ಅವಸರ ಮಾಡಿದರೆ ಗಣಿತ ಕಷ್ಟ: ಪ್ರೊ. ವಸಂತ ಕುಮಾರ
ಸಾಗರ: ಗಣಿತ ಕೇವಲ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿಲ್ಲ ಅದು ಬ್ರಹ್ಮಾಂಡವ್ಯಾಪಿಯಾದುದು ಎಂದು ಕುವೆಂಪು ವಿವಿ ಪ್ರೊ. ವಸಂತಕುಮಾರ ಪೈ ಹೇಳಿದರು.
ಇಲ್ಲಿನ ವಿಜ್ಞಾನ ವೇದಿಕೆ ಏರ್ಪಡಿಸಿದ್ದ ಗಣಿತ ಮಂಥನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ನಮ್ಮ ಉಸಿರಾಟಕ್ಕೊಂದು ಲೆಕ್ಕವಿದೆ. ಹೃದಯಬಡಿತಕ್ಕೂ ಲೆಕ್ಕವಿದೆ. ಇವು ಸ್ವಲ್ಪ ಏರುಪೇರಾದರೂ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತದೆ. ಕೇವಲ ಭೂಮಿ, ಗ್ರಹ, ನಕ್ಷತ್ರಗಳಷ್ಟೇ ಅಲ್ಲ ಪ್ರತಿಯೊಂದು ಚಲನೆಯೂ ಸಹ ಗಣಿತದ ಸೂತ್ರಕ್ಕೆ ಅನ್ವಯವಾಗಿರುತ್ತದೆ ಎಂದು ವಿವರಿಸಿದರು.
ಅವಸರ ಬೇಡ: ಗಣಿತ ಕಷ್ಟ ಎನ್ನುವ ಮಾತು ಸುಳ್ಳು. ಶ್ರಮಪಟ್ಟರೆ ಗಣಿತ ಎಲ್ಲ ವಿಷಯಗಳಿಗಿಂತ ಸುಲಭ. ಮೊದಲು ಸಮಸ್ಯೆ ಅರ್ಥಮಾಡಿಕೊಂಡು ನಂತರ ಯೋಚಿಸಬೇಕು. ಕಾಲ, ಪ್ರದೇಶ ಹಾಗೂ ತರ್ಕವನ್ನು ಅವಲಂಬಿಸಿ ಉತ್ತರಿಸಬೇಕು. ಅವಸರ ಮಾಡುವವರಿಗೆ ಗಣಿತ ಕೈಗೆ ಸಿಗುವುದಿಲ್ಲ ಎಂದು ಹೇಳಿದರು.
ಪ್ರತಿ ಆಟದಲ್ಲೂ ಗಣಿತವಿದೆ, ತರ್ಕವಿದೆ. ಸಂಗೀತದ ಸ್ವರಗಳು ಇರುವುದು ಕೇವಲ ಏಳು ಮಾತ್ರ. ಅವುಗಳ ತರಂಗಗಳನ್ನು ಸ್ವಲ್ಪವೇ ಬದಲಿಸಿದರೂ ಬೇರೆ ಬೇರೆ ರಾಗಗಳು ಹುಟ್ಟಿಕೊಳ್ಳುತ್ತವೆ.
ಸ್ವರಗಳ ಲೆಕ್ಕದ ಮೂಲಕವೇ ಅದರ ಮಾಧುರ್ಯವನ್ನೂ, ಭಾವವನ್ನೂ ವ್ಯತ್ಯಾಸ ಮಾಡಲು ಸಾಧ್ಯ.ಪ್ರತಿಯೊಂದು ಸಂಗೀತದ ಉಪಕರಣವೂ ಗಣಿತದ ಸೂತ್ರವನ್ನು, ಅಳತೆಯನ್ನು ಅವಲಂಬಿಸಿದೆ ಎಂದು ಉದಾಹರಣೆ ಸಹಿತ ವಿಶ್ಲೇಷಿಸಿದರು.
ವಿಜ್ಞಾನ ವೇದಿಕೆ ಅಧ್ಯಕ್ಷ ಪ್ರೊ.ಎಚ್.ಎಲ್.ಎಸ್. ರಾವ್, ಕಾರ್ಯದರ್ಶಿ ಪೂರ್ಣಪ್ರಜ್ಞ, ಎನ್. ರವಿಶಂಕರ್, ಎಚ್.ಎಂ. ನಾರಾಯಣಸ್ವಾಮಿ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.