ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಡವರ ಹಸಿವು ನೀಗಿಸುವ ಯೋಜನೆ: ಕಿಮ್ಮನೆ

Lingaraj Badiger
Updated On : 11 Jul 2013, 10:43 am

ಕ.ಪ್ರ.ವಾರ್ತೆ, ಶಿವಮೊಗ್ಗ,  ಜು.10
ಒಂದು ರುಪಾಯಿ ದರದಲ್ಲಿ 30 ಕೆ.ಜಿ. ಅಕ್ಕಿ ವಿತರಿಸುವ ರಾಜ್ಯ ಸರ್ಕಾರ ಮಹತ್ವಕಾಂಕ್ಷಿ ಯೋಜನೆಯಾದ 'ಅನ್ನ ಭಾಗ್ಯ' ರಾಜ್ಯದ ಇತಿಹಾಸದಲ್ಲೇ ಮೊದಲು ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಬುಧವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಬಿಪಿಎಲ್ ಕಾರ್ಡ್ದಾರರಿಗೆ 1ರ ದರದಲ್ಲಿ 30 ಕೆ.ಜಿ. ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿದ ಅವರು, ವಿಶ್ವದ ಇತಿಹಾಸದಲ್ಲಿ ಅನ್ನದ ಹಕ್ಕು ಮಸೂದೆಯನ್ನು ಮಂಡಿಸಿರುವುದು ಯುಪಿಎ ಸರ್ಕಾರ. ಅದೇ ರೀತಿ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.
ಮಹತ್ತರ ಯೋಜನೆ: ಬಡವರ ಹಸಿವಿನ ಹಂಗನ್ನು ನೀಗಿಸಲು ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಇಂತಹ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತಂದಿರುವುದು ಶ್ಲಾಘನೀಯ ಎಂದ ಅವರು, ಚುನಾವಣೆ ಗೆದ್ದು ಅಧಿಕಾರದ ಗದ್ದುಗೆ ಹೇರಿದ 2 ತಿಂಗಳಲ್ಲಿ ಇಂತಹ ಮಹತ್ತರ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ. ಅಲ್ಲದೇ ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಯೋಜನೆ ಘೋಷಣೆ ಮಾಡಲಾಗಿದೆ ಎಂದರು.
ಸರ್ಕಾರದ ಈ ಯೋಜನೆಗೆ 4.5 ಕೋಟಿ ರುಪಾಯಿ ವೆಚ್ಚ ತಗುಲಿದ್ದು, ಇದಲ್ಲದೆ ಹಿಂದುಳಿದ ವರ್ಗಗಳ ನಿಗಮದ ಸಾಲ ಮತ್ತು ಭಾಗ್ಯಜ್ಯೋತಿ ಯೋಜನೆಯ ಬಾಕಿ ಹಣ 4,200 ಕೋಟಿಯನ್ನು ಮನ್ನಾ ಮಾಡುವ ಮೂಲಕ 10 ಸಾವಿರ ಕೋಟಿ ಯೋಜನೆಗಳನ್ನು ಸದ್ಯದಲ್ಲೇ ಅನುಷ್ಠಾನಕ್ಕೆ ತರಲಿದೆ ಎಂದು ತಿಳಿಸಿದರು.
ಶೀಘ್ರದಲ್ಲೇ ಹಾಲು ವಿತರಣೆ: ಸರ್ಕಾರಿ  ಶಾಲಾ ಮಕ್ಕಳಿಗೆ ಹಾಲು ವಿತರಣೆ ಮಾಡುವ ಯೋಜನೆ ಶೀಘ್ರವೇ ಜಾರಿಯಾಗಲಿದೆ. ಇದಕ್ಕೆ 600 ಕೋಟಿ ವೆಚ್ಚ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆ ಜಾರಿಯಾಗಲಿದೆ ಎಂದು ಮಾಹಿತಿ ನೀಡಿದರು.
