ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಿ

Lingaraj Badiger
Updated On : 10 Jul 2013, 10:53 am

ಕ.ಪ್ರ.ವಾರ್ತೆ  ಶಿವಮೊಗ್ಗ  ಜು.9 ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಜಮೀನು ಒತ್ತುವರಿ ಆಗಿದ್ದರೆ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳಲು ಶಾಸಕರಾದ ಶಾರದಾ ಪೂರ್ಯಾನಾಯ್ಕ ಸೂಚಿಸಿದ್ದಾರೆ.
ತಾಪಂ ಸಭಾಂಗಣದಲ್ಲಿ ಮಂಗಳವಾರ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಮುಂದುವರೆದ ತ್ರೈಮಾಸಿಕ ಕೆಡಿಬಿ ಸಭೆಯಲ್ಲಿ ಮಾತನಾಡಿದ ಅವರು, ಜಮೀನು ಸರ್ವೆಗೆ ಯಾರಾದರೂ ಅಡ್ಡಿಪಡಿಸಿದರೆ ಅಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಅಗತ್ಯವಿದ್ದರೆ ಪೊಲೀಸ್ ರಕ್ಷಣೆ ಪಡೆದು ಸಮೀಕ್ಷೆ ಮುಕ್ತಾಯಗೊಳಿಸಬೇಕು ಎಂದರು.
ಇದನ್ನು ವಿಳಂಬ ಮಾಡಬೇಡಿ. ಅಲ್ಲದೇ ಅಂತಹ ಜಮೀನುಗಳಲ್ಲಿ ಆಯಾ ಗ್ರಾಮದ ನಿವೇಶನ ರಹಿತ ಬಡವರನ್ನು ಗುರುತಿಸಿ ನಿವೇಶನ ನೀಡಿ ಎಂದು ತಹಶೀಲ್ದಾರ್ ಕೊಟ್ರೇಶ್ ಅವರಿಗೆ ಸೂಚಿಸಿದರು.
ಜಿಲ್ಲಾ ಕಾರಾಗೃಹ ಪ್ರಗತಿ: ಪಿಡಬ್ಲ್ಯೂಡಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆನಂದರಾವ್, ಸೋಗಾನೆ ಬಳಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಜಿಲ್ಲಾ ಕಾರಗೃಹ ರಾಜ್ಯದ ಕಾರಗೃಹಗಳಿಗೆ ಮಾದರಿಯಾಗಲಿದೆ. ಬೆಂಗಳೂರು ಮತ್ತಿತರೆಡೆ ಇರುವ ಕಾರಗೃಹಗಳಲ್ಲಿ ಬ್ಯಾರಕ್ ವ್ಯವಸ್ಥೆಯಿದ್ದು, ಒಂದೇ ಕೊಠಡಿಯಲ್ಲಿ ಹಲವು ಕೈದಿಗಳನ್ನು ಇರಿಸಲಾಗುತ್ತದೆ. ಆದರೆ, ಶಿವಮೊಗ್ಗದ ನೂತನ ಕಾರಾಗೃಹದಲ್ಲಿ ಪುರುಷ ಕೈದಿಗಳ ವಿಭಾಗದಲ್ಲಿ ಬ್ಯಾರಕ್ ವ್ಯವಸ್ಥೆಗೆ ಬದಲಾಗಿ ಸೆಲ್‌ಗಳನ್ನು ನಿರ್ಮಿಸಲಾಗುತ್ತಿದೆ. ಈ ಸೆಲ್‌ಗಳಲ್ಲಿ ಕೇವಲ ಇಬ್ಬರು ಕೈದಿಗಳನ್ನು ಮಾತ್ರ ಇರಿಸಬಹುದು ಎಂದರು.
100 ಕೈದಿಗಳ ಸಾಮರ್ಥ್ಯ: ಮಹಿಳಾ ಕೈದಿಗಳ ಕೊಠಡಿಯಲ್ಲಿ ಬ್ಯಾರಕ್ ವ್ಯವಸ್ಥೆ ಮಾಡಲಾಗುತ್ತಿದೆ. ಇದರಲ್ಲಿ ಸುಮಾರು 100 ಮಹಿಳಾ ಕೈದಿಗಳ ಸಾಮರ್ಥ್ಯ ಹೊಂದಿದೆ. ಪುರುಷರ ವಿಭಾಗದಲ್ಲಿ 500 ಕೈದಿಗಳನ್ನು ಇರಿಸುವ ಸಾಮರ್ಥ್ಯ ಇದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಸಮರ್ಪಕ ಮಾಹಿತಿ ನೀಡದ ಕಾರಣ ಅಸಮಧಾನಗೊಂಡ ಶಾರದಾ ಪೂರ್ಯಾನಾಯ್ಕ್, ಹಿರಿಯ ಅಧಿಕಾರಿಗಳೇ ಸಭೆಗೆ ಬರುವಂತೆ ತಾಕೀತು ಮಾಡಿದರು. ತಾಪಂ ಅಧ್ಯಕ್ಷೆ ದೇವಿಬಾಯಿ ಧರ್ಮನಾಯ್ಕ್, ತಾಲೂಕು ವ್ಯಾಪ್ತಿಯ ಜಿಪಂ ಸದಸ್ಯರು, ಎಲ್ಲಾ ಇಲಾಖೆಯ ಅಧಿಕಾರಿಗಳು, ಎಂಜಿನಿಯರ್‌ಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement