16ರಿಂದ 47ನೇ ಚೆಸ್, ಕೇರಂ, ವಾಲಿಬಾಲ್ ಪಂದ್ಯಾವಳಿ
ಕ.ಪ್ರ.ವಾರ್ತೆ , ಶಿವಮೊಗ್ಗ , ಜು.13
ಎಲ್‌ಐಸಿ (ಭಾರತೀಯ ಜೀವ ವಿಮಾ ನಿಗಮ) ದಕ್ಷಿಣ ಮಧ್ಯ ವಲಯದ 47ನೇ ಚೆಸ್, ಕೇರಂ ಮತ್ತು ವಾಲಿಬಾಲ್ ಪಂದ್ಯಾವಳಿಯು ನಗರದಲ್ಲಿ ಜು.16ರಿಂದ 18ರವರೆಗೆ ನಡೆಯುವುದು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಎಲ್‌ಐಸಿ ಶಿವಮೊಗ್ಗ ವಿಭಾಗದ ಕ್ರೀಡಾ ಕಾರ್ಯದರ್ಶಿ ಎಸ್.ಕೆ. ರವಿ, ಪಂದ್ಯಾವಳಿಯಲ್ಲಿ ಏಕ ಕಾಲಕ್ಕೆ ಚೆಸ್, ಕೇರಂ ಹಾಗೂ ವಾಲಿಬಾಲ್ ಪಂದ್ಯ ಏರ್ಪಡಿಸುವ ಅಪರೂಪದ ಅವಕಾಶ ನಮ್ಮ ವಿಭಾಗಕ್ಕೆ ಲಭ್ಯವಾಗಿದೆ ಎಂದರು.
ಕರ್ನಾಟಕ ಹಾಗೂ ಆಂಧ್ರದ 17 ವಿಭಾಗಗಳಿಂದ ಸುಮಾರು 200 ಮಹಿಳಾ ಮತ್ತು ಪುರುಷ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಚೆಸ್ ಪಂದ್ಯ ಡಿಸಿಸಿ ಬ್ಯಾಂಕ್ ಸಭಾಂಗಣ, ಕೇರಂ ಪಂದ್ಯ ಸರಕಾರಿ ನೌಕರರ ಸಂಘದ ಭವನ ಹಾಗೂ ವಾಲಿಬಾಲ್ ಪಂದ್ಯ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವುದು ಎಂದು ವಿವರಿಸಿದರು.
15 ವಾಲಿಬಾಲ್ ತಂಡ ಸ್ಪರ್ಧೆ: ಅನೇಕ ಅಂತಾರಾಷ್ಟ್ರೀಯ ಆಟಗಾರರೂ ಸಹ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೇರಂ ವಿಭಾಗದಲ್ಲಿ 2004ರ ವಿಶ್ವ ಚಾಂಪಿಯನ್ ಎಸ್. ಅಪೂರ್ವ ಹಾಗೂ ಅನೇಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪದಕ ಗಳಿಸಿರುವ ಪಿ. ನಿರ್ಮಲ ಭಾಗವಹಿಸುತ್ತಿದ್ದಾರೆ. ವಾಲಿಬಾಲ್ ವಿಭಾಗದಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ಎಂ.ಎನ್. ವಿಕ್ರಂ ಮತ್ತು ಶೇಖರ್ ಪಾಲ್ಗೊಳ್ಳುತ್ತಿದ್ದಾರೆ. ಇಲ್ಲಿ ವಿಜೇತರಾದ ತಂಡ ಹಾಗೂ ಆಟಗಾರರು ರಾಷ್ಟ್ರಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆಯುತ್ತಾರೆ ಎಂದು ವಿವರಿಸಿದ ರವಿ, 15 ವಾಲಿಬಾಲ್ ತಂಡಗಳು ಸ್ಪರ್ಧಿಸುತ್ತಿವೆ ಎಂದು ತಿಳಿಸಿದರು.
ವಿಭಾಗದ ಹಿರಿಯ ವಿಭಾಗಾಧಿಕಾರಿ ಎಂ.ಬಾಲಯೋಗಿ ಮಾತನಾಡಿ, ಈ ವರ್ಷಕ್ಕೆ ವಿಭಾಗಕ್ಕೆ 3 ಲಕ್ಷ ಪಾಲಿಸಿ ಹಾಗೂ 2 ಕೋಟಿ ರುಪಾಯಿ ಮೊದಲ ಪ್ರೀಮಿಯಂ ಸಂಗ್ರಹದ ಗುರಿ ನೀಡಲಾಗಿತ್ತು. ಇದರಲ್ಲಿ ಈ ವರೆಗೆ 30 ಲಕ್ಷ ಪಾಲಿಸಿ ಮಾಡಲಾಗಿದೆ. ಹೊಸದಾಗಿ 3 ಸಾವಿರ ಪ್ರತಿನಿಧಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದರು.
ಗ್ರಾಮೀಣ ಪ್ರತಿನಿಧಿಗಳಿಗೆ ಕಮಿಷನ್ ಹೊರತುಪಡಿಸಿ ಸ್ಟೈಫಂಡ್ ನೀಡಲಾಗುತ್ತದೆ. ಜೋಗ, ಶಿರಾಳಕೊಪ್ಪದಲ್ಲಿ ಮಿನಿ ಕಚೇರಿಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಬಿ.ಪಿ. ರವಿ, ನಿಗಮದ ಅಧಿಕಾರಿ ಶೇಷಾದ್ರಿ ಗೋಷ್ಠಿಯಲ್ಲಿದ್ದರು.