ಅಧಿಕಾರ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಸಾಧಿಸಿ: ಎಸ್.ವಿ. ತಿಮ್ಮಯ್ಯ
ಕ.ಪ್ರ.ವಾರ್ತೆ ಶಿವಮೊಗ್ಗ ಜು.5
ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ತಮ್ಮ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಕ್ಷೇತ್ರದ ಅಭಿವೃದ್ಧಿ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಸಲಹೆ ನೀಡಿದರು.
ನಗರದ ಕೋಟೆ ಶ್ರೀ ಮಾರಿಕಾಂಬಾ ದೇವಸ್ಥಾನ ಸಮಿತಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಅವರಿಗೆ ಶುಕ್ರವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸನ್ನ ಕುಮಾರ್ಗೆ ಶಾಸಕ ಸ್ಥಾನ ಸಿಕ್ಕಿರುವುದು ನಮಗೆ ಸಂತಸ ತಂದಿದ್ದು, ಜನತೆ ಅಧಿಕಾರ ನೀಡುವುದು ಜನಪರ ಕೆಲಸಗಳನ್ನು ಮಾಡಲೆಂದು, ಅದನ್ನು ಶಾಸಕರು ಪ್ರಾಮಾಣಿಕವಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಸಮಸ್ಯೆಗಳಿಗೆ ಸ್ಪಂದಿಸಿ: ಅಧಿಕಾರ ದೊರೆತ ತಕ್ಷಣ ಕೆಲ ನಾಯಕರು ದರ್ಪದಿಂದ ಮೆರೆಯುತ್ತಾರೆ. ನಂತರ ಅದೇ ದರ್ಪ ಅವರನ್ನು ಅಧಿಕಾರದಿಂದ ಕಳೆದುಕೊಳ್ಳುವಂತೆ ಮಾಡುತ್ತದೆ ಎಂದ ಅವರು, ಪ್ರಸನ್ನ ಕುಮಾರ್ ಅಂತಹ ವ್ಯಕ್ತಿಗಳ ಸಾಲಿಗೆ ಸೇರದೆ ಜನರೊಂದಿಗೆ ಸೌಜನ್ಯ, ಪ್ರೀತಿಯಿಂದ ವರ್ತಿಸಿ ಅವರ ಕಷ್ಟಗಳಿಗೆ ಸ್ಪಂದಿಸಬೇಕು ಎಂದರು.
ಕ್ಷೇತ್ರದಲ್ಲಿ ಈಗಾಗಲೇ ಒಂದಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮತ್ತಷ್ಟು ಅರ್ಧಕ್ಕೆ ನಿಂತಿವೆ. ಅಂತಹ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮಕೈಗೊಂಡು ಕ್ಷೇತ್ರವನ್ನು ಮಾದರಿ ನಗರವನ್ನಾಗಿ ಮಾಡಬೇಕು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ಜನರ ಆಶದಂತೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ಅವರ ನಂಬಿಕೆಯನ್ನು ಹುಸಿಮಾಡುವುದಿಲ್ಲ. ಇದಕ್ಕೆ ಎಲ್ಲರ ಸಹಕಾರ ಮತ್ತು ಸಲಹೆ ಕೂಡ ಬೇಕಾಗುತ್ತದೆ ಎಂದರಲ್ಲದೇ, ಕೋಟೆ ಶ್ರೀ ಮಾರಿಕಾಂಬ ದೇವಾಲಯದ ಕಾರ್ಯಗಳಿಗೆ ಸದಾ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಕಾಶಿ ವಿಶ್ವನಾಥ್, ಎಸ್.ಕೆ. ಮರಿಯಪ್ಪ, ದೇವಸ್ಥಾನ ಸಮಿತಿ ಕಾರ್ಯದರ್ಶಿ ಎನ್. ಮಂಜುನಾಥ್, ಸಹಕಾರ್ಯದರ್ಶಿ ಪ್ರಭಾಕರ ಗೌಡ, ಸಮಿತಿ ಸದಸ್ಯರಾದ ಪ್ರವೀಣ್ಕಾಂತ್, ಎಸ್.ಆರ್. ಕೃಷ್ಣಸಿಂಗ್ ಮತ್ತಿತರರು ಇದ್ದರು.