ನಿವೇಶನ ಹಂಚಿಕೆಗೆ ಸಿದ್ಧರಾಗಿ: ಕಾಗೋಡು
ಸಾಗರ: ತಾಲೂಕಿನಲ್ಲಿ ನಿವೇಶನ ರಹಿತರಿಗೆ ಮುಂದಿನ ಮೂರು ತಿಂಗಳಿನೊಳಗೆ ನಿವೇಶನ ಹಂಚಿಕೆ ಮಾಡುವ ಕುರಿತು ತಕ್ಷಣ ಕಾರ್ಯಪ್ರವೃತ್ತರಾಗುವಂತೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಿವೇಶನ ವಿತರಣೆಗೆ ಸಂಬಂಧಪಟ್ಟಂತೆ ಮಂಗಳವಾರ ಕರೆಯಲಾಗಿದ್ದ ಕಂದಾಯ ಅಧಿಕಾರಿಗಳು, ಪಿಡಿಒ ಹಾಗೂ ಕಾರ್ಯದರ್ಶಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜಂಟಿಸರ್ವೆಗೆ ಸೂಚನೆ: ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ 94ಸಿ ಹಾಗೂ ನಿವೇಶನರಹಿತರ ಪ್ರತ್ಯೇಕ ಪಟ್ಟಿ ತಯಾರಿಸಿ ಕಾಲಮಿತಿಯೊಳಗೆ ತಹಸೀಲ್ದಾರರಿಗೆ ನೀಡಬೇಕು. ಪಟ್ಟಿ ತಯಾರಿಸುವ ಮೊದಲು ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು ಹಾಗೂ ಪಿಡಿಓ, ಕಾರ್ಯದರ್ಶಿ ಜಂಟಿಸರ್ವೆ ನಡೆಸುವಂತೆ ಸೂಚನೆ ನೀಡಿದರು.
ಪಿಡಿಓ ಹಾಗೂ ಕಾರ್ಯದರ್ಶಿಗಳು ಆಯಾ ಪಂಚಾಯ್ತಿ ವ್ಯಾಪ್ತಿಯಲ್ಲಿಯೇ ವಾಸವಾಗಿರಬೇಕು ಎಂದು ತಾಕೀತು ಮಾಡಿದ ಕಾಗೋಡು, ಆಯಾ ಗ್ರಾಮ ಪಂಚಾಯ್ತಿ ವಿಸ್ತೀರ್ಣ, ಅರಣ್ಯ ಹಾಗೂ ಕಂದಾಯ ಭೂಮಿ, ಮನೆ, ಶಾಲೆ, ದೇವಸ್ಥಾನ ಇನ್ನಿತರ ವಿವರಗಳನ್ನೊಳಗೊಂಡ ನಕಾಶೆಯನ್ನು ತಯಾರಿಸಬೇಕು ಎಂದು ಹೇಳಿದರು. ಕಾರ್ಗಲ್- ಜೋಗ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆ ಜಾಗ ಕುರಿತು ವಿವಾದ ಉಂಟಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ಕೆಲವರಿಗೆ ಜಾಗ ತೆರವುಗೊಳಿಸುವಂತೆ ನೋಟಿಸ್ ನೀಡಿರುವುದರಿಂದ ಅವರು ಆತಂಕದಲ್ಲಿದ್ದಾರೆ. ವಿವಾದಕ್ಕೆ ಸಂಬಂಧಪಟ್ಟಂತೆ ಪಟ್ಟಣ ಪಂಚಾಯ್ತಿಯಲ್ಲಿ ಸದ್ಯದಲ್ಲಿಯೇ ಅಧಿಕಾರಿಗಳ ಸಭೆ ಕರೆದು ನ್ಯಾಯ ದೊರಕಿಸಿಕೊಡಲಾಗುವುದು ಎಂದರು. ತಾಪಂ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ, ತಹಸೀಲ್ದಾರ್ ಆರ್. ರಾಜಣ್ಣ, ಕಾರ್ಯನಿರ್ವಣಾಧಿಕಾರಿ ಡಾ. ಸದಾಶಿವ ಹಾಜರಿದ್ದರು.