ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕಕ್ಕೆ ಆಗ್ರಹಿಸಿ ಮನವಿ
ಕ.ಪ್ರ.ವಾರ್ತೆ , ಸಾಗರ , ಜು.13
ಆನಂದಪುರಂ ಹೋಬಳಿ ಕೇಂದ್ರದಲ್ಲಿ ಪದವಿ ಕಾಲೇಜು ಮತ್ತು ಬಾಲಕಿಯರ ಪದವಿಪೂರ್ವ ಕಾಲೇಜು ಸ್ಥಾಪಿಸಬೇಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯ ಸಿಬ್ಬಂದಿ ನೇಮಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖ್ಯಮಂತ್ರಿಗಳಿಗೆ ಹಾಗೂ ಆರೋಗ್ಯ ಸಚಿವರಿಗೆ ಮನವಿ ಮಾಡಿದೆ.
ಸಾಗರ ತಾಲೂಕಿನಲ್ಲಿ ಆನಂದಪುರಂ ಹೋಬಳಿ ಪ್ರಮುಖ ಕೇಂದ್ರವಾಗಿದ್ದು ಸುತ್ತಮುತ್ತಲು ಅನೇಕ ಹಳ್ಳಿಗಳು ಈ ಕೇಂದ್ರದ ವ್ಯಾಪ್ತಿಗೆ ಒಳಪಡುತ್ತದೆ. ಆನಂದಪುರಂ ಸುತ್ತಮುತ್ತಲಿನ ವಿದ್ಯಾರ್ಥಿಗಳು ಪದವಿ ಕಾಲೇಜಿಗೆ ಸಾಗರ ಅಥವಾ ಶಿವಮೊಗ್ಗಕ್ಕೆ ಹೋಗುವ ಸ್ಥಿತಿ ಇದೆ. ಬಡವರು, ದಲಿತರು, ಹಿಂದುಳಿದ ಹಾಗೂ ಕೃಷಿಕೂಲಿಕಾರ್ಮಿಕರ ಮಕ್ಕಳೆ ಹೋಬಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು, ಕಾಲೇಜು ವಿದ್ಯಾಭ್ಯಾಸಕ್ಕೆ ಮಕ್ಕಳನ್ನು ಸಾಗರ ಅಥವಾ ಶಿವಮೊಗ್ಗಕ್ಕೆ ಕಳಿಸಲು ಪೋಷಕರಿಗೆ ಆರ್ಥಿಕ ಸಮಸ್ಯೆ ಉಂಟಾಗುತ್ತಿದೆ.
ಆನಂದಪುರಂನಲ್ಲಿ ಸಂಯುಕ್ತ ಪದವಿ ಕಾಲೇಜು ಹಾಗೂ ಬಾಲಕಿಯರಿಗಾಗಿ ಪದವಿಪೂರ್ವ ಕಾಲೇಜು ಸ್ಥಾಪಿಸಬೇಕೆಂದು ಸಮಿತಿ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದೆ. ಆದರೆ ಯಾವುದೆ ಫಲ ಸಿಕ್ಕಿಲ್ಲ. ಕೂಡಲೆ ಆನಂದಪುರಂನಲ್ಲಿ ಉದ್ದೇಶಿತ ಕಾಲೇಜು ಸ್ಥಾಪಿಸಬೇಕು.
ರೋಗಿಗಳಿಗೆ ಚಿಕಿತ್ಸೆ ನೀಡಲು ಖಾಯಂ ವೈದ್ಯರು ಆಸ್ಪತ್ರೆಯಲ್ಲಿ ಇರುವುದಿಲ್ಲ. ಗ್ರಾಮಾಂತರ ಪ್ರದೇಶಗಳಿಂದ ಬರುವ ಗರ್ಭಿಣಿಯರು ಚಿಕಿತ್ಸೆಗಾಗಿ ಸಾಗರ ಅಥವಾ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಿಸಬೇಕು ಮತ್ತು ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು. ಇಲ್ಲವಾದಲ್ಲಿ ಸಮಿತಿಯಿಂದ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಸಮಿತಿಯ ರೇವಪ್ಪ ಕೆ. ಹೊಸಕೊಪ್ಪ, ಶೇಖರ ಬಾಳಗೋಡು, ಭರ್ಮಪ್ಪ, ಕಿರಣಕುಮಾರ್ ಎಚ್ಚರಿಕೆ ನೀಡಿದ್ದಾರೆ.