ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಗರ್‌ಹುಕುಂ ಸಾಗುವಳಿದಾರನ ಮೇಲೆ ಹಲ್ಲೆ

Lingaraj Badiger
Updated On : 12 Jul 2013, 10:51 am

ಕ.ಪ್ರ.ವಾರ್ತೆ, ಶಿವಮೊಗ್ಗ, ಜು.11
ಭದ್ರಾವತಿ ತಾಲೂಕಿನ ಸೈದರಕಲ್ಲಹಳ್ಳಿ ಬಗರ್‌ಹುಕುಂ ಸಾಗುವಳಿದಾರ ಶಿವಮೂರ್ತಿಯವರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಶಿವಮೂರ್ತಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತಮಾಡಿ, ಕಳೆದ ಶುಕ್ರವಾರ ಅರಣ್ಯ ಸಿಬ್ಬಂದಿ ಏಕಾಏಕಿ ಮನೆಯೊಳಗೆ ನುಗ್ಗಿ, ಅರಣ್ಯದೊಳಗೆ ಕರೆದೊಯ್ದು ಮನಬಂದಂತೆ ಥಳಿಸಿದರು ಎಂದರು. ಈ ಮಧ್ಯೆಯೇ ಪ್ರಕರಣವನ್ನು ಗಂಭೀರವಾಗಿ ಪರಿಣಿಸಿರುವ ಬಿಜೆಪಿಯು ಮಾನವಹಕ್ಕು ಆಯೋಗಕ್ಕೆ ದೂರು ಕೊಡಲು ತೀರ್ಮಾನಿಸಿದೆ.
ಪ್ರಕರಣ ದಾಖಲಿಸಲಿ: ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ವಿಧಾನಪರಿಷತ್ ಸದಸ್ಯ ಸಿದ್ದರಾಮಣ್ಣ, ಅರಣ್ಯ ಇಲಾಖೆ ಕಾನೂನಿನಡಿ ಪ್ರಕರಣ ದಾಖಲಿಸಲಿ. ಆದರೆ, ವಿನಾಕಾರಣ ಅಮಾಯಕ ರೈತನ ಮೇಲೆ ದೌರ್ಜನ್ಯ ನಡೆಸಿರುವುದು ಅಮಾನವೀಯ ಕೃತ್ಯ ಎಂದು ಟೀಕಿಸಿದರು.
ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸದ ಹೊರತು ಅರಣ್ಯ ಭೂಮಿ ನಿಖರ ಗುರುತು ಪತ್ತೆ ಹಚ್ಚಲು ಸಾಧ್ಯವೇ ಇಲ್ಲ. ಹಾಗೆಯೇ ಇತ್ತೀಚೆಗೆ ಅರಣ್ಯ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಯಾವುದೇ ಕಾರಣಕ್ಕೂ ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸದಂತೆ ತೀರ್ಮಾನ ಕೈಗೊಳ್ಳಲಾಗಿತ್ತು. ಜಿಲ್ಲಾಧಿಕಾರಿಯವರು ಈ ಸಂಬಂಧ ಪ್ರಕಟಣೆಯನ್ನೂ ಹೊರಡಿಸಿದ್ದಾರೆ, ಆದರೆ ಶಿವಮೂರ್ತಿಯವರ ಮೇಲೆ ವಿನಾಕಾರಣ ಹಿಂಸಿಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ನಿರ್ಧಾರವನ್ನು ಗಣನೆಗೆ ತೆಗೆದುಕೊಳ್ಳದೆ ಭದ್ರಾವತಿ ವ್ಯಾಪ್ತಿಯ ಅರಣ್ಯ ಇಲಾಖೆ ಸಿಬ್ಬಂದಿ ಅಮಾಯಕ ರೈತನನ್ನು ಕಾಡಿನೊಳಗೆ ಕರೆದೊಯ್ದು ಮನಬಂದಂತೆ ಥಳಿಸಿರುವುದು ಸರಿಯಲ್ಲ. ಈ ಸಂಬಂಧ ನಾನು ಅಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದರು.
ಇಲಾಖೆಗೆ ಎಚ್ಚರಿಕೆ: ಜನರೊಂದಿಗೆ ಘರ್ಷಣೆಗೆ ಅವಕಾಶ ಮಾಡಿಕೊಡದೆ ಪ್ರಕರಣ ಶಾಂತಿಯುತವಾಗಿ ಬಗೆಹರಿಯಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಅರಣ್ಯ ಇಲಾಖೆ ದೌರ್ಜನ್ಯವನ್ನು ಮುಂದುವರಿಸಿದಲ್ಲಿ ಭಾರತೀಯ ಜನತಾಪಕ್ಷವು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
 ದೌರ್ಜನ್ಯಕ್ಕೊಳಗಾಗಿರುವ ರೈತ ಶಿವಮೂರ್ತಿ ಮಾತನಾಡಿ, ಸುಮಾರು 30 ವರ್ಷಗಳಿಂದ ಮೂರು ಎಕರೆ ಜಮೀನಿನಲ್ಲಿ ಬಗರ್‌ಹುಕುಂ ಸಾಗುವಳಿ ಮಾಡುತ್ತಿದ್ದೇನೆ. ತಂದೆ ಕಾಲದಿಂದಲೂ ಇಲ್ಲಿ ಕೃಷಿ ಮಾಡಿಕೊಂಡುಬಂದಿದ್ದೇವೆ. ಕಳೆದ ಶುಕ್ರವಾರ ಮಧ್ಯಾಹ್ನ ಎಂಟು ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ದಿಢೀರ್ ಮನೆಗೆ ನುಗ್ಗಿದ್ದರು. ಬಟ್ಟೆ ಧರಿಸಲೂ ಸಹ ಅವಕಾಶ ನೀಡದೇ ಬಲವಂತವಾಗಿ ವ್ಯಾನ್‌ನೊಳಗೆ ತಳ್ಳಿ ಜೋಳದಾಲ್ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಮನಬಂದಂತೆ ಥಳಿಸಿದರು ಎಂದು ನೋವು ತೊಡಿಕೊಂಡರು.
ನ್ಯಾಯಾಂಗ ಬಂಧನ: ರಾತ್ರಿ 7 ಗಂಟೆಗೆ ನ್ಯಾಯಾಧೀಶರ ಎದುರು ಹಾಜರುಪಡಿಸಿ ನಂತರ ಎಂಟು ಗಂಟೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಜೈಲಿನಲ್ಲಿ ವೈದ್ಯರು ಸಕಾಲದಲ್ಲಿ ಸ್ಪಂದಿಸಿ ಚಿಕಿತ್ಸೆ ನೀಡಿದ್ದರಿಂದ ನನ್ನ ಪ್ರಾಣ ಉಳಿಯಿತು ಎಂದ ಎಂದು ಘಟನೆಯನ್ನು ವಿವರಿಸಿದರು.
ನಾನು ಗ್ರಾಮದಲ್ಲಿ ಬಗರ್‌ಹುಕುಂ ಹೋರಾಟ ಹಾಗೂ ಬಿಜೆಪಿ ಕಾರ್ಯಕರ್ತನಾಗಿಯೂ ಗುರುತಿಸಿಕೊಂಡಿದ್ದೇನೆ, ಅರಣ್ಯ ಇಲಾಖೆ ಸಿಬ್ಬಂದಿ ನನ್ನ ಮೇಲೆ ಶ್ರೀಗಂಧ ಕಳುವು ಆರೋಪ ಹೊರಿಸುವುದಾಗಿಯೂ ಬೆದರಿಕೆ ಹಾಕಿದ್ದರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಬಿ.ಭಾನುಪ್ರಕಾಶ್, ಗಿರೀಶ್‌ಪಟೇಲ್, ಎಸ್.ಎನ್.ಚನ್ನಬಸಪ್ಪ ಇದ್ದರು.

ಅರಣ್ಯಹಕ್ಕು ಕಾಯ್ದೆ ಸಮರ್ಪಕ ಜಾರಿಗೆ ಆಗ್ರಹ
ಕ.ಪ್ರ.ವಾರ್ತೆ, ಸಾಗರ, ಜು.11 ಅರಣ್ಯಹಕ್ಕು ಕಾಯ್ದೆ ಸಮರ್ಪಕ ಜಾರಿಗೆ ಒತ್ತಾಯಿಸಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟದ ಜಿಲ್ಲಾ ಶಾಖೆ ವತಿಯಿಂದ ತಾಲೂಕಿನ ಅರಳಗೋಡು ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಅರಣ್ಯಹಕ್ಕು ಕಾಯ್ದೆ ಜಾರಿಗೆ ಬಂದು 7 ವರ್ಷ ಕಳೆದರೂ, ಜಿಲ್ಲೆಯಲ್ಲಿ ಬುಡಕಟ್ಟು ಜನರ ಅರಣ್ಯಹಕ್ಕು ಅನುಷ್ಠಾನವಾಗದೇ ಹಕ್ಕು ಉಲ್ಲಂಘನೆಯಾಗುತ್ತಿದೆ. 2012ರ ಅರಣ್ಯಹಕ್ಕು ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕಾಗಿ ವಿಶೇಷ ಗ್ರಾಮಸಭೆ ನಡೆಸಿ 2/3ರಷ್ಟು ಬುಡಕಟ್ಟು  ಜನರು ಇರುವಂತೆ ಅರಣ್ಯಹಕ್ಕು ಸಮಿತಿ ರಚಿಸಬೇಕು. ಗ್ರಾಮ ಅರಣ್ಯಹಕ್ಕು ಸಮಿತಿಗೆ ಬುಡಕಟ್ಟು ಜನರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಸಮಿತಿಯ ಸದಸ್ಯರಿಗೆ ಅರಣ್ಯಹಕ್ಕು ಕಾಯ್ದೆ ಕುರಿತು ತರಬೇತಿ ನೀಡುವುದು ಹಾಗೂ ಸಾರ್ವಜನಿಕರಿಗೆ ಅರಣ್ಯಹಕ್ಕು ಕಾಯ್ದೆ ಬಗ್ಗೆ ಅರಿವು ಮೂಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಹಾಯಧನ ಬಿಡುಗಡೆ: ಬೆಂಗಳೂರಿನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ  2011-12 ಮತ್ತು 2012-13ನೇ ಸಾಲಿನಲ್ಲಿ ಗಿರಿಜನ ಉಪಯೋಜನೆಯಡಿ ವಿಶೇಷ ಕೇಂದ್ರೀಯ ಸಹಾಯಧನ ಬಿಡುಗಡೆ ಮಾಡಿದೆ. ಅರಣ್ಯಹಕ್ಕು ಹಕ್ಕುಪತ್ರ ವಿತರಿಸಿದ ಕೂಡಲೇ ಫಲಾನುಭವಿಗಳಿಗೆ ಅನುದಾನ ಸಿಗುತ್ತದೆ. ಆದ್ದರಿಂದ ಅರಣ್ಯಹಕ್ಕು ಕಾಯ್ದೆಯ 13 ಹಕ್ಕುಗಳನ್ನು ಜಾರಿಗೆ ತರಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಹಿಂದೆ ಗ್ರಾಮ ಅರಣ್ಯಸಮಿತಿ ರಚಿಸಿ ಅರಣ್ಯಹಕ್ಕು ಯೋಜನೆಯಡಿ ಅರ್ಜಿ ಪಡೆಯಲಾಗಿತ್ತು. ಆದರೆ ಮಾಹಿತಿಯ ಕೊರತೆಯಿಂದ ಬುಡಕಟ್ಟು ಜನಾಂಗದ ಹಲವು ಕುಟುಂಬಗಳು ಅರ್ಜಿ ಸಲ್ಲಿಸಿಲ್ಲ. ಅಂತಹವರಿಂದ ತಕ್ಷಣ ಅರ್ಜಿ ಪಡೆದು 6 ತಿಂಗಳೊಳಗೆ ಹಕ್ಕುಪತ್ರ ನೀಡಬೇಕು. ಕಾಡಿನಲ್ಲಿ ಸಿಗುವ ಕಿರು ಅರಣ್ಯ ಉತ್ಪನ್ನ ತೆಗೆಯಲು ಬುಡಕಟ್ಟು ಜನರಿಗೆ ಅಧಿಕಾರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಒಕ್ಕೂಟದ ಜಿಲ್ಲಾಶಾಖೆ ಅಧ್ಯಕ್ಷ ರಾಮಣ್ಣ, ಪ್ರಧಾನ ಕಾರ್ಯದರ್ಶಿ ಶ್ರೀಧರ್, ನಾಗರತ್ನ ಜಡ್ಡಿನಮನೆ, ಈಶ್ವರ ಮುಪ್ಪಾನೆ, ನಾರಾಯಣ, ರತ್ನಾ ಕುಡುಗುಂಜಿ, ಪ್ರಕಾಶ್, ರಾಘವೇಂದ್ರ, ತಿಮ್ಮ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement