ರೋಟರಿಯಿಂದ ಸೋಲಾರ್ ದೀಪ ಅಳವಡಿಕೆ
ಸಾಗರ: ರೋಟರಿ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಸೋಲಾರ್ ದೀಪ ಅಳವಡಿಸುವ ಯೋಜನೆ ಹಾಕಿಕೊಂಡಿದೆ ಎಂದು ಸಂಸ್ಥೆಯ ನೂತನ ಅಧ್ಯಕ್ಷ ಎಂ.ಕೆ. ಅಶ್ವತ್ಥನಾರಾಯಣ ಹೇಳಿದರು.
ಪಟ್ಟಣದ ರೋಟರಿ ಭವನದಲ್ಲಿ ಏರ್ಪಡಿಸಿದ್ದ ಸಂಸ್ಥೆಯ 2013-14ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಇದನ್ನು ಮನಗಂಡ ಸಂಸ್ಥೆ ಈ ಸಾಲಿನಲ್ಲಿ ಆಯ್ದ ಹಳ್ಳಿಗಳಿಗೆ ಸೋಲಾರ್ ಅಳವಡಿಸುವ ಉದ್ದೇಶ ಹೊಂದಿದೆ ಎಂದರು.
ವ್ಯಕ್ತಿತ್ವ ವಿಕಸನ, ಶೈಕ್ಷಣಿಕ ಪ್ರಗತಿಗೆ ಪೂರಕ ಕಾರ್ಯಕ್ರಮಗಳು, ಕೃಷಿಮೇಳ, ವೃತ್ತಿ ತರಬೇತಿ, ಸಾಧಕರಿಗೆ ಸನ್ಮಾನ, ಮಳೆಕೊಯ್ಲು ಮೊದಲಾದ ಸಮಾಜಮುಖಿ ಚಟುವಟಿಕೆಗಳ ಬಗ್ಗೆ ಘೋಷಿಸಿದರು. ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಬಿ.ವಿ.ದೀಪಕ್, ಶೈಕ್ಷಣಿಕ-ಸಾಮಾಜಿಕ-ಆರೋಗ್ಯ ಕ್ಷೇತ್ರದಲ್ಲಿ ಸಂಸ್ಥೆಯು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದು ಸಮಾಜ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಮಾಜಿ ಜಿಲ್ಲಾ ಗವರ್ನರ್ ಎಚ್.ಎಫ್. ಚಂದ್ರಶೇಖರ ಪ್ರಮಾಣವಚನ ಭೋದಿಸಿದರು. ಕೆ.ಎನ್. ಶ್ರೀಧರ್, ವೆಂಕಟೇಶ್, ಸಾರಿಶ್, ದಿನೇಶ್, ನರೇಂದ್ರ, ಶೇಷಗಿರಿ ಶರ್ಮ, ಮಾರುತೇಶ ಬಾಗಲಕೋಟೆ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.