ವಿಧಾನಸಭಾ ಸಭಾಪತಿ ಕಾಗೋಡು ತಿಮ್ಮಪ್ಪ ಮಾತನಾಡಿ, ಸಕಲ ಜೀವರಾಶಿಗಳಿಗೂ ಆಹಾರ ಮುಖ್ಯ. ಈ ಸಂಬಂಧವಾಗಿ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿರುವುದು ಅರ್ಥಪೂರ್ಣವಾಗಿದೆ. ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗ ಬೇಕಾದರೆ ಜಿಲ್ಲಾಡಳಿತ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು.
ಪರಿಶೀಲಿಸಿ: ಈ ಯೋಜನೆಯ ಲಾಭ ನೇರವಾಗಿ ಫಲಾನುಭವಿಗಳಿಗೆ ಸಿಗಬೇಕು. ಆಗ ಮಾತ್ರ ಸರ್ಕಾರ ಯೋಜನೆಗಳ ಉದ್ದೇಶ ಈಡೇರಿದಂತಾಗುತ್ತದೆ. ಇದನ್ನು ಅರ್ಹರಿಗೆ ಸೇರಿಸುವ ಹೊಣೆ ಅಧಿಕಾರಿಗಳದ್ದು. ಈ ಬಗ್ಗೆ ಎಲ್ಲಾ ತಾಲೂಕುಗಳ ತಹಸೀಲ್ದಾರ್, ರೆವಿನ್ಯೂ, ಆಹಾರ ಇಲಾಖೆ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗಳ ಮೇಲೆ ಕಣ್ಣಿಟ್ಟು ಸಮರ್ಪಕವಾಗಿ ಅಕ್ಕಿ ಪೂರೈಕೆ ಮಾಡುತ್ತಿದ್ದಾರಾ ಎಂದು ಪರಿಶೀಲಿಸಬೇಕು ಎಂದು ಸೂಚಿಸಿದರು.
ಸೋಮಾರಿಗಳಲ್ಲ: ರಾಜ್ಯ ಸರ್ಕಾರ ಈ ಯೋಜನೆಗೆ ರಾಜ್ಯದ ಬಹಳಷ್ಟು ಕಡೆಯಿಂದ ಒಳ್ಳೆಯ ಅಭಿಪ್ರಾಯಗಳು ಬರುತ್ತಿದ್ದರೆ. ಕೆಲ ಟೀಕಾಕಾರರ ಗುಂಪು ಈ ಯೋಜನೆ ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತದೆ ಎನ್ನುತ್ತಿದ್ದಾರೆ. ಆದರೆ, ಈ ಯೋಜನೆಯ ಪ್ರಯೋಜನ ಪಡೆಯುವ ಎಲ್ಲರೂ ಸೋಮಾರಿಗಳಾಗದೆ ದುಡಿಯಲು ಶಕ್ತಿ ನೀಡುತ್ತದೆ. ದುಡಿಮೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡು 5 ಗಂಟೆ ದುಡಿಯುವವರು 8 ಗಂಟೆಗಳ ಕೆಲಸ ಮಾಡಿ ಎಂದರು.
ತಪ್ಪು ಸಹಿಸುವುದಿಲ್ಲ: ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಮಾತನಾಡಿ, ಅಕ್ಕಿ ವಿತರಣೆಯಲ್ಲಿ ಲೋಪದೋಷಗಳು ಆಗದಂತೆ ಅಧಿಕಾರಿಗಳು ಎಚ್ಚರವಹಿಸಿಬೇಕು. ಒಂದು ವೇಳೆ ಕಾರ್ಯವೈಖರಿಯಲ್ಲಿ ತಪ್ಪು ಕಂಡು ಬಂದರೆ ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಅವರು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್, ಜಿ.ಪಂ. ಸಿಇಓ ಸಸಿಕಾಂತ್ ಸೆಂಥಿಲ್, ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀರಂಗಯ್ಯ, ಜಿ.ಪಂ. ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ತಾಪಂ ಅಧ್ಯಕ್ಷೆ ದೇವಿಬಾಯಿ ಧರ್ಮನಾಯ್ಕ್, ಜಿಪಂ ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement