ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಅಗತ್ಯ

Lingaraj Badiger
Updated On : 6 Jul 2013, 11:02 am

ಕ.ಪ್ರ.ವಾರ್ತೆ, ಶಿವಮೊಗ್ಗ,  ಜು.5
ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣ ಎಂಬುದನ್ನು ಆರ್ಥಿಕವಾಗಿ ಆಲೋಚಿಸುತ್ತಿದ್ದಾರೆ. ಶಿಕ್ಷಣ ಎಂದಾಕ್ಷಣ ಆರ್ಥಿಕವಾಗಿ ಆಲೋಚಿಸುವುದಾಗಲೀ, ಶಿಕ್ಷಕರು ಸಂಬಳಕ್ಕಾಗಿ ಕೆಲಸ ಮಾಡುವವರು ಎಂದಾಗಲಿ ಭಾವಿಸುವ ಮನೋಭಾವ ಬದಲಾಗಬೇಕಾದ ಅಗತ್ಯವಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟರು.
ಶ್ರೀ ಗುರುಗುಹ ಸಂಗೀತ ಸಮಗ್ರದಿಂದ ಜಯನಗರದ ಶ್ರೀರಾಮಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಸ್‌ಜಿವಿಪಿ ಕನ್ನಡ ಪೂರ್ವ ಪ್ರಾಥಮಿಕ ಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ದೊರೆಯುತ್ತಿಲ್ಲದ ಕಾರಣ ಸಮಾಜ ಅಧೋಗತಿಯತ್ತಸಾಗುತ್ತಿದೆ ಎಂದು ಹೇಳಿದರು.
ಇಂಗ್ಲಿಷ್ ಮಾಧ್ಯಮದ ಭ್ರಮೆ: ಹೆಚ್ಚು ಹೆಚ್ಚು ಡೊನೇಷನ್ ಕೊಟ್ಟು ಇಂಗ್ಲಿಷ್ ಮಾಧ್ಯಮಕ್ಕೆ ಕಳುಹಿಸಿದರೆ ಮಾತ್ರ ತಮ್ಮ ಮಕ್ಕಳು ಉನ್ನತ ಸ್ಥಾನಕ್ಕೆ ಹೋಗುತ್ತಾರೆ ಎಂಬ ಭ್ರಮೆ ಇಂದಿನ ಜನರಲ್ಲಿದೆ. ಜೀವನ ನಿರ್ವಹಣೆಗೆ ಉತ್ತಮ ಪದವಿ, ಹಣ, ಅಧಿಕಾರ ಎಲ್ಲವೂ ಅವಶ್ಯಕ. ಆದರೆ, ಇದೆಲ್ಲಕ್ಕಿಂತಲೂ ಮಿಗಿಲಾದುದು ಮಾನವೀಯತೆ. ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ಜೀವನದ ಮೌಲ್ಯಯುತ ವಿಚಾರಗಳು ಹಾಗೂ ಸಂಸ್ಕಾರಗಳ ಬಗ್ಗೆ ತಿಳಿವಳಿಕೆ ನೀಡಬೇಕಾಗಿದೆ ಎಂದು ಕರೆ ನೀಡಿದರು.
 ಆಧುನಿಕ ಶಿಕ್ಷಣ ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಪರಂಪರೆಯ ಬಗ್ಗೆ ತಿಳಿವಳಿಕೆ ಮೂಡಿಸುತ್ತಿಲ್ಲ. ಹೀಗಾಗಿ ಗುರು-ಹಿರಿಯರಲ್ಲಿ ಗೌರವ ಕಡಿಮೆ ಆಗುತ್ತಿದೆ. ತಂದೆ, ತಾಯಿಯನ್ನು ಕಡೆಗಣಿಸಿ ಬೇರೆಡೆ ನೆಲೆಸುವ ಸಂಸ್ಕೃತಿ ಉದಾಹರಣೆ ನಮ್ಮ ಕಣ್ಣಮುಂದಿವೆ ಎಂದ ಅವರು, ಕುಟುಂಬ ವರ್ಗದವರ ಹಾಗೂ ಹಿತೈಷಿಗಳ ಮಧ್ಯೆ ಪ್ರೀತಿ, ವಿಶ್ವಾಸ ಹಾಗೂ ಸೌಹಾರ್ದಯುತ ಸಂಬಂಧಗಳು ನಶಿಸುತ್ತಿವೆ ಹೀಗಾಗಿ ಶಾಲೆಗಳಲ್ಲಿ ಧರ್ಮ, ಸಂಸ್ಕೃತಿಯ ಬಗ್ಗೆ ತಿಳುವಳಿಕೆ ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಸಂಸ್ಕೃತಿ ಕಾಪಾಡಿ: ಭಾರತ ಸಂಸ್ಕೃತಿ ಉದಾತ್ತ ಚಿಂತನೆಯನ್ನು ಹೊಂದಿದೆ. ಎಲ್ಲರೂ ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜತೆಗೆ ಮುಂದಿನ ಪೀಳಿಗೆಗೆ ತಲುಪಿಸಲು ಶ್ರಮಿಸಬೇಕೆಂದರು.
ವಿದ್ವಾನ್ ಎಚ್.ಎಸ್. ನಾಗರಾಜ್ ಮಾತನಾಡಿ, ಸಂಗೀತ ಸೇರಿದಂತೆ ಯಾವುದೇ ಕಲೆಯನ್ನು ಕಲಿತು ಜೀವನ ನಡೆಸುವಂತಹ ವಾತಾವರಣ ಸಮಾಜದಲ್ಲಿ ಸೃಷ್ಟಿಯಾಗಬೇಕು ಎಂದು ಹೇಳಿದರು.
ಸಂಗೀತ ಕಲಿಯುವವರಲ್ಲಿ ಆಸಕ್ತಿ ಹಾಗೂ ಆತ್ಮವಿಶ್ವಾಸ ಹೆಚ್ಚುತ್ತದೆ. ಸಂಗೀತ ವಿದ್ಯಾಭ್ಯಾಸಕ್ಕೆ ಎಂದಿಗೂ ತೊಡಕಲ್ಲ. ಮಕ್ಕಳ ಜ್ಞಾಪಕ ಶಕ್ತಿ ವೃದ್ಧಿಗೆ ಸಂಗೀತ ಸಹಕಾರಿ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅಧೀಕ್ಷಕರಾದ ಕೆ.ಎಸ್. ಬನಶಂಕರಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಾಧಸುಧಾ ಅಧ್ಯಕ್ಷ ಡಾ. ವೆಂಕಟರಾವ್, ಸಾಧನ ಟ್ರೇಡಿಂಗ್‌ನ ರಂಗನಾಥ್ ಇದ್ದರು. ಮಾನಸ ಶಿವರಾಮಕೃಷ್ಣ ನಿರೂಪಿಸಿದರು.

ರಾಜ್ಯಮಟ್ಟದಲ್ಲಿ ಸಾಧನೆ: ಗೌರವ
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆಯ ವಿದ್ವತ್ ವಿಭಾಗದಲ್ಲಿ ಗುರುಗುಹ ಸಂಗೀತ ಮಹಾವಿದ್ಯಾಲಯದ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಮಟ್ಟದಲ್ಲಿ ಸಾಧನೆ ಮೆರೆದಿದ್ದು, ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಹಿರಿಯೂರು ಕೃಷ್ಣಮೂರ್ತಿಯವರ ಪುತ್ರಿ ವೈಷ್ಣವಿ ಚಂದ್ರಮೌಳಿ ರಾಜ್ಯಮಟ್ಟದಲ್ಲಿ ಎರಡನೇ ರ್ಯಾಂಕ್ ಪಡೆದುಕೊಂಡರೆ, ವಿಂದ್ಯ ವಿಠ್‌ಠಲ್ ಮೂರನೇ ರ್ಯಾಂಕ್ ಗಳಿಸಿದ್ದಾರೆ. ವೈಷ್ಣವಿ ಅವರ ಅನುಪಸ್ಥಿತಿಯಲ್ಲಿ ಅವರ ತಾಯಿ ಗೌರವ ಸ್ವೀಕರಿಸಿದರು.
ಈ ಬಾರಿ ವಿದ್ವತ್ ಪರೀಕ್ಷೆಗೆ ಇಡೀ ರಾಜ್ಯದಿಂದ 80 ವಿದ್ಯಾರ್ಥಿಗಳು ಕುಳಿತಿದ್ದು, 12 ಮಂದಿ ಉತ್ತೀರ್ಣರಾಗಿದ್ದರು. ಈ ಪೈಕಿ ಗುರುಗುಹದ ಇಬ್ಬರು ವಿದ್ಯಾರ್ಥಿಗಳಿಗೆ ರ್ಯಾಂಕ್ ಬಂದಿರುವುದು ಸಂತಸ ತಂದಿದೆ ಎಂದು ಪ್ರಾಂಶುಪಾಲ ವಿ. ನಾಗರಾಜ್ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement