ಪವಿತ್ರ ಕ್ಷೇತ್ರಗಳ ಪಾವಿತ್ರ್ಯತೆ ಕಾಪಾಡಲು ಆಗ್ರಹ
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.7
ಪ್ರವಾಹದಿಂದ ನೆಲೆ ಕಳೆದುಕೊಂಡಿರುವ ಉತ್ತರಾಖಂಡದ ಹಿಂದೂಗಳಿಗೆ ಅಲ್ಲಿನ ಸರ್ಕಾರ ತಕ್ಷಣ ಸಹಾಯ ಒದಗಿಸಬೇಕು ಹಾಗೂ ಅಲ್ಲಿನ ಪವಿತ್ರ ಕ್ಷೇತ್ರಗಳಲ್ಲಿ ಪಾವಿತ್ರ್ಯತೆ ಕಾಪಾಡಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಪದಾಧಿಕಾರಿಗಳು ಭಾನುವಾರ ಶಿವಪ್ಪ ನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರವಾಹದಿಂದಾಗಿ ಉತ್ತರಾಖಂಡದ 200 ಗ್ರಾಮಗಳು ನಾಶವಾಗಿದ್ದು, ಸಾವಿರಾರು ಭಕ್ತರು ಮೃತಪಟ್ಟಿದ್ದಾರೆ. ಆಸ್ತಿಪಾಸ್ತಿ ಕಳೆದುಕೊಂಡಿರುವ ಅಲ್ಲಿನ ಹಿಂದೂಗಳು ಬಯಲಿನಲ್ಲಿ ಜೀವನ ನಡೆಸಬೇಕಾಗಿದೆ. ಹೊತ್ತಿನ ಊಟಕ್ಕೂ ಪರದಾಡಬೇಕಾಗಿರುವ ಸ್ಥಿತಿ ಎದುರಾಗಿದೆ. ಕೂಡಲೇ ಸರ್ಕಾರ ಇವರಿಗೆ ಆದ್ಯತೆ ಮೇಲೆ ನೆರವು ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಸರ್ಕಾರವೇ ಹೊಣೆ: ಪ್ರವಾಹ ಉಂಟಾಗಬಹುದು ಎಂದು ಅಲ್ಲಿನ ಸರ್ಕಾರಕ್ಕೆ ಮುನ್ಸೂಚನೆ ಸಿಕ್ಕಿದ್ದರೂ ಯಾವುದೇ ರೀತಿಯ ಪೂರ್ವಸಿದ್ಧತಾ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದ ಕಾರ್ಯಕರ್ತರು, ಪ್ರವಾಹ ಮುನ್ಸೂಚನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದರೆ, ಸಾವಿರಾರು ಹಿಂದೂಗಳ ಪ್ರಾಣ ಉಳಿಸಲು ಸಾಧ್ಯವಿತ್ತು. ಈ ಕಾರಣದಿಂದ ಪ್ರವಾಹದಿಂದಾದ ಜೀವ ಹಾನಿ, ಆಸ್ತಿ-ಪಾಸ್ತಿ ನಷ್ಟಕ್ಕೆ ಅಲ್ಲಿನ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ಆಪಾದಿಸಿದರು.
ವಿದ್ಯುತ್ ಉತ್ಪಾದನೆಗಾಗಿ ಅಣೆಕಟ್ಟೆ ಕಟ್ಟಲು ಪ್ರಾಚೀನ ಕಾಲದಿಂದ ಪೂಜಿಸಿಕೊಂಡು ಬರುತ್ತಿದ್ದ ಧಾರಿ ದೇವಿಯ ದೇವಾಲಯವನ್ನು ಅಲ್ಲಿನ ಸ್ಥಳೀಯರ ವಿರೋಧ ಲೆಕ್ಕಿಸದೆ ಸರ್ಕಾರ ಜೂನ್ 16 ರಂದೇ ಸ್ಥಳಾಂತರಗೊಳಿಸಿತ್ತು. ಈ ಬಾರಿ ಅದೇ ದಿನದಂದೇ ಉತ್ತರಾಖಂಡದಲ್ಲಿ ಮಹಾ ಜಲಪ್ರಳಯ ಸಂಭವಿಸಿದೆ ಎಂದು ದೂರಿದರು. ಪರ್ವತಗಳ ಮಧ್ಯೆ ಮಾಡಲಾದ ಪರಿಸರ ವಿರೋಧಿ ಹಾಗೂ ಧರ್ಮ ಬಾಹಿರ ಅತಿಕ್ರಮಗಳು, ಪರಿಸರವಾದಿಗಳು ನೀಡಿದ ಅಪಾಯದ ಸಂಕೇತ ನಿರ್ಲಕ್ಷಿಸಿದ್ದೇ ಈ ಪ್ರಳಯಕ್ಕೆ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೀಗ ಸಂತ್ರಸ್ತರಿಗೆ ಭೂಮಿ ಹಾಗೂ ಜೀವನ ನಡೆಸಲು ಉದ್ಯೋಗ ಒದಗಿಸಬೇಕು. ಹಿಂದೂಗಳ ಮುಖ್ಯ ತೀರ್ಥಕ್ಷೇತ್ರದ ಸ್ಥಳಗಳಲ್ಲಿ ಉದ್ಭವಿಸಬಹುದಾದ ಅಪತ್ಕಾಲೀನ ಪರಿಸ್ಥಿತಿ ಎದುರಿಸಲು ಶಾಶ್ವತ ಸ್ವರೂಪದ ಯೋಜನೆ ರೂಪಿಸಬೇಕು. ಉತ್ತರಾಖಂಡದಲ್ಲಿ ನದಿಗಳಿಗೆ ಅಣೆಕಟ್ಟೆ ಕಟ್ಟಲು ಸರ್ಕಾರ ಶಾಶ್ವತ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸೋಮಶೇಖರ್ ಮತ್ತಿತರರು ಇದ್ದರು.