ಮಳೆ ಹಾನಿ ವೀಕ್ಷಿಸಿದ ಶಾಸಕ ಮಧು
ಸೊರಬ: ಮಳೆ ಹಾನಿಗೊಳಗಾದ ತಾಲೂಕಿನ ಗ್ರಾಮಗಳಿಗೆ ಶಾಸಕ ಮಧು ಬಂಗಾರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಂದ್ರಗುತ್ತಿ ಹೋಬಳಿ ಹಾಗೂ ತವನಂದಿ, ಕುಪ್ಪಗಡ್ಡೆ ಭಾಗಗಳಲ್ಲಿ ಬತ್ತವೂ ಸೇರಿದಂತೆ ಮೆಕ್ಕೆಜೋಳ ಬಹಳಷ್ಟು ಹಾಳಾಗಿದೆ. ಕಡಸೂರು ಗ್ರಾಮವೊಂದರಲ್ಲಿಯೇ 200ಕ್ಕೂ ಹೆಚ್ಚು ಎಕರೆ ಬಿತ್ತನೆಗೊಳಗಾದ ಬತ್ತದ ಗದ್ದೆ ಜಲಾವೃತಗೊಂಡಿದೆ. ಈ ಹಾನಿ ಕುರಿತಂತೆ ಸಮಗ್ರ ಪರಿಶೀಲನೆ ನಡೆಸಿ ನಷ್ಟದ ಅಂದಾಜು ಪಟ್ಟಿಯನ್ನು ಕೂಡಲೆ ಸರ್ಕಾರಕ್ಕೆ ತಲುಪಿಸುವ ವ್ಯವಸ್ಥೆಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಒಡೆದ ಚಿಕ್ಕಶಕುನ ಕೆರೆ ಏರಿಯನ್ನು ವೀಕ್ಷಿಸಿದರು. ಕೆರೆ ಏರಿಯ ಶಿಥಿಲತೆಯಿಂದಾಗಿ ಉಂಟಾದ ನಷ್ಟ ಹಾಗೂ ದುರಸ್ತಿಗೆ ಬೇಕಾದ ಅದಾಜು ಪಟ್ಟಿಯನ್ನು ಶೀಘ್ರವಾಗಿ ತಯಾರಿಸಿ, ಉದ್ರಿ ರಸ್ತೆ ಸಂಚಾರ ತ್ವರಿತವಾಗಿ ಸುಗಮಗೊಳಿಸಬೇಕು ಎಂದು ಅಭಿಯಂತರರಿಗೆ ತಿಳಿಸಿದರು.
ಇಒ ಮಂಜುಳಾ, ಜಿಪಂ ಅಭಿಯಂತರ ತಿಮ್ಮಣ್ಣ, ಸಣ್ಣ ನೀರಾವರಿ ಇಲಾಖೆ ಎಇಇ ಶಶಿಧರ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್. ಗಣಪತಿ, ಪಕ್ಷದ ವಕ್ತಾರ ಎಂ.ಡಿ. ಶೇಖರ್, ಗ್ರಾಪಂ ಸದಸ್ಯ ಸತ್ಯನಾರಾಯಣ, ಶಿವಕುಮಾರ್ ಅನೇಕ ಕೃಷಿಕರು ಇದ್ದರು.