ಪಾಳುಬಿದ್ದ ಊರಲ್ಲಿ ಹೆಣದ ರಾಶಿ, ಆಕಾಶದಲ್ಲಿ ಕಾಪ್ಟರ್
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.8
ಉತ್ತರಕಾಶಿ ಯುದ್ಧಭೂಮಿಯಂತಿತ್ತು. ಎಲ್ಲೆಲ್ಲೂ ಕಾಣುವ ಹೆಣಗಳು, ಆಕಾಶದಲ್ಲಿ ಹಾರಾಡುತ್ತಿರುವ ಹೆಲಿಕ್ಯಾಫ್ಟರ್‌ಗಳು, ಅತ್ತಿಂದಿತ್ತ ಓಡಾಡುತ್ತಿರುವ ಸೇನಾ ಸಿಬ್ಬಂದಿ. ಪಾಳುಬಿದ್ದ ಊರುಗಳು, ಕೊಚ್ಚಿಹೋದ ಮನೆಗಳು, ಕುಸಿದು ಬಿದ್ದ ಭೂಮಿ. ಉತ್ತರಾಖಂಡದಲ್ಲಿ ನಾನು ಕಳೆದ ದಿನಗಳು ಜೀವನದಲ್ಲಿ ಯಾವತ್ತೂ ಮರೆಯಲಾಗದ ಅವಧಿ...
18 ದಿನಗಳ ಕಾಲ ಉತ್ತರಾಖಂಡದಲ್ಲಿ ಪ್ರವಾಹಪೀಡಿತ ಮೂರು ಜಿಲ್ಲೆಗಳಲ್ಲಿ ರಕ್ಷಣಾಕಾರ್ಯದಲ್ಲಿ ತೊಡಗಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯ, ಶಿವಮೊಗ್ಗದ ವೈದ್ಯ ಡಾ. ವಿ.ಎಲ್.ಎಸ್. ಕುಮಾರ್ ಅವರು ವಾಪಸಾಗಿದ್ದು, ಅಲ್ಲಿನ ಅನುಭವವನ್ನು ಸೋಮವಾರ ಕನ್ನಡಪ್ರಭ ಜತೆಗೆ ಹಂಚಿಕೊಂಡಿದ್ದು ಹೀಗೆ.
ಉತ್ತರಖಂಡದಲ್ಲಿ ಭಾಗವಹಿಸಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಏಕೈಕ ಕರ್ನಾಟಕದ ಸದಸ್ಯ ಡಾ. ವಿ.ಎಲ್.ಎಸ್. ಕುಮಾರ್. ಅಲ್ಲಿಂದ ವಾಪಸಾದ ದಿನವೇ ನಗರದ ದೀನದಯಾಳು ರಸ್ತೆಯಲ್ಲಿರುವ ವಿದ್ಯಾ ಡೆಂಟಲ್ ಕ್ಲಿನಿಕ್‌ನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಅವರು ಅಲ್ಲಿನ ಅನುಭವವನ್ನು ಬಿಚ್ಚಿಟ್ಟಿರು.
ದಾರಿಯೇ ಇಲ್ಲ: ಪೀತೋರ್‌ಘಡ, ಆಲ್ಮೋರ ಹಾಗೂ ಉತ್ತರಕಾಶಿಯಲ್ಲಿ ನಮ್ಮ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿತ್ತು. ಈ ಜಿಲ್ಲೆಗಳ ಬಹಳಷ್ಟು ಸ್ಥಳಗಳಿಗೆ ಯಾರೂ ಸಹ ಹೋಗುವುದಕ್ಕೆ ಸಾಧ್ಯವಾಗಿಲ್ಲ. ಅಲ್ಲಿ ಎಷ್ಟು ಜನರು ಸಿಕ್ಕಿಹಾಕಿಕೊಂಡಿದ್ದಾರೋ ಗೊತ್ತಿಲ್ಲ. ಹೆಲಿಕ್ಯಾಫ್ಟರ್ ಇಳಿಯಲು ಜಾಗವಿಲ್ಲ. ಕಾಲ್ನಡಿಗೆಯಲ್ಲಿ ಹೋಗಲು ದಾರಿ ಇಲ್ಲ. ಎತ್ತರದ ಪ್ರದೇಶಕ್ಕೆ ತೆರಳಿರುವ ಅವರು ವಾಪಸು ಬರುವರೆಂದು ಇನ್ನೊಂದು ತಿಂಗಳು ಕಾಯಬಹುದೇನೋ ಅಷ್ಟೇ. ಆಮೇಲೆ ಅವರು ಜೀವಂತ ಇಲ್ಲ ಎಂದೇ ಭಾವಿಸಬೇಕಾಗುತ್ತದೆ ಎಂದು ಪರಿಸ್ಥಿತಿಯ ಭಯಾನಕತೆಯನ್ನು ತೆರೆದಿಟ್ಟರು.
ದಿನಕ್ಕೆ 50-60 ಬಾರಿ ಹೆಲಿಕ್ಯಾಫ್ಟರ್‌ಗಳು ಹಾರಾಡುತ್ತಿದ್ದವು. ಈಗಲೂ ಸಂತ್ರಸ್ತರಿಗೆ ಆಹಾರಧಾನ್ಯ, ನೀರು, ಔಷಧಿಗಳನ್ನು ಏರ್‌ಡ್ರಾಪ್ ಮಾಡಲಾಗುತ್ತಿದೆ ಎಂದರು.
ಸಂತ್ರಸ್ತ ಪಿತೋರಘಡ: ಪ್ರವಾಹದಿಂದ ಉತ್ತರಾಖಂಡದ ನದಿ ಪಾತ್ರಗಳೇ ಬದಲಾಗಿದ್ದವು. ನದಿ ಪಾತ್ರ ವಿಸ್ತಾರವಾಗಿದೆ. ನದಿಯ ಪಕ್ಕದಲ್ಲೇ ಇದ್ದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಹಾಗೂ ಸೇನೆಯ ಬೇಸ್ ಕ್ಯಾಂಪ್‌ಗಳು ಕೊಚ್ಚಿಹೋಗಿವೆ. ಈಗ ಈ ಪ್ರದೇಶಗಳಿಗೆ ಪ್ರವಾಸಿಗರು, ನಾಗರೀಕರ ಪ್ರವೇಶ ನಿರ್ಭಂದಿಸಲಾಗಿದೆ. ಯುದ್ಧದ ನಂತರ ರಣರಂಗ ಹೇಗಿರುತ್ತದೆಯೋ ಹಾಗೆ ಉತ್ತರಖಂಡದ ಈ ಮೂರು ಜಿಲ್ಲೆಗಳಿವೆ ಎಂದು ವಿ.ಎಲ್.ಎಸ್. ಕುಮಾರ್ ನೆಪಿಸಿಕೊಂಡರು.
ನೀರಿನ ವ್ಯವಸ್ಥೆ: ಪ್ರವಾಸಿಗರು, ಹೊರಗಿನಿಂದ ಬಂದವರನ್ನು ಹೊರಗೆ ಕರೆತರಲಾಗುತ್ತಿದೆ. ಆದರೆ ಅಲ್ಲಿನ ನಿವಾಸಿಗಳು ಅದೇ ಊರುಗಳಲ್ಲಿದ್ದಾರೆ ಎಂದರು.
ಮೊದಲ ಹಂತದಲ್ಲಿ ಸಂತ್ರಸ್ತರಿಗೆ ಟೆಂಟ್‌ಗಳು, ಔಷಧಿ ಕಿಟ್, ಕುಡಿಯುವ ನೀರು ವ್ಯವಸ್ಥೆ ಮಾಡಿದೆವು. ಕುಡಿಯುವ ನೀರಿಗಾಗಿ ನೆದರ್‌ಲ್ಯಾಂಡ್‌ನಿಂದ ತರಿಸಲಾಗಿದ್ದ ಉಪಕರಣವನ್ನು ಕೊಡಲಾಯಿತು. ಸತತ 18 ದಿನ ಇದೇ ಕೆಲಸ ನಮ್ಮ ಜವಾಬ್ದಾರಿಯಾಗಿತ್ತು ಎಂದರು. 2011ರಲ್ಲಿ ಇದೇ ಪ್ರದೇಶದಲ್ಲಿ ಮೇಘಸ್ಫೋಟ ಆದಾಗ ನಾನು ಹೋಗಿದ್ದೆ. ಅಲ್ಲಿನ ಭೌಗೋಳಿಕ ಪರಿಸ್ಥಿತಿ ನನಗೆ ಗೊತ್ತಿತ್ತು. ಹಾಗಾಗಿ ಈ ಬಾರಿಯೂ ಪರಿಹಾರ ಕಾರ್ಯ ತಂಡಕ್ಕೆ ನನ್ನನ್ನೇ ಆಯ್ಕೆ ಮಾಡಲಾಗಿತ್ತು ಎಂದು ಹೇಳಿದರು.
ತಮಿಳು ಕುಟುಂಬ ಬಚಾವ್...
ತಮಿಳುನಾಡಿನ ತಂಡವೊಂದನ್ನು ಪತ್ತೆ ಮಾಡಿದ ಬಗೆಯನ್ನು ಕುಮಾರ್ ವಿವರಿಸಿದ್ದು ಹೀಗೆ-
ತಮಿಳುನಾಡಿನಿಂದ ಬಂದಿದ್ದ 23 ಜನರ ತಂಡ ಮಾನಸ ಸರೋವರ ಯಾತ್ರೆಗೆ ಬಂದಿತ್ತು. ಪ್ರವಾಸ ಸಂದರ್ಭದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಮಾನಸ ಸರೋವರ ಸಂಪೂರ್ಣ ಹಿಮದಿಂದ ಆವೃತ್ತ ಪ್ರದೇಶ. ಇವರ ಬಗ್ಗೆ ಮಾಹಿತಿ ಪಡೆಯುವಂತೆ ನಮಗೆ ದೂರವಾಣಿ ಕರೆ ಬಂದಿತ್ತು.
ಈ 23 ಜನರು ನಾಪತ್ತೆಯಾಗಿದ್ದಾರೆ ಎಂದೇ ಭಾವಿಸಲಾಗಿತ್ತು. ನಾವು ಉತ್ತರಕಾಶಿಯಲ್ಲಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾಗ ಇವರ ಹುಡುಕಾಟ ನಡೆಸಿದೆವು. ಅವರನ್ನು ಕೊನೆಗೆ ಡಾರ್ಚುಲ ಬೇಸ್ ಕ್ಯಾಂಪ್‌ನಲ್ಲಿ ಪತ್ತೆ ಮಾಡಲಾಯಿತು. ಇವರ ಇರುವಿಕೆಯ ಬಗ್ಗೆ ಸಂಬಂಧಪಟ್ಟವರಿಗೆ, ಕುಟುಂಬದವರಿಗೆ ಮಾಹಿತಿ ನೀಡಲಾಯಿತು. ಇದು 18 ದಿನಗಳ ಅನುಭವದಲ್ಲಿ ನನಗೆ ಮಹತ್ವಪೂರ್ಣವಾದುದು.
- ಹೊನ್ನಾಳಿ ಚಂದ್ರಶೇಖರ್