'ರೈಲು ಬಿಡದೇ ಪ್ರಯಾಣಿಕರಿಗೆ ಅನ್ಯಾಯ'
ಶಿವಮೊಗ್ಗ: ಶಿವಮೊಗ್ಗದಿಂದ ತಾಳಗುಪ್ಪ ರೈಲ್ವೆ ಮಾರ್ಗದಲ್ಲಿ ಪ್ರತಿನಿತ್ಯ ಎರಡು ಪ್ಯಾಸೆಂಜರ್ ರೈಲು ಬಿಡಲು 2013-14ರ ರೈಲ್ವೆ ಬಜೆಟ್ನಲ್ಲಿ ಮಂಜೂರಾಗಿ ಜು.1ರಿಂದ ಈ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಓಡಿಸುವುದಾಗಿ ತಿಳಿಸಿದ್ದ ರೈಲ್ವೆ ಇಲಾಖೆಯ ಅಧಿಕಾರಿಗಳು ಈಗ ರೈಲುಬಿಡದೇ ಈ ಭಾಗದ ಪ್ರಯಾಣಿಕರಿಗೆ ಅನ್ಯಾಯ ಮಾಡಿದ್ದಾರೆಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ನ ಟ್ರಸ್ಟಿ ಕಲ್ಲೂರು ಮೇಘರಾಜ ಟೀಕಿಸಿದ್ದಾರೆ.
ಮೈಸೂರಿನ ಉನ್ನತ ಮಟ್ಟದ ರೈಲ್ವೆ ಅಧಿಕಾರಿಗಳು ತಮಿಳು ಮೂಲದವರಾಗಿದ್ದು, ಯಾವಾಗಲೂ ಕನ್ನಡದ ಜನರ ಮತ್ತು ಭಾಷೆಯ ಮೇಲೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಾ ಬಂದಿರುತ್ತಾರೆ. ತಾಳಗುಪ್ಪ-ಶಿವಮೊಗ್ಗ ಪ್ಯಾಸೆಂಜರ್ ರೈಲು ಬಿಡುವ ವಿಚಾರದಲ್ಲಿಯೂ ಇದೇ ಮಲತಾಯಿ ಧೋರಣೆಯನ್ನು ಕಳೆದ 4ದಿನಗಳಿಂದ ಅನುಸರಿಸಿದ್ದಾರೆ ಎಂದು ಮೇಘರಾಜ್ ಆರೋಪಿಸಿದ್ದಾರೆ.
ಕೇಂದ್ರದ ರೈಲ್ವೆ ಮಂತ್ರಿಗಳು ಕನ್ನಡದವರಾಗಿದ್ದಾಗ್ಯೂ ಯಾವುದೇ ಹೆದರಿಕೆ ಇಲ್ಲದೇ ಈ ಅಧಿಕಾರಿಗಳು ತಮ್ಮ ಪಾರುಪತ್ಯ ಮೆರೆಯುತ್ತಿದ್ದಾರೆ. ಹಿಂದೆ ತಾಳಗುಪ್ಪ-ಶಿವಮೊಗ್ಗ ಮಾರ್ಗವನ್ನು ಮೀಟರ್ಗೇಜ್ನಿಂದ ಬ್ರಾಡ್ಗೇಜ್ ಪರಿವರ್ತನೆಗೊಳಿಸಿದ ನಂತರ ಈ ಮಾರ್ಗದಲ್ಲಿದ್ದ ಪ್ರಮುಖ ಗ್ರಾಮಗಳಾದ ಹಾರ್ನುಹಳ್ಳಿ, ಕುಂಸಿ, ಅರಸಾಳುಗಳಲ್ಲಿ ರೈಲ್ವೆ ನಿಲುಗಡೆಯನ್ನು ಈಗ ರದ್ದುಗೊಳಿಸಿರುವುದು ಈ ಭಾಗದ ಪ್ರಯಾಣಿಕರಿಗೆ ಅನಾನುಕೂಲವಾಗಿದೆ. ಆದುದರಿಂದ ಕೇಂದ್ರ ರೈಲ್ವೆ ಮಂತ್ರಿಯವರಾದ ಮಲ್ಲಿಕಾರ್ಜುನ ಖರ್ಗೆಯವರು ಕೂಡಲೇ ಈ ಬಗ್ಗೆ ಗಮನಹರಿಸಲು ಪತ್ರ ಬರೆದು ಆಗ್ರಹಿಸಿದ್ದೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.