ಶಿಕ್ಷಣ ಮೇಳಕ್ಕೆ ನಿರೀಕ್ಷೆ ಮೀರಿದ ಸ್ಪಂದನೆ
ಕ.ಪ್ರ.ವಾರ್ತೆ , ಶಿವಮೊಗ್ಗ , ಜು.13
ಕನ್ನಡಪ್ರಭ- ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಶಿವಮೊಗ್ಗದಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಣ ಮೇಳಕ್ಕೆ ನಿರೀಕ್ಷೆ ಮೀರಿದ ಸ್ಪಂದನೆ ದೊರೆಯಿತು.
ಸಿಕ್ಸ್ರೀವ್ಸ್ ಸಂಸ್ಥೆ ಸಹಯೋಗದಲ್ಲಿ ಇಲ್ಲಿನ ಬಾಲರಾಜ ಅರಸ್ ರಸ್ತೆಯ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜನೆಗೊಂಡಿದ್ದ ಮೇಳಕ್ಕೆ ಬೆಳಿಗ್ಗೆ 9.30ರಿಂದಲೇ ವಿದ್ಯಾರ್ಥಿ ಸಮೂಹ ಆಗಮಿಸಲಾರಂಭಿಸಿತು. ಒಂದು ಹಂತದಲ್ಲಿ ಸಭಾಂಗಣ ಕಿಕ್ಕಿರಿದು ತುಂಬಿಹೋಯಿತು.
ಪಿಯುಸಿ ನಂತರ ಮುಂದೇನು ಎಂಬ ವಿಷಯವನ್ನಿಟ್ಟುಕೊಂಡು ಆಯೋಜನೆಗೊಂಡ ಮೇಳದಲ್ಲಿ ಎಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಪ್ರವೇಶ ಪ್ರಕ್ರಿಯೆ, ವೃತ್ತಿ ಶಿಕ್ಷಣ ಹೊರತಾಗಿನ ಬೇರೆ ಬೇರೆ ಅವಕಾಶಗಳ ಕುರಿತು ತಿಳಿಸುವ ಕೊಡುವ ಪ್ರಯತ್ನ ಅಲ್ಲಾಯಿತು.
ಬೆಂಗಳೂರು ಸೇರಿದಂತೆ ಬೇರೆ ಬೇರೆ ಊರುಗಳಿಂದ ಆಗಮಿಸಿದ್ದ ಪ್ರಮುಖ ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿ ಲಭ್ಯವಿರುವ ಶಿಕ್ಷಣ ಸೌಲಭ್ಯಗಳನ್ನು ಆಸಕ್ತ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. ಹಾಗೆಯೇ ಔದ್ಯೋಗಿಕ ಅವಕಾಶಗಳ ಕುರಿತು ತಿಳಿಸಿಕೊಡಲಾಯಿತು.
ಸಭಾಂಗಣದ ಒಂದು ಭಾಗದಲ್ಲಿ ಕರಿಯರ್ ಕೌನ್ಸೆಲಿಂಗ್ ನಡೆಯುತ್ತಿದ್ದರೆ ಮತ್ತೊಂದು ಕಡೆ ವಿದ್ಯಾರ್ಥಿಗಳ ತಂಡ ಹಾಗೂ ಪೋಷಕರು ಶಿಕ್ಷಣ ಸಂಸ್ಥೆಗಳ ಮಳಿಗೆಗಳಿಗೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಳ್ಳುತ್ತಿದ್ದರು. ಶಿವಮೊಗ್ಗ ಸೇರಿದಂತೆ ಆಯನೂರು, ಭದ್ರಾವತಿ ಸುತ್ತಮುತ್ತಲ ವಿವಿಧ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು, ಮಾಹಿತಿಯನ್ನು ಪಡೆದುಕೊಂಡರು. ತಮ್ಮ ಗೊಂದಲಗಳನ್ನು ಖುದ್ದಾಗಿ ತಜ್ಞರೊಂದಿಗೆ ಚರ್ಚಿಸಿ ಪರಿಹರಿಸಿಕೊಂಡರು.
ಜರ್ನಲಿಸಂ, ಮೀಡಿಯಾ ಮ್ಯಾನೇಜ್ಮೆಂಟ್, ಅನಿಮೇಷನ್, ರಿಸರ್ಚ್, ಫ್ಯಾಷನ್ ಡಿಸೈನಿಂಗ್, ಮರೈನ್ ಎಂಜಿನಿಯರಿಂಗ್, ಜೆಓಸಿ, ಏರೋಸ್ಪೇಸ್ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ನೇರವಾಗಿ ಮಾತಿಗಳಿದು ತಮ್ಮಲ್ಲಿರುವ ಗೊಂದಲವನ್ನು ಪರಿಹರ ಮಾಡಿಕೊಂಡರು.
ಶೈಕ್ಷಣಿಕ ಸಾಲ: ವಿದ್ಯಾರ್ಥಿ ಮತ್ತು ಪೋಷಕರಲ್ಲಿರುವ ಶೈಕ್ಷಣಿಕ ಸಾಲದ ಬಗ್ಗೆ ಮಾಹಿತಿ ನೀಡಲು ವಿಜಯ ಬ್ಯಾಂಕ್, ಕೆನರಾ ಬ್ಯಾಂಕ್ನ ಅಧಿಕಾರಿಗಳ ತಂಡ ಹುರುಪಿನಿಂದ ಪಾಲ್ಗೊಂಡಿದ್ದರು. ಅವರ ಉತ್ಸಾಹಕ್ಕೆ ತಕ್ಕುದಾದಂತೆ ವಿದ್ಯಾರ್ಥಿಗಳೂ ಸಹ ಬ್ಯಾಂಕರ್ಗಳಿಂದ ಬಗೆ ಬಗೆಯ ಮಾಹಿತಿಯನ್ನು ಪಡೆದುಕೊಂಡರು.
ಸಾಮೂಹಿಕ ಕರಿಯರ್ ಗೈಡೆನ್ಸ್ ಜೊತೆಗೆ ಮುಖಾಮುಖಿ (ಒನ್ಟು ಒನ್) ಕೌನ್ಸೆಲಿಂಗ್ ನಡೆಸಲಾಯಿತು. ಪ್ರಮುಖವಾಗಿ ಮ್ಯಾನೇಜ್ಮೆಂಟ್, ಅನಿಮೇಶನ್, ಫ್ಯಾಷನ್ ಡಿಸೈನ್ ಕೋರ್ಸ್ಗಳ ಬಗ್ಗೆ ಗ್ರಾಮೀಣ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡಿದ್ದು ವಿಶೇಷವಾಗಿತ್ತು.
ಗಮನ ಸೆಳೆದ ಪ್ರದರ್ಶನ: ಈ ಶಿಕ್ಷಣ ಮೇಳದ ಮತ್ತೊಂದು ವಿಶೇಷವೆಂದರೆ, ಹಿರಿಯ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಂದನ್ ಅವರು ಸೆರೆ ಹಿಡಿದಿರುವ ಅಪರೂಪದ ಛಾಯಾಚಿತ್ರದ ಪ್ರದರ್ಶನಗಳು ಮನಸೂರೆಗೊಂಡಿತು. ಮೇಳಕ್ಕೆ ಆಗಮಿಸಿದ್ದ ಉತ್ಸಾಹಿ ವಿದ್ಯಾರ್ಥಿಗಳು ಛಾಯಾಚಿತ್ರಗಳನ್ನು ವೀಕ್ಷಿಸಿ ಮನದುಂಬಿಕೊಂಡರು.
ಅದೇ ರೀತಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಮಳಿಗೆಯಲ್ಲಿ ಪ್ರದರ್ಶಿಸಲಾದ ಪತ್ರಿಕೆಯ ವಿವಿದ ಮಜಲುಗಳ ಪ್ರದರ್ಶನ ಗಮನ ಸೆಳೆಯಿತು. ಪತ್ರಿಕೆ ಆರಂಭವಾದಾಗಿನಿಂದ ಇಲ್ಲಿಯವರೆಗಿನ ವಿವಿಧ ಪ್ರಮುಖ ಘಟನಾವಳಿಗಳು ವರದಿ ಪತ್ರಿಕೆಯಲ್ಲಿ ಹೇಗೆ ಮೂಡಿಬಂದಿತ್ತು ಎಂಬುದನ್ನು ಅಲ್ಲಿ ಪ್ರಕಟಿಸಲಾಗಿತ್ತು.
ಕನ್ನಡಪ್ರಭ, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಸಿಬ್ಬಂದಿ ವರ್ಗ ಹಾಗೂ ಸಿಕ್ಸ್ರೀವ್ಸ್ ಬಳಗದ ಸದಸ್ಯರು ಮೇಳಕ್ಕಾಗಮಿಸಿದ ವಿದ್ಯಾರ್ಥಿಗಳು, ಪೋಷಕರಿಗೆ ಮಾರ್ಗದರ್ಶನ ಮಾಡಿದರು.