ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸೋತ ಪಕ್ಷಕ್ಕೆ ಹೊಸ ಸೇನಾನಿಗಳು

Lingaraj Badiger
Updated On : 8 Jul 2013, 11:03 am

ಕ.ಪ್ರ.ವಾರ್ತೆ  ಶಿವಮೊಗ್ಗ  ಜು.7
ತನ್ನ ಭದ್ರಕೋಟೆಯಲ್ಲಿ ಆವರಿಸಿದ ಸರಣಿ ಸೋಲಿನ ಛಾಯೆಯಿಂದ ಹೊರಬರಲು ಬಿಜೆಪಿ ಇನ್ನಿಲ್ಲದ ಹರಸಾಹಸ ಮಾಡುತ್ತಿದೆ. ಇದರ ಒಂದು ಪ್ರಯತ್ನವಾಗಿ ಶಿವಮೊಗ್ಗ ನಗರ ಸಮಿತಿಯ ಪುನರ್ ರಚನೆಯಾಗಿದ್ದು, ಪಕ್ಷದಲ್ಲಿ ಸಣ್ಣದೊಂದು ಸಂಚಲನ ಸೃಷ್ಟಿಸಿದೆ.
ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸಮತೋಲಿತ ತಂಡ ರಚಿಸುವ ಪ್ರಯತ್ನ ಮಾಡಲಾಗಿದ್ದು, ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದೆ.
ಮೊದಲು ಬಿಎಸ್‌ವೈ ಪಕ್ಷ ತ್ಯಜಿಸಿದ್ದು, ನಂತರ ನಗರಸಭೆಯಲ್ಲಿ ಅಧಿಕಾರ ಕಳೆದುಕೊಂಡಿದ್ದು ಅದಕ್ಕಿಂತ ಮುಖ್ಯವಾಗಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು ಬಿಜೆಪಿ ಕಾರ್ಯಕರ್ತರನ್ನು ಇನ್ನಿಲ್ಲದಂತೆ ಕಂಗೆಡಿಸಿತ್ತು. ವಿಧಾನಸಭಾ ಚುನಾವಣೆಯಲ್ಲಂತೂ ಗೆದ್ದೇ ಗೆಲ್ಲುವೆವು ಎಂದು ಬೀಗುತ್ತಿದ್ದ ಸ್ಥಳೀಯ ಮುಖಂಡರು ಸೋಲಿನ ಆಘಾತಕ್ಕೆ ಅದುರಿಹೋಗಿದ್ದರು.
ಆತ್ಮವಿಶ್ವಾಸ ತುಂಬುವ ಕೆಲಸ: ಇದೀಗ ಲೋಕಸಭಾ ಚುನಾವಣೆ ವಿಚಾರ ಇಟ್ಟುಕೊಂಡು ಮತ್ತೆ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಗರಿಗೆದರಿಸುವ ಪ್ರಯತ್ನ ಪಕ್ಷದ ಮುಖಂಡರಿಂದ ನಡೆದಿದೆ.
ಬಿಜೆಪಿಯ ಆಂತರಿಕ ಪ್ರಜಾತಂತ್ರ ವ್ಯವಸ್ಥೆಯಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆವ ಎಲ್ಲ ಹಂತದ ಘಟಕಗಳ ಪುನರ್ರಚನೆ ಕಾರ್ಯ ಇದೀಗ ಆರಂಭವಾಗಿದೆ. ಹೊಸ ತಂಡ ರಚಿಸಿ ಮತ್ತೆ ಪಕ್ಷವನ್ನು ಬಲಪಡಿಸುವ ಪ್ರಯತ್ನ ಮಾಡಲಾಗುತ್ತಿದೆ.
ಶಿವಮೊಗ್ಗ ವಿಧಾನಸಭಾ ಕ್ಷೇತ್ರ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಿಸುವ ಪ್ರಯತ್ನದ ಗುರಿ ಹಾಕಿಕೊಂಡಿದ್ದು, ಇದಕ್ಕೆ ತಕ್ಕಂತೆ ನಗರ ತಂಡವನ್ನು ರಚಿಸಲಾಗಿದೆ. ಈ ಹಿಂದೆ ಒಮ್ಮೆ ಪಕ್ಷದ ನಗರ ಘಟಕದ ಅಧ್ಯಕ್ಷರಾಗಿದ್ದ ಜ್ಞಾನೇಶ್ವರ್‌ಗೆ ಮತ್ತೆ ಚುಕ್ಕಾಣಿ ನೀಡಲಾಗಿದೆ.
ಅವರೊಂದಿಗೆ ಒಂದಷ್ಟು ಯುವಕರನ್ನು ತಂಡಕ್ಕೆ ಸೇರಿಸಲಾಗಿದೆ. ವಿವಿಧ ಮೋರ್ಚಾಗಳಿಗೆ ಹೊಸ ಮುಖಗಳನ್ನು ನೇಮಿಸಲಾಗಿದೆ. ಒಟ್ಟಾರೆ ಸೋತ ಪಕ್ಷಕ್ಕೆ ಹೊಸ ಸೇನಾನಿಗಳನ್ನು ನೇಮಿಸಲಾಗಿದೆ.
ಹುರಿದುಂಬಿಸುವ ಪ್ರಯತ್ನ: ನರೇಂದ್ರ ಮೋದಿ ಎಂಬ ಹೆಸರನ್ನು ಪದೇ ಪದೇ ಪ್ರಸ್ತಾಪಿಸಿ ಜಡವಾದ ಕಾರ್ಯಕರ್ತರನ್ನು ಬಡಿದೆಬ್ಬಿಸುವ ತಂತ್ರಕ್ಕೆ ಶರಣಾಗಿರುವ ಬಿಜೆಪಿಯ ನಾಯಕರು ಇದೇ ಅವಕಾಶದಲ್ಲಿ ತಮ್ಮ ಬುಡವನ್ನೂ ಭದ್ರಪಡಿಸಿಕೊಳ್ಳಲು ಮುಂದಾಗಿದ್ದಾರೆ.
ಭಾನುವಾರ ನಡೆದ ಹೊಸ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲೂ ಸಹ ಪಕ್ಷದ ಮುಖಂಡರ ಹರಿತ ಮಾತುಗಳು ಕಾರ್ಯಕರ್ತರ ಮನಸ್ಸು ಪುಟಿದೇಳುವಂತೆ ಮಾಡುವಲ್ಲಿ ಸಫಲವಾಯಿತು. ನರೇಂದ್ರ ಮೋದಿ ಏಕೆ ಪ್ರಧಾನಿಯಾಗಬೇಕು, ಅದಕ್ಕಾಗಿ ನಾವೇನು ಮಾಡಬೇಕು ಎಂಬಿತ್ಯಾದಿ ಮಾತುಗಳಿಂದ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಅಸಮಾಧಾನ ನಿಂತಿಲ್ಲ: ನರೇಂದ್ರ ಮೋದಿ ಪ್ರಧಾನಿಯಾಗಬೇಕು, ಜೊತೆ ಜೊತೆಗೆ ಪಕ್ಷದ ಎಲ್ಲಾ ಹಂತದಲ್ಲಿ ಪಕ್ಷನಿಷ್ಠೆ ಹೊಸ ಮುಖಗಳಿಗೆ ಜವಾಬ್ದಾರಿ ಕೊಡಬೇಕು ಈ ಮೂಲಕ ಭ್ರಷ್ಟಾಚಾರ ಕಳಂಕದಿಂದ ಪೂರ್ಣ ಪ್ರಮಾಣದಲ್ಲಿ ಪಕ್ಷ ಹೊರಬರಬೇಕು ಎಂಬ ಅಭಿಲಾಷೆ ಪಕ್ಷದ ಹಿರಿಯರದ್ದು. ಆದರೆ ಈ ಅಭಿಲಾಷೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬರುತ್ತಿಲ್ಲ ಎಂಬ ಮಾತೂ ಸಹ ಕೇಳಿಬಂದಿದೆ.   ಭಾನುವಾರ ನಡೆದ ಕಾರ್ಯಕ್ರಮಕ್ಕೆ ಬಂದಿದ್ದ ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರು “OÚ«Ú­sÚ®ÚúڒOæQ ಪ್ರತಿಕ್ರಿಯೆ ನೀಡಿ, ನೂತನ ಅಧ್ಯಕ್ಷ ಜ್ಞಾನೇಶ್ವರ್ ತಮ್ಮ ಸೂಡಾ ಅಧ್ಯಕ್ಷ ಅವಧಿಯಲ್ಲಿನ ಕಾರ್ಯವೈಖರಿಯ ಬಗ್ಗೆ ಗಂಭೀರ ಟೀಕೆಗಳು ಕೇಳಿಬಂದಿದ್ದವು. ಪಕ್ಷದೊಳಗಿನರಿಗೂ ಇದು ಗೊತ್ತಿತ್ತು.    ಹೀಗಿರುವಾಗ ಆಯ್ಕೆ ಎಷ್ಟು ಸಾಧು ಎಂದವರು ಪ್ರಶ್ನಿಸಿದರು.  ಅದೇ ರೀತಿ ಕೆ.ಎಸ್. ಈಶ್ವರಪ್ಪನವರು ತಮಗೆ ಆಗಿಬರುವವರನ್ನು ಹೆಕ್ಕಿತೆಗೆದು, ಅವರಿಗೆ ಸೂಕ್ತ ಸ್ಥಾನಮಾನ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ. ತೀರಾ ಕೆಳಹಂತದ ಸಮಿತಿಗಳಲ್ಲೂ ಒಂದು ಪಂಗಡಕ್ಕೆ ಸೇರಿದವರಿಗೆ ಆದ್ಯತೆ ಕೊಡಿಸುತ್ತಿದ್ದಾರೆ ಎಂದವರು ಟೀಕಿಸಿದರು.
ಈ ಮಧ್ಯೆ ಜ್ಞಾನೇಶ್ವರ್ ಆಯ್ಕೆ ಬಗ್ಗೆ ಎಲ್ಲಾ ಆಯ್ಕೆಗಾರರಿಗೂ ತೃಪ್ತಿ ಇಲ್ಲ ಎಂಬ ಮಾಹಿತಿಯೂ ಇದೆ. ಇದೊಂದು ಅನಿವಾರ್ಯ ಆಯ್ಕೆ ಅಷ್ಟೇ ಎಂದು ಹಿರಿಯ ಮುಖಂಡರು ಅಭಿಪ್ರಾಯಪಡುತ್ತಾರೆ.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇಬ್ಬರು ತಯಾರಿ
ಪಕ್ಷದ ಜಿಲ್ಲಾ ಹಂತದಲ್ಲಿ ಪ್ರಧಾನ ಹುದ್ದೆಯಾದ ಜಿಲ್ಲಾಧ್ಯಕ್ಷ ಸ್ಥಾನ ಯಾರಿಗೆ ಎಂಬ ಚರ್ಚೆ ಬಿಜೆಪಿಯೊಳಗೆ ಆರಂಭವಾಗಿದೆ. ಸದ್ಯ ಈ ಹುದ್ದೆಗೆ ಸೂಡಾ ಮಾಜಿ ಅಧ್ಯಕ್ಷ ದತ್ತಾತ್ರಿ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಚನ್ನಬಸಪ್ಪ ಹೆಸರು ಮಾತ್ರಕೇಳಿಬರುತ್ತಿದೆ.
 ಇವರಲ್ಲಿ ಯಾರು ಉತ್ತಮ ಎಂಬುದನ್ನು ಪಕ್ಷದ ಮುಖಂಡರು ತೀರ್ಮಾನಿಸುತ್ತಾರೆ.
ಸಾಮಾನ್ಯರ ನಡುವೆ ಸಾಮಾನ್ಯನಾಗಿ ಬೆರೆಯುವ ಚನ್ನಬಸಪ್ಪ(ಚೆನ್ನಿ) ಶಿವಮೊಗ್ಗಕ್ಕೆ ಸೀಮಿತವಾಗಿ ಬೆಳೆದವರು ಎಂಬ ಒಂದಂಶ ಅವರ ಪಾಲಿಗೆ ಋಣಾತ್ಮಕ ಅಂಶ, ಆದರೂ ಪಕ್ಷದೊಳಗೆ ಪ್ರಭಾವಿ. ಅದೇ ರೀತಿ ಸೂಡಾ ಅಧ್ಯಕ್ಷರಾಗಿ, ಎರಡು ಬಾರಿ ಪಕ್ಷದ ಜಿಲ್ಲಾ ಪ್ರಧಾನಕಾರ್ಯದರ್ಶಿಯಾಗಿ ಜಿಲ್ಲಾದ್ಯಂತ ಪಕ್ಷದೊಳಗೆ ಚಿರಪರಿಚಿತರಾದ ದತ್ತಾತ್ರಿ ಸಹ ಅಷ್ಟೇ ಪ್ರಭಾವಿ. ಇಬ್ಬರಲ್ಲಿ ಯಾರು ಪಕ್ಷದ ನೊಗ ಹೊರುತ್ತಾರೆಂಬುದು ಸದ್ಯವೇ ಗೊತ್ತಾಗಲಿದೆ.
-ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement