಶಿಲೀಂಧ್ರ ನಾಶಕಗಳನ್ನು ಮಿಶ್ರಮಾಡಿದ ದ್ರಾವಣದಿಂದ ಬುಡದ ಮಣ್ಣನ್ನು ತೋಯಿಸಬೇಕು ಮತ್ತು ಎಲೆಗಳಿಗೆ ಸಿಂಪಡಿಸಬೇಕು.
ಮಣ್ಣು ಪರೀಕ್ಷೆ ಆಧಾರದ ಮೇಲೆ ಪ್ರತಿ ಬಳ್ಳಿಗೆ 75ಗ್ರಾಂ ಡಿಎಪಿ ಮತ್ತು 75ಗ್ರಾಂ ಎಂಒಪಿ ಗೊಬ್ಬರವನ್ನು ಕೊಡುವುದು.
ಕಡಿಮೆ ನೆರಳು ಇರುವ ಕಡೆ ಪಣಿಯೂರು-1 ತಳಿಯನ್ನು ಹಾಗೂ ಹೆಚ್ಚು ನೆರಳಿರುವ ಭಾಗಗಳಲ್ಲಿ ಸುಧಾರಿತ ತಳಿಗಳಾದ ಶ್ರೀಕರ, ಶುಭಕರ, ಪಂಚಮಿ ಮತ್ತು ಪೌರ್ಮಮಿ ತಳಿಗಳನ್ನು ನಾಡಿ ಮಾಡುವಂತೆ ನವಿಲೆ ಅಡಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಕೆ.ಎಸ್. ಶೇಷಗಿರಿ ಮತ್ತು ಸಸ್ಯರೋಗ ವಿಜ್ಞಾನಿ ಡಾ.ಎಚ್. ನಾರಾಯಣಸ್ವಾಮಿ ತಿಳಿಸಿದ್ದಾರೆ.