ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿ ಬಂಧನ
ಕ.ಪ್ರ.ವಾರ್ತೆ ಸಾಗರ ಜು. 10 ಪಟ್ಟಣದ ಶ್ರೀಟಾಕಿಸ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದುಕೊಂಡ ಪೇಟೆ ಠಾಣೆ ಪೊಲೀಸರು ಬಂಧಿತನಿಂದ ಸುಮಾರು ರು. 1.73 ಲಕ್ಷ ಮೌಲ್ಯದ 26 ಗ್ರಾಂ ತೂಕದ ಬಂಗಾರದ ಬಳೆ ಹಾಗೂ 3.50 ಕ್ಯಾರೆಟ್ ವಜ್ರ ವಶಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ.
ಶ್ರೀಟಾಕಿಸ್ ರಸ್ತೆಯಲ್ಲಿ ಪಶ್ಚಿಮ ಬಂಗಾಳದ ಅಬ್ದುಲ್ ರಹೀಂ ಶೇಕ್ ಯಾನೆ ರೋಹಿತ್ ಎಂಬಾತ ಜ್ಯುವೆಲರಿ ಶಾಪ್ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ.
ಪೊಲೀಸ್ ಜೀಪ್ ಬಂದಾಗ ಅಬ್ದುಲ್ ರಹೀಂ ಶೇಕ್ ಓಡಿ ಹೋಗುವ ಪ್ರಯತ್ನ ಮಾಡಿದಾಗ ಪೊಲೀಸರು ೊಲೀಸರು ಆತನನ್ನು ಬಂಧಿಸಿ, ತಪಾಸಣೆಗೆ ಒಳಪಡಿಸಿದ್ದಾರೆ.
ವಜ್ರ ಪತ್ತೆ: ಬಂಧಿತನ ಬಳಿ 26 ಗ್ರಾಂ ತೂಕದ ಬಂಗಾರದ ಬಳೆ ಹಾಗೂ 3.50 ಕ್ಯಾರೆಟ್ ವಜ್ರ ಪತ್ತೆಯಾಗಿದೆ. ಈ ಬಗ್ಗೆ ಆರೋಪಿಯನ್ನು ವಿಚಾರಿಸಿದಾಗ ಕೊಯಮತ್ತೂರಿನ ಮೋಹನ ಎಂಬುವವರ ಬಳಿ ಕಳೆದ 20 ದಿನಗಳಿಂದ ಅಬ್ದುಲ್ ರಹೀಂ ಶೇಕ್ ಚಿನ್ನ, ಬೆಳ್ಳಿ ಕೆಲಸ ಮಾಡುತ್ತಿದ್ದನು.
ಉತ್ತಮವಾಗಿ ಕೆಲಸ ಮಾಡುತ್ತಿದ್ದ ಅಬ್ದುಲ್ ರಹೀಂ ಶೇಕ್ ಮೋಹನ್ ದುರಸ್ತಿಗೆಂದು ಬಂಗಾರದ ಬಳೆ ಹಾಗೂ ವಜ್ರದ ಹರಳನ್ನು ನೀಡಿದ್ದಾರೆ.
ಆದರೆ ಅಬ್ದುಲ್ ರಹೀಂ ಶೇಕ್ ದುರಸ್ತಿಗೆಂದು ನೀಡಿದ್ದ ಬಂಗಾರದ ಬಳೆ ಹಾಗೂ ವಜ್ರವನ್ನು ಸಾಗರದಲ್ಲಿ ಮಾರಾಟ ಮಾಡಲು ಬಂದಿದ್ದಾಗಿ ತಿಳಿಸಿದ್ದಾನೆ.
ಈ ಸಂಬಂಧ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಪೇಟೆ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಮನೋಜಕುಮಾರ್, ಪಿ.ಎಸ್.ಐ. ಚಿದಾನಂದ್, ಎ.ಎಸ್.ಐ. ಜಿ.ಡಿ.ವೆಂಕಟೇಶ್, ಸಿಬ್ಬಂದಿ ಮಂಜಪ್ಪ, ಕುಮಾರ್, ಶ್ರೀಧರ ಹಾಗೂ ರಾಘವೇಂದ್ರ ಭಾಗವಹಿಸಿದ್ದರು.