ಇಂದಿನ ಬಜೆಟ್‌ನಲ್ಲಿ ಜಿಲ್ಲೆಯ ನಿರೀಕ್ಷೆ
ಶಿವಮೊಗ್ಗ: ಶಿವಮೊಗ್ಗ ನಗರಸಭೆ ನಗರಪಾಲಿಕೆಯಾಗಿ ಘೋಷಣೆಯಾಗುವುದೇ? ಜಿಲ್ಲೆಯ ಮಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಲಿರುವ ಆಯವ್ಯಯದ ಮುಖ್ಯ ನಿರೀಕ್ಷೆ ಇದು. ಇದರ ಜತೆಗೆ ಸಾಕಷ್ಟು ನಿರೀಕ್ಷೆಗಳೂ ಸಾಕಷ್ಟಿವೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಸಾಕಷ್ಟು ಕೊಡುಗೆಗಳನ್ನು ಪಡೆದುಕೊಂಡಿದ್ದ ಶಿವಮೊಗ್ಗ ಜಿಲ್ಲೆ, ಅದರಲ್ಲೂ ಶಿವಮೊಗ್ಗ ನಗರ ಬಿಜೆಪಿ ಸರ್ಕಾರದ ಕೊನೆ ಅವಧಿಯಲ್ಲಿ ನಿರ್ಲಕ್ಷ್ಯಕ್ಕೊಳಗಾಯಿತು. ಕಳೆದೈದು ವರ್ಷದಲ್ಲಿ ಸಾಕಷ್ಟು ಕೆಲಸವಾಗಿದೆಯಾದರೂ, ಆಗಬೇಕಾಗಿರುವ ಕೆಲಸವೂ ಸಾಕಷ್ಟಿದೆ. ಅರ್ಧಕ್ಕೆ ನಿಂತ ಅನೇಕ ಯೋಜನೆಗಳು ಪೂರ್ಣಗೊಳ್ಳಬೇಕಾಗಿದೆ, ಸಣ್ಣಪುಟ್ಟ ಸಮಸ್ಯೆಗಳು ಹಾಗೇ ಉಳಿದಿವೆ.
ಲೋಕಸಭಾ ಚುನಾವಣೆ ಎದುರಿಗಿದೆ. ಅದೇ ರೀತಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬದಿಗಿಟ್ಟು ಜಿಲ್ಲೆಯಲ್ಲಿ ಮತದಾರ ಕಾಂಗ್ರೆಸ್‌ಗೆ ಮಣೆ ಹಾಕಿದ್ದಾರೆ. ಹೀಗಿರುವಾಗ ಜನರ ನಿರೀಕ್ಷೆಗೆ ಸ್ಪಂದಿಸುವ ಯೋಜನೆಗಳನ್ನು ಪ್ರಕಟಿಸುವ ಹೊಣೆಗಾರಿಕೆಯೂ ಕಾಂಗ್ರೆಸ್ ಸರ್ಕಾರದ ಮೇಲಿದೆ.
ನಿರೀಕ್ಷೆಗಳು
1. ಶಿವಮೊಗ್ಗ ನಗರಸಭೆಯನ್ನು ನಗರಪಾಲಿಕೆಯಾಗಿ ಘೋಷಣೆ
2. ಅಡಕೆ ಬೆಳೆಗೆ ತಗುಲಿರುವ ರೋಗದಿಂದ ಬೆಳೆಗಾರ ಕಂಗೆಟ್ಟಿದ್ದು, ಸಹಾಯಹಸ್ತ ನಿರೀಕ್ಷಿಸಿದ್ದಾನೆ.
3. ತುಂಗಾ ಎಡದಂತೆ ಮತ್ತು ಬಲದಂಡೆ ನಾಲೆ ಅಭಿವೃದ್ಧಿ
4. ನೀರು ಪೋಲಾಗುವುದನ್ನು ತಡೆಯಲು ಗೊಂದಿ ಅಣೆಕಟ್ಟು ಆಧುನೀಕರಣ
5. ಜಿಲ್ಲೆಯ ಕೆರೆಗಳಿಗೆ ಕಾಯಕಲ್ಪದ ಅವಶ್ಯಕತೆ ಇದೆ
6. ಅರ್ಧಕ್ಕೆ ನಿಂತ ವಿಮಾನ ನಿಲ್ದಾಣಕ್ಕೆ ಕಾಯಕಲ್ಪ
7. ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ ಚಲಾವಣೆಗೆ ತರುವುದು.
8. ನಿರೀಕ್ಷೆ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸುವ ಉದ್ಯಮ ಜಿಲ್ಲೆಗೆ ಬಂದಿಲ್ಲ, ಅವುಗಳನ್ನು ಸೆಳೆಯಲು ವಿಶೇಷ ಪ್ರಯತ್ನ ಆಗಬೇಕಾಗಿದೆ.