ದುರಂತ ಹೆಚ್ಚಾಗುವುದರಲ್ಲಿ ಮಾನವನ ಪಾಲೂ ಹೆಚ್ಚು
ಶಿವಮೊಗ್ಗ: ಮೇಘಸ್ಫೋಟವಾಗಿದ್ದು ನೈಸರ್ಗಿಕ ಅವಘಡ. ಆದರೆ ದುರಂತದ ತೀವ್ರತೆ ಹೆಚ್ಚಾಗುವುದರಲ್ಲಿ ಮಾನವನ ಪಾಲೂ ಹೆಚ್ಚು. ಪ್ರಕೃತಿಯ ಮೇಲೆ ನಡೆಸಿದ ಅವ್ಯಾಹತ ದಾಳಿಯ ಪರಿಣಾಮವಿದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿ ಸದಸ್ಯ ಡಾ. ವಿ.ಎಲ್.ಎಸ್. ಕುಮಾರ್ ಹೇಳಿದರು.
ಉತ್ತರಾಖಂಡದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದ ಡಾ. ಕುಮಾರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸಂಪೂರ್ಣ ಗುಡ್ಡಗಾಡು ಪ್ರದೇಶವಾಗಿರುವ ಉತ್ತರಾಖಂಡ ಭೂಕಂಪಗ್ರಸ್ತ ಪ್ರದೇಶವೂ ಹೌದು. ತೀವ್ರ ಸಂಕಷ್ಟಕ್ಕೊಳಗಾಗಿದ್ದ ಪ್ರದೇಶದಲ್ಲಿ ರೆಡ್‌ಕ್ರಾಸ್ ಸಂಸ್ಥೆಯು ವಿಪತ್ತು ನಿರ್ವಹಣಾ ಸಮಿತಿಯ ಮೂರು ತಂಡಗಳ ಮೂಲಕ ಪರಿಹಾರ ಕಾರ್ಯದಲ್ಲಿ ತೊಡಗಿತ್ತು. ಸತತ ಕಾರ್ಯನಿರ್ವಹಿಸಬೇಕಿತ್ತು ಎಂದರು.
ಸಂತ್ರಸ್ತರಿಗೆ ವಿತರಿಸಲು 10,000 ಕಿಟ್‌ಗಳನ್ನು ರೆಡ್‌ಕ್ರಾಸ್ ಸಂಸ್ಥೆ ನೀಡಿತ್ತು. ಆದರೆ ರಸ್ತೆ ಸಂಪರ್ಕ ಕಡಿತಗೊಂಡಿದ್ದ ಕಾರಣ ಇದರಲ್ಲಿ ವಿತರಿಸಲು ಸಾಧ್ಯವಾಗಿದ್ದು 130 ಕಿಟ್‌ಗಳನ್ನು ಮಾತ್ರ ಎಂದ ಅವರು, ಸ್ವಯಂಸೇವಾ ಸಂಸ್ಥೆಗಳು ಮಾತ್ರವಲ್ಲದೇ ರಾಜಕೀಯ ಪಕ್ಷಗಳ ಕಾರ್ಯಕರ್ತರೂ ಪರಿಹಾರ ಕಾರ್ಯದಲ್ಲಿ ತೊಡಗಿದ್ದು ಕಂಡುಬಂತು ಎಂದರು.
ಈ ಪ್ರದೇಶದಲ್ಲಿ ಆದ್ಯತೆಯ ಮೇಲೆ ರಸ್ತೆಗಳ ನಿರ್ಮಾಣ ಆಗಬೇಕಿದೆ. ಆಗ ಮಾತ್ರ ಇನ್ನೂ ಸಿಲುಕಿಕೊಂಡಿರುವ ಜನರಿಗೆ ನೆರವು ತಲುಪಿಸಲು ಸಾಧ್ಯ. ಹೆಲಿಕಾಫ್ಟರ್ ಮೂಲಕ ಪರಿಹಾರ ಸಾಮಗ್ರಿಗಳ ಏರ್‌ಡ್ರಾಪ್ ನಡೆಯುತ್ತಿದ್ದರೂ ಎಲ್ಲರಿಗೂ ಸಿಕ್ಕಿಲ್ಲ ಎಂದರು. ಮನುಷ್ಯನ ದುರಾಸೆಯ ಕಾರಣದಿಂದ ಇಂತಹ ಹಾನಿ ಸಂಭವಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪುನರ್‌ನಿರ್ಮಾಣ ಮಾಡಬೇಕಿದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶೃಂಗೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವೈ.ಕೆ. ಸೂರ್ಯನಾರಾಯಣ ಇದ್ದರು.