ಕ್ರಿಮಿನಲ್ ಮೊಕದ್ದಮೆಗೆ ವಿರೋಧ
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.8
ಪಾರಂಪರಿಕ ವೈದ್ಯರನ್ನು ನಕಲಿ ವೈದ್ಯರೆಂದು ಪರಿಗಣಿಸಿ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುತ್ತಿರುವ ಜಿಲ್ಲಾ ಆರೋಗ್ಯಾಧಿಕಾರಿಯ ಕ್ರಮ ಖಂಡಿಸಿ ಅನುಭವಿ ಮತ್ತು ವಂಶಪಾರಂಪರ್ಯ ವೈದ್ಯರ ಸಂಘ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಹಲವು ವರ್ಷಗಳಿಂದ ಅನುಭವಿ, ವಂಶಪಾರಂಪರ್ಯ ವೈದ್ಯರು ವೈದ್ಯ ವೃತ್ತಿ ಮಾಡುತ್ತಿದ್ದಾರೆ. ಸರ್ಕಾರ ಇದುವರೆಗೂ ಮೂಲ ಸೌಲಭ್ಯ ಕಲ್ಪಿಸಲು ಆಗದ ಗ್ರಾಮೀಣ ಪ್ರದೇಶಗಳಲ್ಲಿನ ನಿವಾಸಿಗಳಿಗೆ ವೈದ್ಯ ಸೇವೆ ನೀಡುತ್ತಿದ್ದಾರೆ. ಈ ಮೂಲಕ ಅಮೂಲ್ಯ ಜೀವ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಇಂತಹವರ ಮೇಲೆ ವಿನಾ ಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಅವೈಜ್ಞಾನಿಕ: ಕರ್ನಾಟಕ ಖಾಸಗಿ ವೈದ್ಯಕೀಯ ಕಾಯ್ದೆ 2007 ಮತ್ತು 2009 ನ್ನು ಅನುಷ್ಠಾನಗೊಳಿಸಲು ಹೊರಟಿರುವ ಸರ್ಕಾರದ ಕ್ರಮ ಅವೈಜ್ಞಾನಿಕ ಎಂದು ಟೀಕಿಸಿದ ಪ್ರಮುಖರು, ಸಾಧಕ-ಬಾಧಕಗಳ ಬಗ್ಗೆ ಯೋಚಿಸದಿರುವುದು ಜನ ವಿರೋಧಿಯಾಗಿದೆ ಎಂದು ದೂರಿದರು.
ಜನವಿರೋಧಿ ಶಾಸನ ರದ್ದತಿಗೆ ಆಗ್ರಹಿಸಿ ಸಂಘಟನೆಯೂ ಹೈಕೋರ್ಟ್ಗೆ ರಿಟ್ ಸಲ್ಲಿಸಿದೆ. ಇಲ್ಲಿಯವರೆಗೂ ಈ ರಿಟ್ ಅರ್ಜಿ ಇತ್ಯರ್ಥವಾಗಿಲ್ಲ. ಆದರೆ ಶಿವಮೊಗ್ಗ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ನೋಡಲ್ ಅಧಿಕಾರಿಯವರು ವಂಶ ಪಾರಂಪರಿಕ ವೈದ್ಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಕ್ರಿಮಿನಲ್ ಮೊಕದ್ದಮೆ ಹಾಕಿಸುತ್ತಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದರು.
ದಾಳಿ ಸರಿಯಲ್ಲ: ಯಾವುದೇ ಮುನ್ಸೂಚನೆ ನೀಡದೇ ಹಗಲು- ರಾತ್ರಿಗಳ ಪರಿವೆಯೇ ಇಲ್ಲದೆ ಪಾರಂಪರಿಕ ವೈದ್ಯರ ಮನೆ ಮೇಲೆ ದಾಳಿ ನಡೆಸಲಾಗುತ್ತಿದೆ. ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿರುವ ವಸ್ತುಗಳನ್ನು ಕಿತ್ತು ಹಾಕುತ್ತಿದ್ದಾರೆ. ಹಣ ನೀಡಿದರೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇಲ್ಲದಿದ್ದರೆ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರತಿಭಟನಕಾರರು ಆಪಾದಿಸಿದರು.
ಡಿಎಚ್ಒ ಹಾಗೂ ನೋಡಲ್ ಅಧಿಕಾರಿ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಜಿಲ್ಲಾಧಿಕಾರಿಯವರು ಗಮನ ಹರಿಸಬೇಕು. ಇವರಿಬ್ಬರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು, ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಇತ್ಯರ್ಥವಾಗುವವರೆಗೂ ಜಿಲ್ಲೆಯಲ್ಲಿರುವ ಪಾರಂಪರಿಕ ವೈದ್ಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಪ್ರತಿಭಟನಕಾರರು ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದರು.